ಶಾಂತಿ ಮಾತುಕತೆಯಿಂದ ಇರಾನ್‌ ಹೊರ ನಡೆದ ಬೆನ್ನಲ್ಲೇ ಮತ್ತೆ ಕಚ್ಚಾ ತೈಲ ದರ ಏರಿಕೆ

ವಾಷಿಂಗ್ಟನ್ : ಶಾಂತಿ ಮಾತುಕತೆಯಿಂದ ಇರಾನ್‌ ಹೊರ ನಡೆದ ಬೆನ್ನಲ್ಲೇ ಕಚ್ಚಾ ತೈಲ ದರ 2% ರಷ್ಟು ಏರಿಕೆ ಕಂಡಿದೆ.

ಅಂತರರಾಷ್ಟ್ರೀಯ ಮಟ್ಟದ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 82.30 ಡಾಲರ್‌(7,700 ರೂ.) ತಲುಪಿದ್ದರೆ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ಕಚ್ಚಾ ತೈಲದ ಬೆಲೆಯೂ ಸಹ ಪ್ರತಿ ಬ್ಯಾರೆಲ್‌ಗೆ 78 ಡಾಲರ್(7,300 ರೂ.) ಗಡಿಯನ್ನು ದಾಟಿದೆ.

ಅಮೆರಿಕ(USA) ಮತ್ತು ಇರಾನ್‌ ನಡುವೆ ಸ್ವಿಟ್ಜರ್ಲೆಂಡ್‌ನಲ್ಲಿ ಅತ್ಯಂತ ಸೂಕ್ಷ್ಮವಾದ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೊಸ ಮಿಲಿಟರಿ ಬೆದರಿಕೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.

ಕಳೆದ ವಾರವಷ್ಟೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಕಡಿಮೆ ಮಾಡಲು 60 ದಿನಗಳ ಕದನ ವಿರಾಮ ಮತ್ತು ಮಾತುಕತೆಯ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರ ಭಾಗವಾಗಿ ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಉನ್ನತ ಮಟ್ಟದ ಸಂಧಾನ ಸಭೆಗಳು ಆರಂಭವಾಗಿದ್ದವು.

ಭಾನುವಾರ ಸಭೆ ನಡೆಯುತ್ತಿದ್ದಾಗ ಟ್ರಂಪ್ ಅವರ ಬೆದರಿಕೆಯ ಎಚ್ಚರಿಕೆ ಹೊರಬೀಳುತ್ತಿದ್ದಂತೆ ಇರಾನ್ ನಿಯೋಗ ಮಾತುಕತೆ ವೇದಿಕೆಯಿಂದ ಹೊರ ನಡಿದಿದೆ. ಇದು ಜಾಗತಿಕ ತೈಲ ಪೂರೈಕೆಯಲ್ಲಿ ಮತ್ತೆ ವ್ಯತ್ಯಯ ಉಂಟಾಗಬಹುದು ಎಂಬ ಆತಂಕವನ್ನು ಹೂಡಿಕೆದಾರರಲ್ಲಿ ಮೂಡಿಸಿದ್ದು, ಬೆಲೆ ಏರಿಕೆಗೆ ನೇರ ಕಾರಣವಾಗಿದೆ.

ಕಳೆದ ಕೆಲವು ವಾರಗಳಲ್ಲಿ ತೈಲ ಬೆಲೆಗಳು ಬ್ಯಾರೆಲ್‌ಗೆ 73 ಡಾಲರ್‌ ಆಸುಪಾಸಿಗೆ ಇಳಿಕೆ ಕಂಡು ಹೂಡಿಕೆದಾರರಲ್ಲಿ ನಿರಾಳತೆ ಮೂಡಿಸಿತ್ತು. ಆದರೆ ಪ್ರಸ್ತುತ ಮೂಡಿರುವ ರಾಜತಾಂತ್ರಿಕ ಅನಿಶ್ಚಿತತೆಯು ತೈಲ ಬೆಲೆಯನ್ನು ಮತ್ತೆ ಮೇಲಕ್ಕೆ ತಳ್ಳಿದೆ. ಸ್ವಿಟ್ಜರ್ಲೆಂಡ್ ಶಾಂತಿ ಮಾತುಕತೆಯಿಂದ ಬರುವ ಮುಂದಿನ ಪ್ರಮುಖ ನಿರ್ಧಾರಗಳು ಜಾಗತಿಕ ಆರ್ಥಿಕತೆ ಮತ್ತು ಇಂಧನ ಮಾರುಕಟ್ಟೆಯ ಮುಂದಿನ ಹಾದಿಯನ್ನು ನಿರ್ಧರಿಸಲಿವೆ.





























error: Content is protected !!
Scroll to Top