ಮನಮೋಹನ ‘ಅನೂಹ್ಯ’ ಆಳ್ವ

ಳ್ವರು ಅಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮೂಡುಬಿದಿರೆಯಲ್ಲಿ ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳು. ಆದರೆ, ಅದನ್ನು ಹೊರತುಪಡಿಸಿ ನೋಡಿದರೂ ಆಳ್ವರು ಈ ಕಾಲದ ಒಂದು ಅದ್ಭುತ. ಹತ್ತಿರದಿಂದ ಬಲ್ಲವರಿಗೆ ಅವರೊಂದು ಅಚ್ಚರಿ. ಆಳ್ವರೆಂದರೆ ಅಗಾಧ ಜ್ಞಾನ, ಅತ್ಯಂತ ಅಚ್ಚುಕಟ್ಟುತನ, ಅದ್ದೂರಿ, ಅಭೂತಪೂರ್ವ ಕಾರ್ಯಕ್ರಮ ಸಂಘಟಕ, ಅಪ್ಪಟ ಕಲಾಕಾರ, ಅಭಿವೃದ್ಧಿಯ ಕನಸುಗಾರ, ಅಮೋಘ ಸಾಧಕ. ಸಾವಿರಾರು ಕುಟುಂಬಗಳಿಗೆ ಆಶ್ರಯದಾತರಾಗಿರುವ ಆಳ್ವರು ಗೆಳೆಯರ ಪಾಲಿನ ಅಪರಂಜಿ, ಅಪರಿಮಿತ ಯೋಜನೆ ಹಾಗೂ ಯೋಚನೆಯ ಅದಮ್ಯ ಉತ್ಸಾಹಿ. ಹೀಗೆ ಆಳ್ವರೆಂದರೆ ಬೆರಗು, ಅನೂಹ್ಯ. ಆಧುನಿಕ ಮೂಡುಬಿದಿರೆಯ ನಿರ್ಮಾತೃ. ಅವರ ಅಪ್ರತಿಮ ಸಾಧನೆ, ವ್ಯಕ್ತಿತ್ವ, ಹವ್ಯಾಸ ಎಲ್ಲವೂ ವಿಶೇಷ, ವಿಶಿಷ್ಟ. ಇದು ಆಳ್ವರ ಬಣ್ಣನೆಯಲ್ಲ. ಆಳ್ವರ ನೈಜ ಚಿತ್ರಣ.

ಆಳ್ವರಿದ್ದಲ್ಲಿ ಹಾಸ್ಯದ ಹೊನಲು, ವಯಸ್ಸು ಎಪ್ಪತ್ತ ನಾಲ್ಕದಾರೂ ಬತ್ತದ ಜೀವನೋತ್ಸಾಹ. ಯಾವುದೇ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಎದೆಗುಂದದೆ ಮುನ್ನುಗ್ಗುವ ಛಾತಿ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿ. ಪ್ರಾಂಜಲ ಮನಸ್ಸಿನ ನಿಗರ್ವಿ. ಯಾವುದೇ ಒಬ್ಬ ವ್ಯಕ್ತಿ ತನ್ನ ಬದುಕಿನ ಅವಧಿಯಲ್ಲಿ ಒಂದೆರಡು ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಲು ಸಾಧ್ಯವಾಗಬಹುದು. ಆದರೆ, ಆಳ್ವರ ವಿಚಾರಕ್ಕೆ ಬಂದರೆ ಅವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಏನಾದರೊಂದು ಸಾಧನೆ ಮಾಡಿ ತನ್ನ ಛಾಪು ಮೂಡಿಸಿದವರು ಅವರು.

