ಅಗ್ನಿಶಾಮಕ ಠಾಣೆಯಲ್ಲಿರುವುದು ಒಂದೇ ವಾಹನ – ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ
ಕಾರ್ಕಳ : ಭುವನೇಂದ್ರ ಕಾಲೇಜು ಸಮೀಪದ ಇಂಡಸ್ಟ್ರೀಯಲ್ ಏರಿಯಾ ಹಾಗೂ ಪಳ್ಳಿ ಗ್ರಾಮದಲ್ಲಿ ಏಕಕಾಲದಲಿ ಫೆ. 28ರಂದು ಅಗ್ನಿ ಅವಘಡ ಸಂಭವಿಸಿದೆ. ಇಂಡಸ್ಟ್ರೀಯಲ್ ಏರಿಯಾದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಬಿಸಿಲಿನ ಬೇಗೆಗೆ ಒಣಗಿದ ಹುಲ್ಲು, ಪೊದೆಗಳಿಗೆ ಬೆಂಕಿ ಆವರಿಸಿಕೊಂಡಿದೆ. ಸ್ಥಳೀಯರು ನೀರು ಎರಚುವ ಮೂಲಕ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಅಗ್ನಿಶಾಮಕ ಠಾಣೆಯಲ್ಲಿ ವಾಹನ ಕೊರತೆ
ಪಳ್ಳಿ ಗ್ರಾಮದ ಗುಡ್ಡದಲ್ಲಿ ಬೆಂಕಿ ಹತ್ತಿಕೊಂಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಅಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೆ ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಕಳ, ಹೆಬ್ರಿ ಹಾಗೂ ಕಾಪು ಸೇರಿದಂತೆ ನೀರು ಹಾಯಿಸುವ (ವಾಟರ್ ಟ್ಯಾಂಕರ್) ಒಂದೇ ವಾಹನವಿದ್ದು, ಹಗಲು ರಾತ್ರಿ ಪಾಳಿಯಲ್ಲಿ ಒಟ್ಟು 14 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ವಾಹನದ ಕೊರತೆಯಿಂದಾಗಿ ಏಕ ಕಾಲದಲ್ಲಿ ವಿವಿಧೆಡೆ ಅಗ್ನಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ದಳಕ್ಕೆ ನಿರ್ವಹಣೆ ಕಷ್ಟ ಸಾಧ್ಯ. ಪರಿಣಾಮವಾಗಿ ಅನಾಹುತದ ಮಟ್ಟ ತೀವ್ರವಾಗುವ ಸಾಧ್ಯತೆಯಿದೆ.

ಪ್ರತ್ಯೇಕ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕಾಗಿ ಆಗ್ರಹ
ಕಾರ್ಕಳ ಅಗ್ನಿಶಾಮಕ ಠಾಣೆ ಕಾರ್ಕಳ ತಾಲೂಕಿನ ನಾರಾವಿ, ಇನ್ನಾ, ಹಿರಿಯಡ್ಕ, ಕುದುರೆಮುಖ ರಸ್ತೆಯ ಎಸ್.ಕೆ. ಬಾರ್ಡರ್, ಹೆಬ್ರಿ ತಾಲೂಕಿನ ಶೇಡಿಮನೆ, ಆಗುಂಬೆ, ಮಡಾಮಕ್ಕಿ, ಶಿವಪುರ, ಕಾಪು ತಾಲೂಕಿನ ಶಿರ್ವ, ಮುದರಂಗಡಿ, ಪಡುಬಿದ್ರಿ ಸೇರಿದಂತೆ ಒಟ್ಟು ಕಾರ್ಕಳದಿಂದ 60 ಕಿ.ಮೀ. ವ್ಯಾಪ್ತಿವರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಆದ್ದರಿಂದ ಠಾಣೆಯ ಮೇಲಿನ ಒತ್ತಡ ನಿಯಂತ್ರಣಕ್ಕಾಗಿ ಹೆಬ್ರಿ ಹಾಗೂ ಕಾಪು ತಾಲೂಕಿನಲ್ಲಿ ಪ್ರತ್ಯೇಕ ಅಗ್ನಿಶಾಮಕ ಠಾಣೆಗಳ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹ ಮಾಡುತ್ತಲೇ ಬರುತ್ತಿದ್ದಾರೆ.
























