ವಿಧಾನಸಭೆಯಲ್ಲಿ ಗ್ಯಾಸ್ ಸಮರ – ಬಿಜೆಪಿ, ಕಾಂಗ್ರೆಸ್ ಗದ್ದಲ

ಬೆಂಗಳೂರು : ಅಮೆರಿಕ – ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಭೀಕರ ಸ್ಥಿತಿ ಪಡೆದುಕೊಳ್ಳುತ್ತಿದೆ. ಈ ನಡುವೆ ಅಡುಗೆ ಅನಿಲ ಕೊರತೆ ಎಲ್ಲೆಡೆ ಕಾಣಿಸಿಕೊಂಡಿದೆ. ರಾಜ್ಯದಲ್ಲೂ ಗ್ಯಾಸ್ ಸಿಲಿಂಡರ್ ಕೊರತೆ ಕಾಣಿಸಿಕೊಂಡಿದ್ದು, ಹೋಟೆಲ್ ಉದ್ಯಮದ ಮೇಲೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದೆ. ಈ ವಿಚಾರವೂ ವಿಧಾನಸಭೆಯಲ್ಲಿಂದು ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ಕೋಲಾಹಲ ಸೃಷ್ಟಿಸಿತು.

ಶೂನ್ಯ ವೇಳೆಯಲ್ಲಿ ಎಲ್.ಪಿ.ಜಿ. ಸಿಲಿಂಡರ್ ಸಮಸ್ಯೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಪ್ರಸ್ತಾಪ ಮಾಡಿದರು. ಆಹಾರ ಸಚಿವರಿಲ್ಲದ ಕಾರಣ ಬಳಿಕ ಉತ್ತರ ಕೊಡಿಸುತ್ತೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಕೆಲ ಹೊತ್ತಿನ ಬಳಿಕ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸದನಕ್ಕೆ ಆಗಮಿಸಿದರು. ಸದನದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಈಗ ತಾನೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ. 28 ದಿನಗಳಿಗೊಮ್ಮೆ ಮಾತ್ರ ಸಿಲಿಂಡರ್ ಬುಕ್ ಮಾಡಬಹುದು. ಆದರೆ, ವಾಣಿಜ್ಯ ಬಳಕೆ ಸಿಲಿಂಡರ್ ಸಮಸ್ಯೆ ಇದೆ ಎಂದು ಸದನಕ್ಕೆ ವಿವರಿಸಿದರು.

ಈ ವೇಳೆ ಎಚ್. ಡಿ. ರಂಗನಾಥ್ ಉಪಪ್ರಶ್ನೆ ಕೇಳಿ, 900 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಏಕಾಏಕಿ 1,800 ಆಗಿದೆ. ಕೇಂದ್ರದ ಮೋದಿ ಸರಕಾರದ ದುರ್ಬಲ ವಿದೇಶಾಂಗ ನೀತಿ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ರಂಗನಾಥ್ ಮೇಲೆ ಮುಗಿಬಿದ್ದರು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣ ಆಯಿತು.ಈ ಸಮಸ್ಯೆಯನ್ನು ಇಡೀ ವಿಶ್ವವೇ ಎದುರಿಸುತ್ತಿದೆ. ಮೋದಿ ಕಂಡರೆ ಎಷ್ಟು ಭಯ ಇದೆ ನಿಮಗೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮಾತಾಡೋ ಮುನ್ನ ವಿಚಾರ ತಿಳಿದು ಮಾತನಾಡಿ ಎಂದು ಕುಣಿಗಲ್ ರಂಗನಾಥ್ ವಿರುದ್ಧ ಬಿಜೆಪಿ ಶಾಸಕರು ಮುಗಿಬಿದ್ದರು. ಪರಿಣಾಮ ಸದನದಲ್ಲಿ ತೀವ್ರ ಗದ್ದಲದ ವಾತಾವರಣ ಮುಂದುವರಿಯಿತು.

