ಸಚಿವ ಸಂಪುಟದಲ್ಲಿ ಹಿರಿಯ ನಾಯಕರಿಗೆ ತಕ್ಕ ಗೌರವ ಸಿಕ್ಕಿಲ್ಲ

ಬೆಂಗಳೂರು : ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ ಹಿರಿಯ ನಾಯಕ ಕೆ.ಎಚ್‌.ಮುನಿಯಪ್ಪ ಅವರೂ ಕೂಡ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ದೇವನಹಳ್ಳಿಯಲ್ಲಿ ಮಾತನಾಡಿರುವ ಅವರು, ಖಾತೆ ಹಂಚಿಕೆ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಸಿಎಂ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಆಹಾರ ಇಲಾಖೆಯನ್ನು ನಿಭಾಯಿಸಿರುವ ತಮಗೆ ಮತ್ತೆ ಅದೇ ಖಾತೆ ನೀಡಿರುವುದಕ್ಕೆ ಕೆ.ಎಚ್. ಮುನಿಯಪ್ಪ ತೀವ್ರ ಬೇಸರ ಹೊರಹಾಕಿದ್ದಾರೆ. ಸಚಿವ ಸಂಪುಟದಲ್ಲಿ ಹಿರಿಯ ನಾಯಕರಿಗೆ ತಕ್ಕ ಗೌರವ ಸಿಕ್ಕಿಲ್ಲ. ನಾನು ರಾಜಕೀಯದಲ್ಲಿ 8 ಬಾರಿ ಗೆದ್ದಿರುವ ಅತ್ಯಂತ ಹಿರಿಯ ನಾಯಕ. ಸಂಪುಟದಲ್ಲಿ ಪ್ರೊಟೊಕಾಲ್ ಪ್ರಕಾರ ಸೀನಿಯಾರಿಟಿ ನೋಡಿ ಖಾತೆ ಹಂಚಬೇಕಿತ್ತು. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ನೇರ ಅವಕಾಶವಿರುವ ದೊಡ್ಡ ಖಾತೆ ನೀಡುವಂತೆ ನಾನು ಮೊದಲೇ ಕೇಳಿದ್ದೆ. ಆದರೆ ಹಂಚಿಕೆಯಲ್ಲಿ ಯಾವುದೇ ಸಮಾತೋಲನ ಕಾಯ್ದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ನನ್ನ ಹಿರಿತನವನ್ನು ಪರಿಗಣಿಸುವವರೆಗೆ ನೀಡಲಾಗಿರುವ ಖಾತೆಯನ್ನು ವಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

















































error: Content is protected !!
Scroll to Top