ಉಚಿತ ಉಪಕರಣ – ಹಕ್ಕುಪತ್ರ ವಿತರಣೆ

ಕಾರ್ಕಳ : ಸರಕಾರದಿಂದ ಸವಲತ್ತುಗಳನ್ನು ಪಡೆದುಕೊಳ್ಳುವಾಗ ಇರುವ ಹುಮ್ಮಸ್ಸು ಆ ಬಳಿಕವೂ ಇರಬೇಕು. ಪಡೆದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ಅವರು ಮಾ.7 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಉಪ ನಿರ್ದೇಶಕರು ಗ್ರಾಮಾಂತರ ಕೈಗಾರಿಕೆ ಇವರ ಸಹಯೋಗದಲ್ಲಿ ನಡೆದ 2025-26ನೇ ಸಾಲಿನ ಉಚಿತ ಉಪಕರಣ ವಿತರಣಾ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಇಂದು 68 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರ ದೊರೆಯುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಿದಂತಾಗಿದೆ. ಪರಿಣಾಮವಾಗಿ 68 ಕುಟುಂಬ ಸ್ವಾವಲಂಬಿಯಾಗಲಿದೆ. ಇನ್ನು ನಮ್ಮ ತಾಲೂಕಿನಲ್ಲಿ ಹಕ್ಕು ಪತ್ರ ವಿತರಣೆ ನಿರಂತರವಾದ ಪ್ರಕ್ರಿಯೆಯಾಗಿದೆ. ಎದುರಾಗುವ ಅಡೆತಡೆಗಳನ್ನು ನಿವಾರಿಸಿ ಅರ್ಹ ಸಾಮಾನ್ಯ ಮತ್ತು ಬಡಜನತೆಯ ಅರ್ಜಿಗಳನ್ನು ತಿರಸ್ಕರಿಸದೆ ಅವರಿಗೆ ಹಕ್ಕುಪತ್ರವನ್ನು ನೀಡಲಾಗುತ್ತಿದೆ ಎಂದರು.

ಗ್ರಾಮಾಂತರ ಕೈಗಾರಿಕೆ ಉಪನಿರ್ದೇಶಕ ವಾಮನ ನಾಯ್ಕ್‌ ಮಾತನಾಡಿ, 2025-26ನೇ ಸಾಲಿನಲ್ಲಿ ಉಚಿತ ಉಪಕರಣಗಳಿಗಾಗಿ 2277 ಆನ್‌ಲೈನ್‌ ಅರ್ಜಿಗಳು ಬಂದಿದ್ದು ಅದರಲ್ಲಿ ಉಡುಪಿ ಜಿಲ್ಲೆಯಲ್ಲಿ 611 ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಇಂದು ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಟೈಲರಿಂಗ್‌ – 68, ಮರಗೆಲಸ – 20, ಗಾರೆ ಕೆಲಸ – 43, ಎಲೆಕ್ಟ್ರಿಶಿಯನ್‌ – 09, ಪ್ಲಂಬಿಂಗ್-02‌ ಹಾಗೂ ಬ್ಯೂಟಿಪಾರ್ಲರ್‌-02 ಸೇರಿದಂತೆ 144 ಮಂದಿಗೆ ಉಚಿತವಾಗಿ ಉಪಕರಣಗಳನ್ನು ವಿತರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ 94ಸಿ -94 ಸಿಸಿಯಲ್ಲಿ 27 ಮಂದಿ ಮತ್ತು 53 ಮತ್ತು 57 ಅರ್ಜಿಗೆ ಸಂಬಂಧಿಸಿದಂತೆ 7 ಮಂದಿಗೆ ಹಕ್ಕುಪತ್ರ ವಿತರಿಸಲಾಯಿತು.
ತಹಶೀಲ್ದಾರ್‌ ಪ್ರದೀಪ್‌ ಆರ್.‌ ಸ್ವಾಗತಿಸಿದರು. ಬಗರ್ ಹುಕುಂ ಸಮಿತಿಯ ಸದಸ್ಯರಾದ ನವೀನ್ ದೇವಾಡಿಗ ಹಾಗೂ ಸುನಿತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳು, ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು. ಪುಷ್ಪಾ ಪ್ರಾರ್ಥಿಸಿ, ಕಂದಾಯ ನಿರೀಕ್ಷಕ ರಿಯಾಜ್ ಕಾರ್ಯಕ್ರಮ ನಿರ್ವಹಿಸಿದರು.

































































































































































error: Content is protected !!
Scroll to Top