ದೆಹಲಿ : ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ ನ್ಯಾಯಾಂಗದ ಕುರಿತು ವಿವಾದಾಸ್ಪದ ಉಲ್ಲೇಖ ಹಿನ್ನೆಲೆ ಕೇಂದ್ರ ಸರ್ಕಾರವು ಗಂಭೀರ ನಿಲುವು ತೆಗೆದುಕೊಂಡಿದ್ದು, ಎನ್‌ಸಿಇಆರ್‌ಟಿ ಎಲ್ಲಾ ತರಗತಿಗಳ ಪುಸ್ತಕಗಳನ್ನು ಸಮೀಕ್ಷೆ ಮಾಡಲು ಸರ್ಕಾರ ಆದೇಶ ನೀಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಜ್ಞರ ಸಮಿತಿಯನ್ನು ರಚಿಸಿ ಪಠ್ಯಕ್ರಮವನ್ನು ಪರಿಶೀಲಿಸಲಾಗುವುದು ಎಂದು ವಿವರಿಸಿದ್ದಾರೆ.
ಎಂಟನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಎಂಬ ಪಾಠ ಸೇರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯವು ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತಹದ್ದು ಎಂದು ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ಪುಸ್ತಕದ ಮುದ್ರಣ, ವಿತರಣೆ ಮತ್ತು ಡಿಜಿಟಲ್ ಪ್ರಸಾರಕ್ಕೆ ಸಂಪೂರ್ಣ ನಿಷೇಧ ಹೇರಿತು. ಎಲ್ಲಾ ಭೌತಿಕ ಪ್ರತಿಗಳನ್ನು ವಶಪಡಿಸಿಕೊಳ್ಳುವಂತೆಯೂ ಆದೇಶಿಸಿತು.
ಇಂದು ನಡೆದ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್‌ಗೆ ಮಾಹಿತಿ ನೀಡಿ, ಕೇಂದ್ರ ಸರ್ಕಾರವು ಎನ್‌ಸಿಇಆರ್‌ಟಿಗೆ ಎಲ್ಲಾ ತರಗತಿಗಳ ಪುಸ್ತಕಗಳ ಸಮೀಕ್ಷೆಗೆ ಸೂಚನೆ ನೀಡಿದೆ. ಸ್ವತಂತ್ರ ಮತ್ತು ನಿಷಕ್ಪಪಾತ ತಜ್ಞರ ಸಮಿತಿ ರಚಿಸಲಾಗುತ್ತಿದ್ದು, ಇನ್ಮುಂದೆ ಯಾವುದೇ ಹೊಸ ವಿಷಯವನ್ನು ವಿಶೇಷ ತಜ್ಞರ ಅನುಮೋದನೆ ಇಲ್ಲದೆ ಪ್ರಕಟಿಸಲಾಗುವುದಿಲ್ಲ ಎಂದು ಹೇಳಿದರು.

ಸರ್ಕಾರವು ವಿಶೇಷ ತಜ್ಞರ ಸಮಿತಿಯನ್ನು ರಚಿಸಿ ಪಠ್ಯಕ್ರಮದ ಸಮೀಕ್ಷೆ ಮಾಡಿದರೆ ಒಳ್ಳೆಯದು ಎಂದು ಕೋರ್ಟ್ ಹೇಳಿತು. ಇದೇ ವೇಳೆ ಎನ್‌ಸಿಇಆರ್‌ಟಿ ನಿರ್ದೇಶಕರು ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿ ಕ್ಷಮಾಪಣೆ ಕೇಳಿದರು. ಪುಸ್ತಕವನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ತಿಳಿಸಿದರು.



















