ಮಂಗಳೂರು : ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಪ್ರಯುಕ್ತ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮಹಾಮಸ್ತಾಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಮುಖ್ಯಮಂತ್ರಿಯವರಿಗೆ ಬೆಂಗಳೂರಿನಲ್ಲಿ ಬುಧವಾರ ಮನವಿ ಸಲ್ಲಿಸಿದರು.
1432ರಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕಾರ್ಕಳದ ಬಾಹುಬಲಿ ಸ್ವಾಮಿಯ ವಿಗ್ರಹಕ್ಕೆ 12 ವರ್ಷಗಳಿಗೊಮ್ಮೆ ಮಹಾಮಸ್ತಾಕಾಭಿಷೇಕ ನಡೆಯುತ್ತಿದೆ. ಈ ಹಿಂದೆ 1990ರಲ್ಲಿ, 2002ರಲ್ಲಿ ಹಾಗೂ 2015ರಲ್ಲಿ ಮಹಾಮಸ್ತಕಾಭಿಷೇಕ ಜರುಗಿದೆ. ಇದೀಗ 2027ರಲ್ಲಿ ಮಹಾಮಸ್ತಾಕಾಭಿಷೇಕ ಮಹೋತ್ಸವ ನೆರವೇರುವ ಸಂದರ್ಭದಲ್ಲಿ ಕಾರ್ಕಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಕಳ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಅನುದಾನವನ್ನು ಕರ್ನಾಟಕ ಸರಕಾರದ ವತಿಯಿಂದ ಬಿಡುಗಡೆಗೊಳಿಸುವ ಮುಖ್ಯಮಂತ್ರಿ ಅವರಲ್ಲಿ ವಿನಂತಿಸಿದರು.
ಮುನಿ ಮಹಾರಾಜರು ಮತ್ತು ಸ್ವಾಮೀಜಿಗಳು, ದೇಶ- ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸುತ್ತಿರುವುದರಿಂದ ಕಾರ್ಕಳದ ಪುರಸಭಾ ವ್ಯಾಪ್ತಿಯಲ್ಲಿ ಆಗಬೇಕಾದ ರಸ್ತೆ, ದಾರಿದೀಪ, ಚರಂಡಿ, ವಿದ್ಯುತ್, ನೀರಿನ ಸೌಕರ್ಯ ಮತ್ತು ಕಾರ್ಕಳ ನಗರವನ್ನು ಸಂಪರ್ಕಿಸುವ ರಸ್ತೆ, ಯಾತ್ರಿ ನಿವಾಸಗಳ ಅಭಿವೃದ್ಧಿ ಮುಂತಾದ ಮೂಲಭೂತ ಸೌಕರ್ಯವನ್ನು ಒದಗಿಸುವ ಕಾಮಗಾರಿಗಳಿಗೆ ರೂ. 77,87,52,000/- ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಇದಕ್ಕೆ ಸರಕಾರದಿಂದ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವಂತೆಯೂ ವಿನಂತಿಸಿದರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಾಮಸ್ತಾಕಾಭಿಷೇಕ ಸಮಿತಿಯ ಪುಷ್ಪರಾಜ್ ಜೈನ್, ಮೇಘರಾಜ್ ಆರ್. ಜೈನ್, ಸುನಿಲ್ ಕುಮಾರ್ ಬಜಗೋಳಿ, ವೃಷಭ ದೇವ ಅಧಿಕಾರಿ ಉಪಸ್ಥಿತರಿದ್ದರು.
























































































