ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ಫೋಟಕ ಮಾಹಿತಿ
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡ ಮತದಾನದ ಹಿಂದೆ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ರಹಸ್ಯ ಸಭೆ ಇದೆ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಜೂ. 22ರಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯ ಕೆಲ ದಿನಗಳ ಮುಂಚೆ ನನಗೆ ಆಪ್ತರೊಬ್ಬರ ಕರೆ ಬಂದಿತು. ಅವರು ನನ್ನ ಹಾಗೂ ಮೋದಿ ಅಭಿಮಾನಿಯಾಗಿದ್ದು, ಪಕ್ಷದ ಒಳಿತಿಗಾಗಿ ರಹಸ್ಯ ಸಭೆಯ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರಿನ ಐಷಾರಾಮಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. 2-3 ಬಿಜೆಪಿ ನಾಯಕರು, ಇಬ್ಬರು ಕಾಂಗ್ರೆಸ್ ನಾಯಕರು ಸಮಾಲೋಚನೆ ಮಾಡುತ್ತಿದ್ದಾರೆ. ಇದು ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಶಾಸಕರನ್ನು ಬಳಿಸಿಕೊಳ್ಳುವ ಬಗ್ಗೆ ಇರಬಹುದು ಎಂದು ಸುಳಿವು ಕೊಟ್ಟರು ಎಂದು ತಿಳಿಸಿದರು.

ಈ ವಿಷಯ ತಿಳಿದ ಕೂಡಲೇ ನಾನು ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ಗೆ ಕರೆ ಮಾಡಿದೆ. ಅವರು ಸಂಪರ್ಕಕ್ಕೆ ಸಿಗಲಿಲ್ಲ. ಆ ಬಳಿಕ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಕರೆ ಮಾಡಿ ಮಾಹಿತಿ ಹಂಚಿಕೊಂಡೆ. ಅವರಿಗೆ ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುವಂತೆಯೂ ಮನವಿ ಮಾಡಿದೆ. ಆ ಬಳಿಕ ಮತ್ತೊಂದು ಸಭೆಯೂ ನಡೆಯಿತು. ಆ ಸಭೆಯ ಮಾಹಿತಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಎಚ್ಚರಿಕೆ ವಹಿಸಲಿಲ್ಲ ಎಂದು ತಿಳಿಸಿದರು.
ಕೆಲ ದಿನಗಳ ಬಳಿಕ ವಿಧಾನ ಪರಿಷತ್ ಚುನಾವಣೆ ನಡೆದು ಫಲಿತಾಂಶ ಬಂದ ಬಳಿಕ ನಾನು ಮಾಹಿತಿ ಕೊಟ್ಟ ರಾಜ್ಯ ಪ್ರಧಾನ ಕಾರ್ಯದರ್ಶಿಯವರೇ ನನಗೆ ಕರೆ ಮಾಡಿ ನೀವು ಹೇಳಿದಂತೆಯೇ ಆಯಿತು ಎಂದು ಬೇಸರ ವ್ಯಕ್ತಪಡಿಸಿದರು ಎಂದು ಸದಾನಂದ ಗೌಡ ಹೇಳಿದರು.
ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಬೇಡ
ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರಿಗೆ ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಬೇಡ ಎಂದು ಹೇಳಿದ್ದೇನೆ. ಈ ತೀರ್ಮಾನದಿಂದ ಪಕ್ಷಕ್ಕೆ ಹಾಗೂ ಸಾಮಾಜಿಕ ವ್ಯವಸ್ಥೆಗೂ ಕೆಟ್ಟ ಸಂದೇಶ ಹೋಗುತ್ತದೆ. ನಮ್ಮ ಪಕ್ಷದಲ್ಲಿರುವವರು ದೈವ ಭಕ್ತರಿರಬಹುದು. ಇಂತಹ ವಿಷಯಗಳನ್ನು ನಿಭಾಯಿಸುವ ಶಕ್ತಿ ಇಲ್ಲ ಎಂಬ ಸಂದೇಶ ಹೋಗುತ್ತದೆ ಎಂದು ತಿಳಿಸಿದರು.
