ಜೀವನದಲ್ಲಿ ಸಂಕಷ್ಟ ಎದುರಾದಲ್ಲಿ ಆಳ್ವರನ್ನೊಮ್ಮೆ ನೋಡಬೇಕು. ಅವರಲ್ಲಿ ಮಾತನಾಡಲು ಅವಕಾಶ ಸಿಕ್ಕರೆ ಸಾಕು. ಎಲ್ಲ ನೋವು ಮರೆಯಬಹುದು. ಆಳ್ವರು ಎದುರಿಸಿದ ಸವಾಲು, ಸಮಸ್ಯೆಯ ಮುಂದೆ ಉಳಿದೆಲ್ಲವೂ ನಗಣ್ಯವಾಗಬಹುದು. ಅವರ ಕಷ್ಟ, ನೋವಿನ ಮುಂದೆ ಗೌಣವಾಗಿಬಿಡಬಹುದು. ಆಳ್ವರಿಗೂ ಟೀಕೆಗಳು ತಪ್ಪಿಲ್ಲ. ಆದರೆ, ಟೀಕೆಗಳಿಗೆ ಪ್ರತಿಕ್ರಿಯಿಸದ ಆಳ್ವರು ‘ಅವರವರ ಯೋಗ್ಯತೆ, ಚಿಂತನೆಗೆ ಅನುಗುಣವಾಗಿ ಮಾತನಾಡುತ್ತಾರೆ’ ಎಂದು ನಿರ್ಲಕ್ಷಿಸಿ ಮುಂದುವರಿದವರು.

ʼಪದ್ಮ’ ಪ್ರಶಸ್ತಿ ಮುಡಿಗೇರಲಿ
ಆಳ್ವರ ಸಾಧನೆಯನ್ನು ಗುರುತಿಸಿ ಬಂದ ಪ್ರಶಸ್ತಿ, ಸನ್ಮಾನ, ಬಿರುದಾವಳಿಗಳು ಅಸಂಖ್ಯ. ಆದರೆ, ಅವರೆಂದೂ ಪ್ರಶಸ್ತಿ ಸನ್ಮಾನಗಳನ್ನು ಅಪೇಕ್ಷಿಸಿದವರಲ್ಲ. ಅರಸಿ ಬಂದ ಪ್ರಶಸ್ತಿಗಳನ್ನು ಗೌರವದಿಂದಲೇ ಸ್ವೀಕರಿಸಿದವರು. ಆಳ್ವರ ಸಾಧನೆಗಳನ್ನು ನೋಡುವಾಗ ಆಳ್ವರಿಗೆ ಅರ್ಹವಾಗಿ ದೇಶದ ಅತ್ಯುತ್ತನ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ಒಲಿದು ಬರಬೇಕಿತ್ತು. ಆಳುವವರು ಇನ್ನಾದರೂ ಆಳ್ವರ ಸಾಧನೆ ಪರಿಗಣಿಸಿ ʼʼಪದ್ಮ’ದಂಥ ಪ್ರಶಸ್ತಿ ನೀಡಿ ಗೌರವಿಸಲಿ. ಇದರಿಂದ ಪ್ರಶಸ್ತಿಯ ಮೌಲ್ಯವೂ ವೃದ್ಧಿಸುವುದು, ಆಳ್ವರ ಅಭಿಮಾನಿಗಳ ಬಹುಕಾಲದ ಹಂಬಲವೂ ಈಡೇರುವುದು.

