ಕಂದನ ಎದುರೇ ಪತ್ನಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ – ಅಜ್ಜಿಯ ಆಸರೆಯಲ್ಲಿ ಅನಾಥ ಮಗು

ಕಾರ್ಕಳ : ತನ್ನ ಕಂದನ ಎದುರೇ ಪತ್ನಿಯನ್ನು ಕೊಚ್ಚಿಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಲಂಕಾರಿನಲ್ಲಿ ನಡೆದಿದ್ದು, ಇದೀಗ ಅವರ ಪುತ್ರಿ ಧ್ರುವಿ ಅನಾಥಳಾಗಿದ್ದಾಳೆ. ಆಲಂಕಾರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕಾರ್ಕಳ ತಾಲೂಕು ಬಜಗೋಳಿ ಮೂಲದ ದಿನೇಶ್ ಪೂಜಾರಿ (45) ಆತನ ಪತ್ನಿ ಸಂಗೀತಾ(40) ಎಂಬವರನ್ನು ತನ್ನ ಎರಡು ವರ್ಷದ ಮಗು ಧ್ರುವಿ ಎದುರೇ ಭರ್ಬರವಾಗಿ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದು. ಮಗು ಈಗ ಅನಾಥವಾಗಿದೆ.

ಶನಿವಾರದಿಂದ ಮಗುವಿಗೆ ತಾಯಿಯ ಎದೆಹಾಲು ಇಲ್ಲ. ಮಗು ಆಗಾಗ ಅಜ್ಜಿ ಬಳಿ ತಾಯಿಯನ್ನು ಕೇಳುತ್ತಾ, ಹುಡುಕುತ್ತಾ ಆಕ್ರಂದನ ವ್ಯಕ್ತಪಡಿಸುತ್ತಿದೆ. ಮೃತ ಶರೀರ ಮನೆಯೊಳಗಿದ್ದ ವೇಳೆ ತನ್ನ ತಂದೆ ತಾಯಿ ಮಲಗಿದ್ದಾರೆ. ಅಲ್ಲಿಗೆ ಹೋಗುತ್ತೇನೆ ಎಂದು ತೊದಲುತ್ತಿರುವುದು ಅಲ್ಲಿದ್ದವರ ಮನಕಲಕುವಂತಿತ್ತು. ಸದ್ಯ ಮಗು ಸಂಗೀತಾಳ ತವರು ಮನೆಯಲ್ಲಿದ್ದು ಅಜ್ಜಿಯ ಆರೈಕೆಯಲ್ಲಿದೆ.