ಈ ಹಂತದಲ್ಲಿ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ದೇಶದಲ್ಲಿ ಅಡುಗೆ ಅನಿಲದ ಕೊರತೆ ಇಲ್ಲದೆ ಇದ್ದರೆ ಕೇಂದ್ರ ಸರ್ಕಾರ ಯಾಕೆ ಎಸ್ಮಾ ಜಾರಿ ಮಾಡಿದೆ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಇದೇ ವೇಳೆ ಆಹಾರ ಸಚಿವ ಮುನಿಯಪ್ಪ ಉತ್ತರ ನೀಡಿ, ತೈಲ ಕಂಪೆನಿ ಜೊತೆ ಸಭೆ ಮಾಡಿದೆ. ಇವತ್ತಿನವರೆಗೆ ಪೊರೈಕೆ ಸಮಸ್ಯೆ ಇಲ್ಲ. 20 ರಿಂದ ಶೇ.30ರಷ್ಟು ನಮ್ಮ ಸ್ವಂತ ಉತ್ಪಾದನೆ ಇದೆ. ಶೇ.70ರಷ್ಟು ವಿದೇಶದಿಂದ ಬರಬೇಕು. ಸದ್ಯ ಗಂಭೀರವಾದ ಪರಿಸ್ಥಿತಿ ಇದೆ. ಆದರೆ ಯಾರು ಆತಂಕ ಪಡುವುದು ಬೇಡ ಎಂದರು.

ಇತ್ತ ಕೇಂದ್ರ ಸರಕಾರ ಅಂದ ತಕ್ಷಣ ಸುಮ್ಮನೆ ಎಲ್ಲದಕ್ಕೂ ಎದ್ದು ಮಾತನಾಡುತ್ತಾರೆ. ಇದು ಪ್ರಪಂಚದಲ್ಲೇ ಬಂದಿರುವ ಸಮಸ್ಯೆ ಎಂದು ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಸಮರ್ಥಿಸಿಕೊಂಡರು.

ಸುನೀಲ್ ಕುಮಾರ್ ಮಧ್ಯೆಪ್ರವೇಶ ಮಾಡಿ, ಯುದ್ಧ ಸಮಯದಲ್ಲಿ ಗ್ಯಾಸ್ ಸಮಸ್ಯೆ ಆಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದರ ಬಗ್ಗೆ ನಮಗೂ ಆಂತಕ ಇದೆ. ಕೆಲವು ಶಾಸಕರು ಅದನ್ನು ರಾಜಕೀಯ ಮಾಡಿದರು. ಇದರ ಬಗ್ಗೆ ಮಾತನಾಡಲು ಯಾರಿಗೂ ಯೋಗ್ಯತೆ ಇಲ್ಲ ಎಂದರು.

ಇದೇ ವೇಳೆ ಅಡುಗೆ ಅನಿಲ ಕೊರತೆ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ವಾಣಿಜ್ಯ ಬಳಕೆಯ ಅಡುಗೆ ಅನಿಲ ಬಾರದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೋಟೆಲ್ ಮಾಲಕರು ಹೇಳುತ್ತಿದ್ದಾರೆ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಆಗ ಅದು ಸರಿ ಇದೆ ಅಂಥ ಹೇಳಿದೆ. ಆದರೆ ನಾನೇ ಪ್ರತಿಭಟನೆ ಮಾಡಿ ಎಂದು ಹೇಳಿಲ್ಲ. ಆದರೆ ಹೋಟೆಲ್ ಮಾಲಕರ ಬೇಡಿಕೆ ಸರಿ ಇದೆ ಅಂತಾ ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳ್ತಿನಿ ಹಾಗೂ ಮುಂದಕ್ಕೂ ಹೇಳುತ್ತೇನೆ ಎಂದರು.

ಇದಕ್ಕೆ ವಿಪಕ್ಷ ನಾಯಕ ಆಕ್ಷೇಪ ವ್ಯಕ್ತಪಡಿಸಿ ನೀವೇ ಪ್ರತಿಭಟನೆಗೆ ಕರೆ ನೀಡಿದ್ದೀರಾ ಎಂದು ವಾಗ್ವಾದ ನಡೆಸಿದರು. ಬಳಿಕ ಕೆ.ಎಚ್.ಮುನಿಯಪ್ಪ, ಯುದ್ಧದ ಸಮಯದಲ್ಲಿ ಈ ರೀತಿಯ ಸಮಸ್ಯೆ ಸಹಜ. ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಗ್ರಾಹಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ಬಿಜೆಪಿ ಸದಸ್ಯರು ಮೇಜು ತಟ್ಟಿ ಸಚಿವರ ಹೇಳಿಕೆ ಬೆಂಬಲಿಸಿದರು.







































error: Content is protected !!
Scroll to Top