ಕಾಬೂಲ್ : ಪಾಕಿಸ್ತಾನ ಸೇನೆ ಅಫ್ಘಾನಿಸ್ತಾನದ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಪಾಕಿಸ್ತಾನದ ದಾಳಿಯನ್ನು ಅಪ್ರಚೋದಿತ ಅತಿಕ್ರಮಣ ಎಂದು ಕರೆದಿರುವ ಅಫ್ಘಾನಿಸ್ತಾನ ಪಡೆಗಳು ಗಡಿಯಲ್ಲಿ ದಾಳಿ ಆರಂಭಿಸಿವೆ. ಇದರಿಂದ ಎರಡು ನೆರೆಯ ದೇಶಗಳ ನಡುವಿನ ಸಂಘರ್ಷ ಉಲ್ಬಣಗೊಂಡಿದೆ.
ಪ್ರತಿದಾಳಿ ಪ್ರಗತಿಯಲ್ಲಿದೆ ಎಂದು ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ. ಪ್ರತಿಯೊಂದು ದಾಳಿಗೂ ಪ್ರಬಲ ಪ್ರತಿರೋಧ ಇದೆ ಎಂದು ಹೇಳಿದ್ದಾರೆ. 72 ಮಂದಿ ಅಫ್ಘಾನಿ ತಾಲಿಬಾನಿಗಳು ದಾಳಿಯಲ್ಲಿ ಮೃತಪಟ್ಟಿದ್ದು, 120 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ವಕ್ತಾರ ಮುಷ್ರಫ್ ಝಿಯಾದಿ ಹೇಳಿದ್ದಾರೆ. ಒಟ್ಟು 16 ತಾಲಿಬಾನ್ ನೆಲೆಗಳನ್ನು ನಾಶಪಡಿಸಲಾಗಿದ್ದು, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಡಿಪೋಗಳು, ಬೆಟಾಲಿಯನ್ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿ ಸೇರಿದಂತೆ ಏಳನ್ನು ವಶಪಡಿಸಿಕೊಳ್ಳಲಾಗಿದೆ. 36 ಟ್ಯಾಂಕ್ ಗಳು, ಬಂದೂಕು ಹಾಗೂ ಶಸ್ತ್ರಾಸ್ತ್ರ ಒಯ್ಯುತ್ತಿದ್ದವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಹೇಳಿಕೆ ಬೆನ್ನಲ್ಲೇ ಅಫ್ಘಾನಿಸ್ತಾನ ಪ್ರತಿದಾಳಿ ಆರಂಭಿಸಿದೆ. ಕಂದಹಾರ್ ಮತ್ತು ಹೆಲ್ಮಂಡ್ ದುರಂದ್ ಲೈನ್ ಉದ್ದಕ್ಕೂ ಪಾಕಿಸ್ತಾನ ಸೇನಾ ನೆಲೆಗಳನ್ನು ಗುರಿ ಮಾಡಿ ಪ್ರತಿದಾಳಿ ನಡೆದಿದೆ ಎಂದು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನದ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಪೂರ್ವ ಹಾಗೂ ಆಗ್ನೇಯ ಭಾಗದಲ್ಲಿ ಪ್ರತೀಕಾರದ ದಾಳಿ ಆರಂಭಿಸಿದ್ದಕ್ಕೆ ಪೂರಕವಾಗಿ ಈ ದಾಳಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಬಳಿಕ ಪಾಕಿಸ್ತಾನ ಸೇನೆ ಕಾಬೂಲ್, ಕಂದಹಾರ್ ಹಾಗೂ ಪಕ್ಟಿಯಾ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಈ ದಾಳಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮುಜಾಹಿದ್ ಸ್ಪಷ್ಟಪಡಿಸಿದ್ದಾರೆ.
ಕಾಬೂಲ್ ಮೇಲೆ ನಡೆದ ಪ್ರತಿದಾಳಿಯ ವಿಡಿಯೊ ಬಿಡುಗಡೆ ಮಾಡಿರುವ ಪಾಕಿಸ್ತಾನ ಈ ದಾಳಿಯಲ್ಲಿ ಕನಿಷ್ಠ 130 ಮಂದಿ ಹತರಾಗಿದ್ದಾರೆ ಎಂದು ಹೇಳಿಕೊಂಡಿದೆ.