28 ವರ್ಷ ವಿದ್ಯಾಭ್ಯಾಸ – 20 ವರ್ಷ ಹಾಸ್ಟೆಲ್ ಜೀವನ
4ನೇ ತರಗತಿಯಿಂದ ಹಾಸ್ಟೆಲ್ ಜೀವನ ಆರಂಭಿಸಿದ ಆಳ್ವರು 20 ವರ್ಷಗಳ ಕಾಲ ವಿವಿಧ ಹಾಸ್ಟೆಲ್‌ಗಳಲ್ಲಿ ತಂಗಿದ್ದರು. ಈ ಕಾರಣದಿಂದಾಗಿ ಬಹುತೇಕ ಎಲ್ಲ ಜಾತಿ, ಧರ್ಮದ ಸಂಪ್ರದಾಯ, ಭಾಷೆ ಕಲಿಯುವಂತಾಗಿ ನದಿಯಂತಿದ್ದವರು ಕಡಲಂತಾದರು. ಎಸ್ಸೆಸೆಲ್ಸಿ ಬಳಿಕ ಪಿಯುಸಿ ಮಾಡಲು ಕಲಾವಿಭಾಗಕ್ಕೆ ಸೇರ್ಪಡೆಯಾದ ಆಳ್ವರು ಒಂದೇ ತಿಂಗಳಲ್ಲಿ ಅದನ್ನು ಬಿಟ್ಟು ಕಾಮರ್ಸ್‌ಗೆ ಸೇರಿಕೊಂಡರು. ಮೋಹನ ಆಳ್ವರು ಡಾಕ್ಟರ್ ಆಗಬೇಕೆಂದು ಬಯಸಿದ್ದರು ಅವರ ಅಕ್ಕ ಮೀನಾಕ್ಷಿ. ಕಾಮರ್ಸ್ ಶಿಕ್ಷಣ ಮಾಡಿದಲ್ಲಿ ಇದು ಸಾಧ್ಯವಿಲ್ಲವೆಂದು ಆಳ್ವರನ್ನು ಸೈನ್ಸ್‌ಗೆ ಸೇರ್ಪಡೆಗೊಳಿಸಿದರು. ಆದರೆ, ಆಳ್ವರು ಸೈನ್ಸ್‌ನ ಒಂದು ಸಬ್ಬೆಕ್ಸ್‌ನಲ್ಲಿ ಫೇಲ್ ಆದರು. ಇದರಿಂದ ಮತ್ತೆ ಪಾಲಿಟೆಕ್ನಿಕ್‌ನತ್ತ ಚಿತ್ತ ಹರಿಸಿ, ಒಂದು ವರ್ಷ ಅದನ್ನೂ ಮಾಡಿದರು. ಈ ವೇಳೆಗೆ ಬಾಕಿಯಾಗಿದ್ದ ಸೈನ್ಸ್ ಸಬ್ಜೆಕ್ಟ್ ಪೂರ್ಣಗೊಳಿಸಿ ಮುಂದೆ ಬಿಎಸ್ಸಿ ಸೇರಿದರು. ಅನಂತರ ಉಡುಪಿಯಲ್ಲಿ ಬಿಎಎಂಎಸ್‌‌ ಪೂರೈಸಿದರು. ಆಳ್ವರು 28 ವರ್ಷಗಳ ಕಾಲ ಸುದೀರ್ಘ ಅವಧಿಗೆ ವಿದ್ಯಾರ್ಥಿಯಾಗಿಯೇ ಇದ್ದರು.

“ನ್ಯೂಸ್ ಕಾರ್ಕಳ” ಲೋಕಾರ್ಪಣೆ
2020ರ ಅಕ್ಟೋಬರ್ 25ರಂದು ಕಾರ್ಕಳದ ಹೊಟೇಲ್ ಪ್ರಕಾಶ್‌ನಲ್ಲಿ ನಡೆದ ‘ನ್ಯೂಸ್ ಕಾರ್ಕಳ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಳ್ವರು ಭಾಗವಹಿಸಿ ಶುಭಹಾರೈಸಿದ್ದರು.

ಮದ್ಯ ಸೇವಿಸಿಲ್ಲ ಸಿಗರೇಟ್ ಸೇದಿಲ್ಲ
ಆಳ್ವರೆಂದೂ ಮದ್ಯದ ರುಚಿ ನೋಡಿದವರಲ್ಲ. ತಂದೆ ಆನಂದ ಆಳ್ವರು ಆ ಕಾಲಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮದ್ಯ ಪೂರೈಕೆಯ ಗುತ್ತಿಗೆ ಪಡೆದಿದ್ದರೂ ಮೋಹನ ಆಳ್ವರೆಂದೂ ಅದರ ಸವಿ ಕೂಡ ನೋಡಿದವರಲ್ಲ. ಸಿಗರೇಟ್ ಸೇದಿದವರಲ್ಲ. ತನ್ನ ಬಹುತೇಕ ವಿದ್ಯಾರ್ಥಿ ಜೀವನವನ್ನು ಹಾಸ್ಟೆಲ್ ನಲ್ಲೇ ಕಳೆದರೂ ಬಹುಪಾಲು ಸಮಯವನ್ನು ಗೆಳೆಯರೊಂದಿಗೆ ಕಳೆದರೂ ಮದ್ಯ, ಸಿಗರೇಟ್‌ನಂತಹ ದುಶ್ಚಟಗಳಿಂದ ದೂರವಿದ್ದರು ಆಳ್ವರು.