ತಡವಾಯಿತು ಮರಣೋತ್ತರ ಪರೀಕ್ಷೆ
ಶನಿವಾರ ಮಧ್ಯಾಹ್ನದ ವೇಳೆಗೆ ದಂಪತಿ ಸಾವಿನ ಬಗ್ಗೆ ಕುಟುಂಬದವರಿಗೆ ಮಾಹಿತಿ ದೊರೆತರೂ ದಿನೇಶನ ಕಡೆಯವರು ಸಕಾಲದಲ್ಲಿ ಘಟನಾ ಸ್ಥಳಕ್ಕೆ ಆಗಮಿಸದೇ ಇದ್ದುದರಿಂದ ಮಧ್ಯರಾತ್ರಿಯವರೆಗೆ ಮೃತ ದೇಹಗಳ ಮಹಜರು ಕಾರ್ಯ ಪೊಲೀಸರು ನಡೆಸಬೇಕಾಯಿತು. ದಿನೇಶ್‌ನ ಸಹೋದರರು ಬಜಗೋಳಿಯಿಂದ ರಾತ್ರಿ ಆಗಮಿಸಿದ ಕಾರಣ ತಡ ರಾತ್ರಿ ಶವ ಮಹಜರು ನಡೆಸಿ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಭಾನುವಾರ ಅಪರಾಹ್ನ ಮರಣೋತ್ತರ ಪರೀಕ್ಷೆಗಳು ನಡೆದು ಶವವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು. ದಂಪತಿಗಳ ಶವವನ್ನು ಒಟ್ಟಿಗೆ ಒಂದೇ ಕಡೆ ಅಂತ್ಯ ಸಂಸ್ಕಾರ ಮಾಡಬೇಕೆಂದಿರುವ ಕಾರಣ ಮೃತ ಸಂಗೀತಾಳ ತವರು ಮನೆಯವರ ಬೇಡಿಕೆಯಂತೆ ಎರಡು ಶವಗಳನ್ನು ಆಕೆಯ ತವರು ಮನೆ ಸಿದ್ದಕಟ್ಟೆಗೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಕಾರಣವಿಲ್ಲ
ಸಂಗೀತ 13 ವರ್ಷಗಳಿಂದ ಪತಿ ನೀಡುತ್ತಿದ್ದ ಹಿಂಸೆ ಸಹಿಸಿಕೊಂಡು ಜೀವನ ಸಾಗಿಸಿದ್ದಾಳೆ. ಅವಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಥವಾ ಗಂಡನನ್ನು ತೊರೆದು ಬಾಳುವ ಮಹಿಳೆಯಲ್ಲ. ಗಟ್ಟಿ ಮನಸ್ಸಿನ ಮಹಿಳೆ. ಎಷ್ಟೇ ಕಷ್ಟ ಬಂದರೂ ಗಂಡನ ಜೊತೆಗೆ ಇರುತ್ತೇನೆ. ನಮ್ಮ ಕುಟುಂಬದಲ್ಲಿ ಯಾರು ಗಂಡನನ್ನು ಬಿಟ್ಟವರಿಲ್ಲ ಎಂದು ಹೇಳುತ್ತಿದ್ದಳು. ದಿನೇಶನೇ ಕೊಲೆ ಮಾಡಿದ್ದಾನೆ ಅವಳಿಗೆ ಆತನಿಂದ ತಪ್ಪಿಸಿಕೊಳ್ಳಲು ಆಗಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಈ ಊರಿಗೆ ಬಂದಿದ್ದಳು ಎಂದು ಸಂಗೀತಾಳ ದೊಡ್ಡಮ್ಮನ ಮಗಳು ಸುಮಲತಾ ಹೇಳುತ್ತಾರೆ.
ಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದರೂ ಗಂಡ ಹೆಂಡತಿಯ ಮಧ್ಯೆ ಬಂಗಾರ ಹಾಗೂ ಹಣಕಾಸಿನ ವಿಚಾರದಲ್ಲಿ ತಗಾದೆ ಉಂಟಾಗಿದೆ. ಇದೇ ವಿಚಾರದಲ್ಲಿ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.

ದಿನೇಶ್‌ ಹಾಗೂ ಸಂಗೀತಾ ಕಡಬ ತಾಲೂಕಿನ ಆಲಂಕಾರಿನಲ್ಲಿ ಹೊಟೇಲ್‌ ವ್ಯವಹಾರ ನಡೆಸುತ್ತಿದ್ದರು. ದಿನೇಶನಿಗೆ ವಿಪರೀತ ಮದ್ಯದ ಚಟವಿದ್ದು, ತನ್ನ ಕುಟುಂಬದಿಂದಲೂ ದೂರವಾಗಿದ್ದ ಎನ್ನಲಾಗಿದೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಈತನಿಗೆ ಗಾಂಜಾ ಸೇವನೆಯ ಚಟ ಕೂಡಾ ಇತ್ತು ಎನ್ನುವ ವಿಚಾರ ಆಲಂಕಾರು ಪರಿಸರದಲ್ಲಿ ಕೇಳಿ ಬರುತ್ತಿದೆ. ಶನಿವಾರ ಬೆಳಿಗ್ಗೆ ಆಲಂಕಾರು ಪೇಟೆಯ ಬಾರೊಂದರಲ್ಲಿ ಮದ್ಯ ಸೇವನೆ ಮಾಡಿ ಹೋಗಿದ್ದ ಎಂದು ಹೇಳಲಾಗಿದೆ. ಕೊಲೆ, ಆತ್ಮಹತ್ಯೆ ನಡೆದ ಸ್ಥಳದಲ್ಲಿ ಡೆತ್ ನೋಟ್ ಕೂಡಾ ಸಿಕ್ಕಿದೆ ಅದರಲ್ಲಿ ಗಂಡ ಹೆಂಡತಿ ಮಧ್ಯೆ ಇರುವ ವೈಮನಸ್ಸಿಗೆ ಕಾರಣ ತಿಳಿಸಲಾಗಿತ್ತು ಎಂದು ಹೇಳಲಾಗಿದೆ. ಪೊಲೀಸರ ತನಿಖೆಯಿಂದ ಮಾತ್ರ ಘಟನೆಯ ರಹಸ್ಯ ಹೊರಬರಬೇಕಿದೆ.





























error: Content is protected !!
Scroll to Top