ಕಾರ್ಕಳ: ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದ್ದು, ಆರ್ಥಿಕ ಮುಗ್ಗಟ್ಟಿನಿಂದಾಗಿ ಬಡವರ ಜನಪರ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ಜನದ್ರೋಹಿ ಕೆಲಸ ಮಾಡುತ್ತಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಕಟುವಾಗಿ ಟೀಕಿಸಿದ್ದಾರೆ.
ಅಭಿವೃದ್ಧಿಗೆ ಹಣ ನೀಡಲಾಗದ ಸ್ಥಿತಿಯಲ್ಲಿರುವ ಸರ್ಕಾರ, ಈ ಹಿಂದೆ ಜಾರಿಯಲ್ಲಿದ್ದ ಉತ್ತಮ ಯೋಜನೆಗಳಿಗೆ ಕತ್ತರಿ ಹಾಕುವ ಮೂಲಕ ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ನೆಪದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಅಂಗವಿಕಲ ವೇತನಗಳನ್ನು ಸರ್ಕಾರ ಮನಬಂದಂತೆ ರದ್ದುಗೊಳಿಸಿದೆ. ಕಾರ್ಕಳ ತಾಲೂಕಿನಾದ್ಯಂತ ಸಾವಿರಾರು ಫಲಾನುಭವಿಗಳ ಪಟ್ಟಿಯನ್ನು ಕಡಿತಗೊಳಿಸಿರುವುದು ಅಕ್ಷಮ್ಯ ಅಪರಾಧ.
ಅಗತ್ಯವಿರುವವರಿಗೆ ತಲುಪಬೇಕಾದ ಈ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಮೂಲಕ ಈಗಾಗಲೇ ನೊಂದಿರುವ ಕುಟುಂಬಗಳನ್ನು ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬಡವರು ಆರೋಗ್ಯ, ಮನೆ ನಿರ್ಮಾಣ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿರುವ ಬ್ಯಾಂಕ್ ಸಾಲಗಳ ವರದಿಯನ್ನೇ ನೆಪವಾಗಿಟ್ಟುಕೊಂಡು ಅವರ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್ ಇಲ್ಲದೆ ಬಡ ಕುಟುಂಬಗಳು ಲಕ್ಷಾಂತರ ರೂಪಾಯಿ ವೆಚ್ಚದ ಆರೋಗ್ಯ ಸೇವೆ ಪಡೆಯಲಾಗದೆ ಕಂಗಾಲಾಗಿವೆ. ಪ್ರತಿನಿತ್ಯ ಸಾವಿರಾರು ಜನರು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದರೂ, ಸರ್ಕಾರ ಮಾತ್ರ ಕುರುಡಾಗಿ ವರ್ತಿಸುತ್ತಿದೆ. ಬಡವರ ಮೇಲೆ ದಬ್ಬಾಳಿಕೆ ಮಾಡುವ ಇಂತಹ ಕೃತ್ಯಗಳನ್ನು ಜಿಲ್ಲಾಡಳಿತ ತಕ್ಷಣ ನಿಲ್ಲಿಸಬೇಕು ಎಂದು ನವೀನ್ ನಾಯಕ್ ಎಚ್ಚರಿಸಿದ್ದಾರೆ.
”ಸರ್ಕಾರ ಬಡವರ ಭಾಗ್ಯಗಳನ್ನು ಕಿತ್ತುಕೊಳ್ಳುವ ದುಷ್ಟ ಕೃತ್ಯಗಳನ್ನು ಮಾಡುತ್ತಿದೆ. ವಿಧವಾ ವೇತನ, ಅಂಗವಿಕಲ ವೇತನದಂತಹ ಅವಶ್ಯಕ ಸೇವೆಗಳನ್ನು ಸ್ಥಗಿತಗೊಳಿಸಿ ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಸರ್ಕಾರದ ಈ ನೀತಿಯನ್ನು ಕಾರ್ಕಳ ಬಿಜೆಪಿ ಅತ್ಯಂತ ಕಟುವಾಗಿ ಖಂಡಿಸುತ್ತದೆ. ಬಡವರ ಹಿತ ಕಾಯುವಲ್ಲಿ ಸೋತಿರುವ ಈ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಲಿ.”









































