300 ಕೋಟಿ ರೂ. ಸಾಲದ ಧನಿಕ
ಮೋಹನ ಆಳ್ವರು ಹಂತ ಹಂತವಾಗಿ ಮೇಲೇರಿದರೂ ಇಂದಿಗೂ 300 ಕೋಟಿ ರೂ. ಸಾಲ ಅವರ ಮೇಲಿದೆ. ಸಾಲ- ಸಾಧನೆ ಇವೆರಡೂ ಆಳ್ವರ ಜೊತೆ ಜೊತೆಗಿರುವ ಸಂಗತಿಗಳು. ನಮಗೆ ಸಾಲವಿರಬೇಕು. ಬಡ್ಡಿ ಪಾವತಿ ಮಾಡುತ್ತಿರಬೇಕು. ಸಾಲವಿಲ್ಲದೇ ಇದ್ದಲ್ಲಿ ಕ್ರಿಯಾಶೀಲರಾಗಿರಲು ಸಾಧ್ಯವಿಲ್ಲ. ಎಚ್ಚರಿಕೆಯಿಂದ ಇರಲು ಆಗುವುದಿಲ್ಲ. ವಿಶ್ರಾಂತಿ ಮಾಡುತ್ತಾ ಹೆಬ್ಬಾವಿನಂತಿರಲು ನನಗೆ ಇಷ್ಟವಿಲ್ಲ ಎಂದು ಆಳ್ವರು ಅನೇಕ ಬಾರಿ ಹೇಳುತ್ತಿರುತ್ತಾರೆ.

ಶರ್ಟ್, ತಿಂಡಿ, ಪರ್ಪ್ಯೂಮ್ ಪ್ರಿಯ
ಬಗೆ ಬಗೆಯ, ಬಣ್ಣ ಬಣ್ಣದ ಶರ್ಟ್ ಖರೀದಿಸುವುದು ಆಳ್ವರ ಇಷ್ಟದ ಹವ್ಯಾಸಗಳಲ್ಲೊಂದು. ಶರ್ಟ್ ಬಗ್ಗೆ ವಿಶೇಷ ಕಾಳಜಿ. ಅದೇ ರೀತಿ ಊಟದ ವಿಚಾರಗಳಲ್ಲೂ ಅವರ ಟೇಸ್ಟ್ ಭಿನ್ನ, ಅವರಿಗೆ ಹೊಟ್ಟೆ ತುಂಬ ತಿನ್ನಬೇಕು ಮತ್ತು ತನ್ನ ಜೊತೆಗಿರುವವರಿಗೂ ತಿನ್ನಿಸಬೇಕು. ಅದರಲ್ಲೇ ಖುಷಿ ಪಡುವವರು ಆಳ್ವರು. ಅವರ ಇಷ್ಟದ ಸಂಗತಿಗಳಲ್ಲಿ ಮೂರನೆಯದು ಪರ್ಪ್ಯೂಮ್. ಅವರ ಮನೆಯ ವಾರ್ಡ್‌ರೋಬ್ ತುಂಬಾ ಒಪ್ಪ ಓರಣವಾಗಿ ಜೋಡಿಸಿಟ್ಟ ಸುಗಂಧ ದ್ರವ್ಯಗಳ ಸೀಸೆಗಳೇ ಅದಕ್ಕೆ ಸಾಕ್ಷಿ.

ಸವ್ಯಸಾಚಿ” ಪುಸ್ತಕ ಅನಾವರಣ




















































error: Content is protected !!
Scroll to Top