ಕಸ ಗುಡಿಸುವವರೇ ಸ್ವಚ್ಛತಾ ಸೇನಾನಿಗಳು

ಒಂದು ನಾಗರಿಕ ಸಮಾಜದ ಜೀವನಾಡಿ ಎನಿಸಿರುವ ನಗರ ಮತ್ತು ಮಹಾನಗರಗಳು ಇಂದು ಕಣ್ಣಿಗೆ ತಂಪು ನೀಡುವಂತೆ ಸದಾ ಸುಂದರವಾಗಿ, ಸ್ವಚ್ಛವಾಗಿ ಕಂಗೊಳಿಸುತ್ತಿವೆ ಎಂದರೆ, ಅದರ ಸಂಪೂರ್ಣ ಕೀರ್ತಿ ಸಲ್ಲಬೇಕಿರುವುದು ನಮ್ಮ ಹೆಮ್ಮೆಯ ಸ್ವಚ್ಛತಾ ಕಾರ್ಮಿಕರು ಹಾಗೂ ಪೌರಕಾರ್ಮಿಕರಿಗೆ. ಕಣ್ಣಿಗೆ ಕಾಣುವ ಸೌಂದರ್ಯದ ಹಿಂದೆ ಕಣ್ಣಿಗೆ ಕಾಣದಂತೆ ಬೆವರು ಹರಿಸುವ ಈ ಸಮುದಾಯದ ಕೊಡುಗೆ ನಿಜಕ್ಕೂ ಅನುಪಮವಾದುದು. ಆದರೆ, ದುರಂತವೆಂದರೆ ಸಮಾಜಕ್ಕಾಗಿ ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ದುಡಿಯುವ ಈ ಜೀವಗಳನ್ನು ನಾವು ಇನ್ನೂ ಕೇವಲ ‘ಕಸಗುಡಿಸುವವರು’ ಎಂಬ ಸಾಧಾರಣ ದೃಷ್ಟಿಕೋನದಲ್ಲೇ ನೋಡುತ್ತಿರುವುದು ವಿಷಾದನೀಯ.

ಯಾವುದೇ ಒಂದು ವೃತ್ತಿಯನ್ನು ಕೀಳಾಗಿ ಕಾಣುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಹಾಗೂ ಮಾನವೀಯ ಮೌಲ್ಯಗಳಿಗೆ ಬಗೆಯುವ ದ್ರೋಹ. ಸಂವಿಧಾನದ ಆಶಯದಂತೆ ಪ್ರತಿಯೊಂದು ಉದ್ಯೋಗವೂ ತನ್ನದೇ ಆದ ಘನತೆ ಮತ್ತು ಗೌರವವನ್ನು ಹೊಂದಿದೆ. ‘ಕಾಯಕವೇ ಕೈಲಾಸ’ ಎಂಬ ತತ್ತ್ವದಡಿ ದುಡಿಯುವ ಪೌರಕಾರ್ಮಿಕರ ವೃತ್ತಿಯನ್ನು ನಿಕೃಷ್ಟವಾಗಿ ಕಾಣುವುದು ಅಥವಾ ಅವರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಡುವುದು ಅತ್ಯಂತ ಗಂಭೀರವಾದ ಸಾಮಾಜಿಕ ಅಪರಾಧವಾಗಿದೆ. ಇದು ಪರೋಕ್ಷವಾಗಿ ಜಾತಿ ನಿಂದನೆ ಅಥವಾ ತಾರತಮ್ಯ ಎಸಗಿದಷ್ಟೇ ಗಂಭೀರವಾದುದು ಎಂಬುದನ್ನು ನಾಗರಿಕ ಸಮಾಜ ಮನಗಾಣಬೇಕಿದೆ.

