ಪ್ರಗತಿ ಪರಿಶೀಲನಾ ಸಭೆ ನಡೆಸಿ – ಶಾಸಕರಿಗೆ ಕೆಡಿಪಿ ನಾಮನಿರ್ದೇಶಿತ ಸದಸ್ಯರ ಆಗ್ರಹ

ಕಾರ್ಕಳ : ರಾಜ್ಯ ಸರಕಾರ ಕಾರ್ಕಳ ತಾಲೂಕು ಕೆಡಿಪಿ ಸದಸ್ಯರ ನೇಮಕಾತಿ ಮಾಡಿ ಹಲವು ತಿಂಗಳುಗಳೇ ಕಳೆದಿದ್ದರೂ ಸಮಿತಿಯ ಅಧ್ಯಕ್ಷರಾದ ಶಾಸಕರು ಸಭೆಯನ್ನು ಕರೆದಿರುವುದಿಲ್ಲ. ಶಾಸಕರು ತಕ್ಷಣ ಕೆಡಿಪಿ ಸಭೆಯನ್ನು ಕರೆದು‌ ಕ್ಷೇತ್ರದ ಪ್ರಗತಿಯ‌ ಬಗ್ಗೆ ಚರ್ಚೆ ನಡೆಸಬೇಕೆಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ಎಂ. ಪಿ ಮೊಯಿದ್ದಿನಬ್ಬಾ ಆಗ್ರಹಿಸಿದರು.

ಅವರು ಜೂ. 22ರಂದು ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ ಅವರು, ರಾಜ್ಯ ಸರಕಾರ ವಿವಿಧ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳನ್ನು ಸುಮಾರು 33 ಕ್ಕೂ ಹೆಚ್ಚು ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ. ಆ ಕಾರ್ಯಕ್ರಮ ಯೋಜನೆಗಳ ಪ್ರಗತಿಯನ್ನು ಸಮಯಾನುಸಾರ ಪರಿಶೀಲಿಸಿ ಪರಿಣಾಮಕಾರಿಯಾಗಿ ಅನುಷ್ಠಾ ಮಾಡುವಂತಾಗಲು ಪ್ರಗತಿ ಪರಿಶೀಲನಾ ಸಭೆ ತೀರಾ ಅಗತ್ಯ. ಆದರೆ, ಕಾರ್ಕಳ ಶಾಸಕರು ಕೆಡಿಪಿ ಸಮಿತಿ ಅಧ್ಯಕ್ಷರಾಗಿ ಸಭೆ ಕರೆಯುತ್ತಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕೇವಲ ಶಾಸಕರೊಬ್ಬರೇ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಸರಕಾರದಿಂದ ನಾಮ ನಿರ್ದೇಶಿತರಾದ ಸದಸ್ಯರ ಕಡೆಗಣನೆ ಆಗಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದ್ದು ಸರಕಾರದ ಯೋಜನೆ ಕಾರ್ಯಕ್ರಮಗಳು ನನ್ನ ಇಚ್ಛೆಗೆ ಅನುಗುಣವಾಗಿ ನಡೆಯಬೇಕು ಎಂಬ ದೋರಣೆ ಸರಿಯಲ್ಲ. ಸರಕಾರದಿಂದ ನಾಮನಿರ್ದೇಶನಗೊಂಡವರಿಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇದೆ ಎಂಬುವುದನ್ನು ಶಾಸಕರ ಗಮನಕ್ಕೆ ತರ ಬಯಸುತ್ತೇವೆ ಎಂದರು.

ಸರಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಿಲ್ಲದಿರುವ ಕುರಿತು ಅನೇಕ ಬಾರಿ ದೂರುಗಳು ಬಂದಿದ್ದವು. ಒಂದು ವೇಳೆ ಕೆಡಿಪಿ ಸಭೆ‌ ನಡೆಸಿದ್ದರೆ ಈ ಬಗ್ಗೆ ಚರ್ಚೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬಹುದಿತ್ತು. ಕೆಡಿಪಿ ಸಭೆ ಕುರಿತು ಶಾಸಕರು ನಿರ್ಲಕ್ಷ್ಯ ವಹಿಸಿದ್ದರು. ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷೀ ಅವರು ಸರಕಾರಿ ಆಸ್ಪತ್ರೆಗೆ ಭೇಟಿ‌ ನೀಡಿದ ಒಂದೇ ದಿನದಲ್ಲಿ ವೈದ್ಯರ ನೇಮಕವಾಗುತ್ತದೆಯಾದರೆ ಕಳೆದ 22 ವರ್ಷಗಳಿಂದ ಶಾಸಕರಾಗಿ ಸಚಿವರಾಗಿ ಅಧಿಕಾರ ನಡೆಸುವ ಶಾಸಕರಿಂದ ಇದು ಯಾಕೆ ಸಾದ್ಯವಾಗಲಿಲ್ಲ ? ಎಂದು ಮೊಯಿದ್ದಿನಬ್ಬಾ ಪ್ರಶ್ನಿಸಿದರು. ಕ್ಷೇತ್ರದ ಜನರ ಹಿತದೃಷ್ಟಿಯಿಂದ ತಕ್ಷಣ ಕೆಡಿಪಿ ಸಭೆ ಕರೆಯುವಂತೆ ಆಗ್ರಹಿಸುತ್ತೇವೆ ಎಂದರು. ಸಭೆಯಲ್ಲಿ ಕೆಡಿಪಿ ಸದಸ್ಯರಾದ ರುಕ್ಮಯ ಶೆಟ್ಟಿಗಾರ್ ಕುಕ್ಕುಂದೂರು, ಸಂತೋಷ್‌ ಪೂಜಾರಿ ಮಾಳ, ಅಮಿತಾ ಶೆಟ್ಟಿ ಸಾಣೂರು ಉಪಸ್ಥಿತರಿದ್ದರು.























error: Content is protected !!
Scroll to Top