ಪ್ಯಾರಿಸ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಸೃಷ್ಟಿಯಾಗಿರುವ ತೈಲ ಬಿಕ್ಕಟ್ಟು ಎದುರಿಸಲು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ (IEA) 32 ಸದಸ್ಯ ರಾಷ್ಟ್ರಗಳು ತೈಲ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿವೆ.
ತುರ್ತು ಸಂದರ್ಭದಲ್ಲಿ ಬಳಕೆಗಾಗಿ ದಾಸ್ತಾನ ಮಾಡಿರುವ ತೈಲವನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಈ ದೇಶಗಳ ನಡುವೆ ಒಮ್ಮತ ಮೂಡಿಲ್ಲ ಎಂದು ಎರಡು ದಿನಗಳ ಹಿಂದೆ ವರದಿಯಾಗಿತ್ತು. ಈಗ ಐಇಎ ಕರೆದ ಮಹತ್ವದ ಸಭೆಯಲ್ಲಿ ಈ ದೇಶಗಳು 400 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರ್ವಾನುಮತದಿಂದ ಒಪ್ಪಿಕೊಂಡಿವೆ. ಐಇಎ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ದಾಸ್ತಾನು ಇರಿಸಿದ ತೈಲವನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು.
ಐಇಎ ಸದಸ್ಯ ದೇಶಗಳು 1.2 ಶತಕೋಟಿ ಬ್ಯಾರೆಲ್‌ಗಳಿಗಿಂತ ಹೆಚ್ಚಿನ ತುರ್ತು ದಾಸ್ತಾನುಗಳನ್ನು ಹೊಂದಿದ್ದು ಇನ್ನೂ 600 ಮಿಲಿಯನ್ ಬ್ಯಾರೆಲ್ ತೈಲವನ್ನು ಕೈಗಾರಿಕಾ ದಾಸ್ತಾನುಗಳನ್ನು ಇರಿಸಲಾಗಿದೆ.

1974 ರಲ್ಲಿ ರಚಿಸಲಾದ IEA ಇತಿಹಾಸದಲ್ಲಿ ಸಂಘಟಿತವಾಗಿ ತೈಲ ಬಿಡುಗಡೆಯಾಗುತ್ತಿರುವುದು ಇದು ಆರನೇ ಬಾರಿ. ಈ ಹಿಂದೆ 1991, 2005, 2011 ಮತ್ತು 2022 ರಲ್ಲಿ ಎರಡು ಬಾರಿ ತೈಲ ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
2025ರಲ್ಲಿ ದಿನಕ್ಕೆ ಸರಾಸರಿ 20 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ಮತ್ತು ತೈಲ ಉತ್ಪನ್ನಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿಸಲ್ಪಟ್ಟಿದ್ದವು. ಆದರೆ ಈಗ ಈ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ್ದರಿಂದ ಕಚ್ಚಾ ತೈಲಗಳು ಸಂಸ್ಕರಣಾಗಾರವನ್ನು ತಲುಪುತ್ತಿಲ್ಲ. ಪರಿಣಾಮ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಭಾರೀ ಏರಿಕೆ ಕಾಣತೊಡಗಿದೆ.
ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು ಪ್ಯಾರಿಸ್ ಮೂಲದ ಒಂದು ಸ್ವಾಯತ್ತ ಅಂತರ ಸರ್ಕಾರಿ ಸಂಸ್ಥೆಯಾಗಿದ್ದು, ಇದನ್ನು 1974 ರಲ್ಲಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (OECD) ಚೌಕಟ್ಟಿನಲ್ಲಿ ಸ್ಥಾಪಿಸಲಾಯಿತು. 1973-1974ರ ತೈಲ ಬಿಕ್ಕಟ್ಟಿನ ಸಮಯದಲ್ಲಿ, ತನ್ನ ಸದಸ್ಯ ರಾಷ್ಟ್ರಗಳಿಗೆ ತೈಲ ಪೂರೈಕೆಯಲ್ಲಿ ಉಂಟಾಗುವ ಅಡಚಣೆಗಳನ್ನು ಎದುರಿಸಲು ಸಹಾಯ ಮಾಡುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. 90 ದಿನಗಳ ಆಮದುಗಳಿಗೆ ಸಮಾನವಾದ ತುರ್ತು ತೈಲ ದಾಸ್ತಾನುಗಳನ್ನು ಹೊಂದಿರುವ ದೇಶಗಳಿಗೆ ಈ IEA ಮಂಡಳಿಯಲ್ಲಿ ಸದಸ್ಯ ಸ್ಥಾನವನ್ನು ನೀಡಲಾಗುತ್ತದೆ.



















