ಟೆಹ್ರಾನ್ : ಅಮೆರಿಕ ಜೊತೆಗೆ ಪರಮಾಣು ಶಸ್ತ್ರಾಸ್ತ್ರಗಳ ಒಪ್ಪಂದಕ್ಕೆ ಸಹಿ ಹಾಕದ ಇರಾನ್ ಮೇಲೆ ಪ್ರಾಬಲ್ಯ ಮೆರೆಯಲು ಇಸ್ರೇಲ್, ಅಮೆರಿಕ ಒಂದಾಗಿವೆ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿವೆ. ರಾಜಧಾನಿ ಟೆಹ್ರಾನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 30 ಗುರಿಗಳನ್ನು ಟಾರ್ಗೆಟ್ ಮಾಡಿ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಟೆಹ್ರಾನ್‌ನಲ್ಲಿ ಸ್ಫೋಟದ ಶಬ್ಧಗಳು ಕೇಳಿಸಿದ್ದು, ದಟ್ಟ ಹೊಗೆ ಮುಗಿಲೆತ್ತರಕ್ಕೆ ಚಿಮ್ಮಿದೆ.
ಸುರಕ್ಷಿತ ಸ್ಥಳಕ್ಕೆ ಖಮೇನಿ ಸ್ಥಳಾಂತರ
ಇರಾನ್ ಅಧ್ಯಕ್ಷರ ಭವನ, ಗುಪ್ತಚರ ಸಂಸ್ಥೆ, ವಿಮಾನ ನಿಲ್ದಾಣ, ಕೋಮ್ ನಗರ ಸೇರಿದಂತೆ ಸುಮಾರು 30 ಗುರಿಗಳನ್ನ ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿ ಮಾಡಲಾಗಿದೆ. ಈ ಬೆನ್ನಲ್ಲೇ ಅಮೆರಿಕ ಕೂಡ ಇರಾನ್‌ನಲ್ಲಿ ತನ್ನ ದಾಳಿಗಳು ಮುಂದುವರೆದಿವೆ ಎಂದು ಎಚ್ಚರಿಕೆ ನೀಡಿದೆ. ಮಿಸೈಲ್ ಗಳು ಇರಾನ್‌ಗೆ ಅಪ್ಪಳಿಸುತ್ತಿದ್ದಂತೆ ಸರ್ವೋಚ್ಛ ನಾಯಕ ಖಮೇನಿಯನ್ನ ಟೆಹ್ರಾನ್‌ನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಇಸ್ರೇಲ್ ಕೂಡ ಅಲರ್ಟ್
ಮಿಸೈಲ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನ ಹಾರಿಸುವ ಸಾಧ್ಯತೆ ಹಿನ್ನೆಲೆ ಸಾರ್ವಜನಿಕರನ್ನ ಎಚ್ಚರಿಸುತ್ತಿದೆ. ದೇಶಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ವಾಯುದಾಳಿ ಕುರಿತ ಸೈರನ್ ಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ.
















































































