ಸಭಾವೇದಿಕೆಯ ನಾಮಫಲಕ ಅನಾವರಣ – ಸನ್ಮಾನ – ಅಭಿನಂದನೆ
ಕಾರ್ಕಳ : ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ ಶಿರ್ಲಾಲು ಇಲ್ಲಿಂದ ನಿವೃತ್ತಿ ಹೊಂದಲಿರುವ ಕಾಲೇಜು ವಿಭಾಗದ ಪ್ರಾಂಶುಪಾಲ ಬೇಬಿ ಕೆ. ಈಶ್ವರಮಂಗಲ ಮತ್ತು ಪ್ರೌಢ ಶಾಲಾ ವಿಭಾಗದ ಕನ್ನಡ ಅಧ್ಯಾಪಕಿ ಮಹಾಲಕ್ಷ್ಮೀ ಎಂ. ಅವರಿಗೆ ಬೀಳ್ಕೊಡುಗೆ ಸಮಾರಂಭ ಜೂ. 3ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿ. ಸುನಿಲ್ ಕುಮಾರ್ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯ, ಶಿಕ್ಷಣ ತಜ್ಞ ಕೆ.ಗುಣಪಾಲ ಕಡಂಬ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಿರಾಜ್ ಜೈನ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಮಾನಂದ ನಾಯಕ್, ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್, ಉದ್ಯಮಿ ರಾಜೇಶ್ ರೆಂಜಾಳ, ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಮಾರುತಿ, ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕ ಲೋಕೇಶ್ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.ಆರ್., ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶೀತಲ್ ಜೈನ್, ನ್ಯಾಯವಾದಿ ಸೂರಜ್ ಜೈನ್, ನಿವೃತ್ತ ಉಪನ್ಯಾಸಕ ಟಿ.ಪಿ. ಮಂಜುನಾಥ್ ಪ್ರಸಾದ್, ಹಿರಿಯ ಉಪನ್ಯಾಸಕ ಉದಯ ದೇವಾಡಿಗ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ನರಸಿಂಹ ನಾಯಕ್ ಭಾಗವಹಿಸಲಿದ್ದಾರೆ.

ಸ್ವರ್ಣ ಪದಕ ಪ್ರದಾನ
ಕಾರ್ಯಕ್ರಮದಲ್ಲಿ ಶ್ರೀಮತಿ ಸುಮಂಗಲಾ ಚಾರಿಟೇಬಲ್ ಟ್ರಸ್ಟ್ (ರಿ.) ಶಿರ್ಲಾಲು ಇವರ ಪ್ರಾಯೋಜಕತ್ವದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ರಾಜೇಶ್ ಮತ್ತು ಐಶ್ವರ್ಯ ಐ. ರಾವ್ ಅವರಿಗೆ ಮತ್ತು ರಾಜೇಶ್ ರೆಂಜಾಳ ಇವರ ಪ್ರಾಯೋಜಕತ್ವದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಿಯಾದ ಕಲಾ ವಿಭಾಗದ ಆಯುಷ್ ತುಲ್ ಫರ್ಹಾನಾ ಹಾಗೂ ವಾಣಿಜ್ಯ ವಿಭಾಗದ ಅರ್ಪಿತಾ ಅವರಿಗೆ ಸ್ವರ್ಣ ಪದಕ ಪ್ರದಾನ ಸಮಾರಂಭ ನಡೆಯಲಿದೆ.
ನಾಮಫಲಕ ಅನಾವರಣ
ಸಂಸ್ಥೆಯ ಶ್ರೀಮತಿ ಸುಮಂಗಲ ಗುಣಪಾಲ ಕಡಂಬ (ಸಭಾಂಗಣದ ನಿರ್ಮಾಣಕ್ಕೆ ಬಹುಪಾಲು ಆರ್ಥಿಕ ವೆಚ್ಚ ಭರಿಸಿದ ಕೆ. ಗುಣಪಾಲ ಕಡಂಬ ಶಿರ್ಲಾಲು ಇವರ ಧರ್ಮಪತ್ನಿ) ಸಭಾವೇದಿಕೆಯ ನಾಮಫಲಕ ಅನಾವರಣ ಹಾಗೂ ಸಭಾಂಗಣ ಸಮುಚ್ಚಯಕ್ಕೆ ದೇಣಿಗೆ ನೀಡಿದ ಮಹನೀಯರ ಶಿಲಾಫಲಕದ ಅನಾವರಣ ಕಾರ್ಯಕ್ರಮ ನಡೆಯಲಿದೆ.
ಪುಸ್ತಕ ವಿತರಣೆ – ಸನ್ಮಾನ – ಅಭಿನಂದನೆ
ಅಜೆಕಾರು ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಮತ್ತು ಶ್ರೀಮತಿ ಸುಮಂಗಲಾ ಚಾರಿಟೇಬಲ್ ಟ್ರಸ್ಟ್ (ರಿ.) ಶಿರ್ಲಾಲು ಇದರ ವತಿಯಿಂದ ಪ್ರೌಢಶಾಲಾ, ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ನೋಟುಪುಸ್ತಕ ವಿತರಣೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಕಳ ಹೋಬಳಿಯ ಪಟ್ಟದ ಪುರೋಹಿತರು ಮತ್ತು ಪ್ರತಿಷ್ಠಾಚಾರ್ಯರಾದ ಸ್ವ|| ಕೆ. ನಾಗಕುಮಾರ ಇಂದ್ರ ಮತ್ತು ಸ್ವ|| ಟಿ. ಎನ್. ವಿಜಯಲಕ್ಷ್ಮಿಯವರ ಸ್ಮರಣಾರ್ಥ ವಿಶೇಷ ಸನ್ಮಾನ ಮತ್ತು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಕಡಂಬರಿಗೆ 80ನೇ ವರ್ಷದ ಹುಟ್ಟುಹಬ್ಬ
ವಿಶ್ರಾಂತ ಪ್ರಾಚಾರ್ಯ, ಶಿಕ್ಷಣ ತಜ್ಞರಾದ ಕೆ. ಗುಣಪಾಲ ಕಡಂಬರ 80ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮದಂದು ಸಹಭೋಜನ ಆಯೋಜಿಸಲಾಗಿದೆ.















































































