ಕಾರ್ಕಳ : 2022ರ ಮಾ. 4ರಂದು ಈದು ಗ್ರಾಮದ ಸುಪ್ರೀಯಾ ಅವರು ಅವರ ತಂದೆ ಸುಧಾಕರ ಪೂಜಾರಿ ಹಾಗೂ ಸಹೋದರಿ ಸುಮಂಗಳ ಎಂಬವರೊಂದಿಗೆ ಕೃಷಿ ಕೆಲಸ ಮಾಡಿಕೊಂಡಿದ್ದಾಗ ಆ ಕೃಷಿ ಭೂಮಿಗೆ ಶಕುಂತಳಾ ಶೆಟ್ಟಿ ಮತ್ತವರ ಪತಿ ನಿತ್ಯಾನಂದ ಶೆಟ್ಟಿ ಅವರು ಅಕ್ರಮ ಪ್ರವೇಶ ಮಾಡಿ ಕೃಷಿ ಕೆಲಸ ಮಾಡದಂತೆ ತಡೆದು ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ತನಿಖೆ ನಡೆಸಿರುವ ಕಾರ್ಕಳದ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕೋಮಲ ಆರ್. ಸಿ. ಆರೋಪಿಗಳನ್ನು ದೋಷಾರೋಪದಿಂದ ಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ.
ಮಾತ್ರವಲ್ಲದೆ ಆರೋಪಿಗಳ ಪೈಕಿ ಶಕುಂತಳಾ ಶೆಟ್ಟಿ ಎಂಬವರು ಸುಪ್ರೀಯಾ, ಸುಧಾಕರ ಪೂಜಾರಿ ಹಾಗೂ ಸುಮಂಗಳ ವಿರುದ್ಧ ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿನಿಂದ ಬಚಾವಾಗಲು ಸುಪ್ರೀಯಾ ಮತ್ತು ಆಕೆಯ ತಂಡದವರು ಆರೋಪಿಗಳ ವಿರುದ್ಧ ಸುಳ್ಳು ದೂರು ದಾಖಲಿಸಿರುವ ಸಾಧ್ಯತೆಯ ಬಗ್ಗೆ ಆರೋಪಿಗಳ ಪರವಾಗಿ ವಾದ ಮಂಡಿಸಿರುವ ಕಾರ್ಕಳದ ನ್ಯಾಯವಾದಿ ಕೆ. ವಿಜೇಂದ್ರ ಕುಮಾರ್, ಮೋಹನ್ ಎಸ್. ಸಿ. ಮತ್ತು ವಿನ್ಯಶ್ರೀ ಎಂಬವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಗಳ ಮೇಲಿನ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿ ನಿರಪರಾಧಿ ಎಂಬುದಾಗಿ ತೀರ್ಪು ನೀಡಿರುತ್ತಾರೆ.



