ಒಂದು ಕ್ಷಣ ಯೋಚಿಸಿ: ಯಾವುದಾದರೂ ಅನಿವಾರ್ಯ ಕಾರಣಗಳಿಗಾಗಿ ಈ ಸ್ವಚ್ಛತಾ ಕಾರ್ಮಿಕರು ಕೇವಲ ಎರಡು ವಾರಗಳ ಕಾಲ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿ ದೃಢವಾಗಿ ನಿಂತರೆ ಏನಾಗಬಹುದು ? ನಗರಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟು, ಸಾಂಕ್ರಾಮಿಕ ರೋಗಗಳ ತಾಣವಾಗುವುದರಲ್ಲಿ ಸಂಶಯವಿಲ್ಲ. ಆಗ ಮಾತ್ರವೇ ನಮಗೆ ಅವರ ನಿಸ್ವಾರ್ಥ ಸೇವೆ ಮತ್ತು ಸಮಾಜದಲ್ಲಿ ಅವರಿಗಿರುವ ಪ್ರಾಮುಖ್ಯತೆಯ ನೈಜ ಅರಿವಾಗಲು ಸಾಧ್ಯವೇ ? ಈ ರೀತಿಯ ಅನಿವಾರ್ಯತೆ ಬರುವ ಮುನ್ನವೇ ಅವರ ಶ್ರಮವನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು.
ಪ್ರಶಸ್ತಿಗಳ ಬೆನ್ನುಬೀಳುವ ರಾಜಕಾರಣಿಗಳು, ಯೋಜನೆಗಳನ್ನು ರೂಪಿಸುವ ಅಧಿಕಾರಿಗಳು ಕೇವಲ ಕಾಗದದ ಮೇಲೆ ಸ್ವಚ್ಛತೆಯ ಚಿತ್ರಣವನ್ನು ಬರೆಯಬಹುದು. ಆದರೆ, ಅದನ್ನು ಧರೆಗೆ ಇಳಿಸಿ, ಕಸದ ರಾಶಿಯ ನಡುವೆ ನಿಂತು ನಗರವನ್ನು ‘ಸ್ವಚ್ಛ ನಗರ’ವನ್ನಾಗಿ ಪರಿವರ್ತಿಸುವ ನೈಜ ರೂವಾರಿಗಳು ನಮ್ಮ ಈ ಸ್ವಚ್ಛತಾ ಸೇನಾನಿಗಳೇ ಹೊರತು ಬೇರೆ ಯಾರೂ ಅಲ್ಲ.

ಇನ್ನಾದರೂ ವ್ಯವಸ್ಥೆ ಮತ್ತು ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಪೌರಕಾರ್ಮಿಕರನ್ನು ಕೇವಲ ದಿನಗೂಲಿ ನೌಕರರಂತೆ ನೋಡದೆ, ಅವರಿಗೆ ಸಿಗಬೇಕಾದ ಸಾಮಾಜಿಕ ಭದ್ರತೆ, ಆರೋಗ್ಯ ವಿಮೆ, ನ್ಯಾಯಯುತ ವೇತನ ಹಾಗೂ ಕನಿಷ್ಠ ಸುರಕ್ಷತಾ ಪರಿಕರಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಅಂದಾಗ ಮಾತ್ರ ಸ್ವಚ್ಛ ಭಾರತ್ ಅಥವಾ ಸ್ವಚ್ಛ ಕರ್ನಾಟಕ ಎಂಬ ಘೋಷಣೆಗಳು ಅರ್ಥಪೂರ್ಣವಾಗಲು ಸಾಧ್ಯ. ಪೌರಕಾರ್ಮಿಕರ ಶ್ರಮಕ್ಕೆ ಗೌರವ ನೀಡುವುದು ಮತ್ತು ಅವರ ಬದುಕಿಗೆ ಭದ್ರತೆ ಕಲ್ಪಿಸುವುದು ಕೇವಲ ಅವರ ಹಕ್ಕಲ್ಲ, ಬದಲಿಗೆ ನಮ್ಮ ಸಮಾಜದ ನೈತಿಕ ಜವಾಬ್ದಾರಿಯಾಗಿದೆ.















































































































































error: Content is protected !!
Scroll to Top