ಕಾರ್ಕಳ : ಕರ್ನಾಟಕ ರಾಜ್ಯ ಸರಕಾರ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಘೋಷಿಸಿದೆ. ಆದರೆ ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆದಿದ್ದರೂ, ಬಹುತೇಕ ಕಾಲೇಜುಗಳಲ್ಲಿ ಇನ್ನೂ ಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಪರಿಣಾಮಕಾರಿ ಬೋಧನೆಗೆ ಸಮಸ್ಯೆಯಾಗುತ್ತಿದೆ.
2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ನೀಡುವುದಾಗಿ ಘೋಷಿಸಿದ್ದರು. ಈ ಯೋಜನೆಯಡಿಯಲ್ಲಿ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ಶೂ, ಸಾಕ್ಸ್ ಮತ್ತು ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು, ಈ ವರ್ಷ, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಒದಗಿಸಲು ಯೋಜನೆಯನ್ನು ವಿಸ್ತರಿಸಿದೆ. ರಾಜ್ಯದಲ್ಲಿ 1,319 ಸರಕಾರಿ ಪದವಿ ಪೂರ್ವ ಕಾಲೇಜುಗಳು, 815 ಅನುದಾನಿತ ಪದವಿ ಪೂರ್ವ ಕಾಲೇಜುಗಳಿದ್ದು, ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 34 ವಿಷಯಗಳನ್ನು ಬೋಧಿಸಲಾಗುತ್ತದೆ.
ಮೇ 25ರಿಂದ ತರಗತಿಗಳು ಆರಂಭವಾಗಿದ್ದು, ಇಲಾಖಾ ಮಾರ್ಗಸೂಚಿಯಂತೆ ಆಯಾ ತಿಂಗಳ ಪಠ್ಯವನ್ನು ಅದೇ ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಆದರೆ ಇನ್ನೂ ಪಠ್ಯಪುಸ್ತಕಗಳು ದೊರೆಯದೆ ಉಪನ್ಯಾಸಕರು ಬೋಧನೆ ನಡೆಸುವುದು ಕಷ್ಟವಾಗಿದೆ. ಹೆಚ್ಚಿನ ಕಾಲೇಜುಗಳಲ್ಲಿ ನೋಟ್ಸ್ ಹಾಗೂ ಡಿಜಿಟಲ್ ಮಾಹಿತಿಯ ಆಧಾರದಲ್ಲಿ ಪಾಠ ಮಾಡುತ್ತಿದ್ದಾರೆ. ಇದರಿಂದ ಪಾಠಗಳು ನಡೆಯುತ್ತಿದ್ದರೂ ಪಠ್ಯ ಪುಸ್ತಕಗಳಿಲ್ಲದೆ ಪರಿಣಾಮಕಾರಿ ಬೋಧನೆಗೆ ಸಮಸ್ಯೆಯಾಗುತ್ತಿದೆ.

ಖಾಸಗಿ ಶಿಕ್ಷಣ ಸಂಸ್ಥೆಯಲ್ಲೂ ಸಮಸ್ಯೆ
ಈ ವರ್ಷ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಇಲಾಖೆಯೇ ಪುಸ್ತಕ ವಿತರಣೆ ಮಾಡುತ್ತದೆ ಹೇಳಿದ್ದರಿಂದ ಕಾಲೇಜುಗಳು ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪುಸ್ತಕದ ಹಣವನ್ನು ಈಗಾಗಲೇ ಪಾವತಿ ಮಾಡಿದೆ. ಆದರೆ ಪುಸ್ತಕಗಳು ದೊರೆತಿಲ್ಲ.
ಮುದ್ರಣ ಕಾರ್ಯದಲ್ಲಿನ ವಿಳಂಬ ಮತ್ತು ಇಲಾಖೆ ಹಾಗೂ ಕರ್ನಾಟಕ ಪಠ್ಯಪುಸ್ತಕ ಸಂಘದ ನಡುವಿನ ಸಮನ್ವಯದ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.







































