92 ಲಕ್ಷ ರೂ. ವೆಚ್ಚದಲ್ಲಿ ಕಾರ್ಕಳ ನಾಗರಬಾವಿ ಕೆರೆಗೆ ಕಾಯಕಲ್ಪ

ಕಾರ್ಕಳ : ಐತಿಹಾಸಿಕ ಚತುರ್ಮುಖ ಬಸದಿ ಮತ್ತು ಅನಂತಶಯನ ದೇವಸ್ಥಾನದ ಸಮೀಪವಿರುವ ಪುರಾತನ ನಾಗರಬಾವಿ ಕೆರೆಗೆ ಇದೀಗ ಕಾಯಕಲ್ಪ ದೊರೆತಿದೆ. ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ʼನಮ್ಮೂರು ನಮ್ಮ ಕೆರೆʼ ಯೋಜನೆ, ಕಾರ್ಕಳ ರೋಟರಿ ಕ್ಲಬ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಒಟ್ಟು 92 ಲ. ರೂ. ವೆಚ್ಚದ ಯೋಜನೆಯೊಂದಿಗೆ ಈ ಕೆರೆಯ ಹೂಳೆತ್ತುವ ಹಾಗೂ ಪುನರುಜ್ಜೀವನಗೊಳಿಸುವ ಕಾರ್ಯ ಭರದಿಂದ ಸಾಗುತ್ತಿವೆ.

2027ರಲ್ಲಿ ಕಾರ್ಕಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿಗೊಳ್ಳುತ್ತಿದ್ದು, ಹೂಳು ತೆಗೆದು, ದಂಡೆಗಳ ಪುನರ್‌ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಒಟ್ಟು 15 ಅಡಿ ಎತ್ತರದಲ್ಲಿ ಕಲ್ಲು ಕಟ್ಟಿ ದಂಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 7 ಅಡಿಯವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೆ “ನಮ್ಮೂರು ನಮ್ಮ ಕೆರೆ” ಯೋಜನೆ”ಯಡಿ ಸುಮಾರು 23.18 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಮೂರು ವಾರದಲ್ಲಿ ಯೋಜನೆಯ ಈ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಯಲಿದ್ದು, ಇನ್ನು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಸಿಇಒ ಭೇಟಿ
ಜೂ. 24ರಂದು ಬೆಳಿಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಅವರು ಕೆರೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಈ ಸಂದರ್ಭ ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ ಪೈ, ಕಾರ್ಕಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ಯೋಜನೆಯ ಕೃಷಿ ಅಧಿಕಾರಿ ಬ್ರಿಜೇಶ್‌, ಇಂಜಿನಿಯರ್‌ ಪ್ರದೀಪ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಸಮಿತಿ ಸದಸ್ಯರು, ಎಸ್‌ಕೆಡಿಆರ್‌ಡಿಪಿ ಸಿಬ್ಬಂದಿ ಉಪಸ್ಥಿತರಿದ್ದರು.

ಯೋಜನೆ ಮೂಲಕ 3 ಕೆರೆ ಅಭಿವೃದ್ಧಿ
ಕಾರ್ಕಳದಲ್ಲಿ ಈಗಾಗಲೇ ಯೋಜನೆ ಮೂಲಕ 3 ಕೆರೆಗಳ ಅಭಿವೃದ್ಧಿ ಕಾರ್ಯ ನಡೆದಿದೆ. ನಾಗರಬಾವಿ ಕರೆ ಸೇರಿದಂತೆ 2024-25ರಲ್ಲಿ ಕುಕ್ಕುಂದೂರು ಗ್ರಾಮದ 2 ಎಕರೆ ವೀಸ್ತೀರ್ಣದ ಮೇಲ್ಜಡ್ಡು ಕೆರೆಯನ್ನು 4.18 ಲ. ರೂ. ವೆಚ್ಚದಲ್ಲಿ ಹಾಗೂ 2019-20ರಲ್ಲಿ 1.20 ಎಕರೆ ವಿಸ್ತೀರ್ಣದ ಕೆರ್ವಾಶೆಯ ಮಡಿವಾಳ ಕಟ್ಟೆ ಕೆರೆಯನ್ನು 4 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು.















































































error: Content is protected !!
Scroll to Top