ಕರಿಯಕಲ್ಲು ಸಾರ್ವಜನಿಕ ರುದ್ರಭೂಮಿಗೆ ಲಯನ್ಸ್‌ ಸಿಟಿಯಿಂದ ಇನ್ವರ್ಟರ್‌ ಕೊಡುಗೆ

ಕಾರ್ಕಳ : ಕರಿಯಕಲ್ಲು ಸಾರ್ವಜನಿಕ ರುದ್ರಭೂಮಿಗೆ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಇನ್ವರ್ಟರನ್ನು ಕೊಡುಗೆಯಾಗಿ ನೀಡಲಾಯಿತು. ಅಂತರಾಷ್ಟ್ರೀಯ ಲಯನ್ಸ್‌ ಜಲ್ಲೆ 317ಸಿ ಪ್ರಾಂತೀಯ ಅಧ್ಯಕ್ಷರ ಮತ್ತು ವಲಯಾಧ್ಯಕ್ಷರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಹೊಟೇಲ್‌ ಕಟೀಲು ಇಂಟರ್‌ನ್ಯಾಶನಲ್‌ನಲ್ಲಿ ನಡೆದ ಸಭೆಯಲ್ಲಿ ರುದ್ರಭೂಮಿ ನಿರ್ವಾಹಕ ಪ್ರಕಾಶ್‌ ರಾವ್‌ ಅವರಿಗೆ ಇನ್ವರ್ಟರ್‌ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂತೀಯ ಅಧ್ಯಕ್ಷ ಎಂಜೆಎಫ್‌ ಗುರುಪ್ರಸಾದ್‌ ಶೆಟ್ಟಿ, ಸೇವಾ ಮನೋಭಾವದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ಪಂದಿಸುತ್ತಿರುವ ಲಯನ್ಸ್‌ ಸಿಟಿ ಇನ್ನಷ್ಟು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಮಾಡುವಂತಾಗಲಿ ಎಂದು ಹೇಳಿದರು. ವಲಯಾಧ್ಯಕ್ಷ ಎಂಜೆಎಫ್‌ ದಿನೇಶ್‌ ಕುಮಾರ್‌ ವಲಯ ಸಭೆ ನಡೆಸಿ, ವಲಯದ ನಾಲ್ಕು ಕ್ಲಬ್‌ಗಳ ಕಾರ್ಯವೈಖರಿಯನ್ನು ಪರಿಗಣಿಸಿ ಪ್ರಮಾಣಪತ್ರ ವಿತರಿಸಿದರು. ಇದೇ ಸಂದರ್ಭ ಎಂಜೆಎಫ್ ರಂಜನ್‌ ಕಲ್ಕುರಾ ಅವರು ಬೀದಿಬದಿಯ ವ್ಯಾಪಾರಿಗಳಿಗೆ ಉಪಯೋಗವಾಗಲಿ ಎಂದು ನೆರಳು ಯೋಜನೆಯಡಿ 2 ದೊಡ್ಡ ಕೊಡೆಯನ್ನು ಹಸ್ತಾಂತರಿಸಿದರು.

ಪ್ರಾಂತೀಯ ಕಾರ್ಯದರ್ಶಿ ಸುರೇಶ್‌ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಮೂವರು ಸದಸ್ಯರು ಕ್ಲಬ್‌ಗೆ ಸೇರ್ಪಡೆಗೊಂಡರು. ಲಯನ್ಸ್‌ ಸಿಟಿ ಅಧ್ಯಕ್ಷ ಗೋಪಾಲ್‌ ಅಂಚನ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೋಗೇಶ್‌ ನಾಯಕ್‌, ಟಿ.ಕೆ. ರಘುವೀರ್‌, ರಘುನಾಥ್‌ ಕೆ.ಎಸ್‌., ಧರ್ಮರಾಜ್‌, ಧೀರಜ್‌ ಸೇರಿದಂತೆ ಪ್ರಾಂತ್ಯದ 12 ಕ್ಲಬ್ಬಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಶಾಂತ್‌ ಸಾಲ್ಯಾನ್‌ ಪ್ರಾರ್ಥಿಸಿದರು. ಕಾರ್ಯದರ್ಶಿ ನಿಹಾಲ್‌ ಶೆಟ್ಟಿ ಜಕ್ಕನ್ಮಕ್ಕಿ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್‌ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಶಾಲಿನಿ ಸುವರ್ಣ ವಂದಿಸಿದರು. ನಯನ ನಾಯಕ್‌, ಕೆ. ಪಿ. ಪದ್ಮಾವತಿ, ವೀಣಾ ಶೆಟ್ಟಿ ಸಹಕರಿಸಿದರು.

































error: Content is protected !!
Scroll to Top