ಕಾರ್ಕಳದ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜಿನ ಮೊದಲ ಬ್ಯಾಚ್‌ ನ 4 ವಿದ್ಯಾರ್ಥಿಗಳಿಗೆ ವಿವಿ ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ

ಶಾಸಕ ವಿ ಸುನಿಲ್‌ ಕುಮಾರ್ ಅಭಿನಂದನೆ

ಕಾರ್ಕಳ: ಇಲ್ಲಿನ ಸರ್ಕಾರಿ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜಿನ ಪ್ರಥಮ ತಂಡದ ವಿದ್ಯಾರ್ಥಿಗಳು ತಮ್ಮ ಚೊಚ್ಚಲ ಪರೀಕ್ಷೆಯಲ್ಲೇ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 2022ರಲ್ಲಿ ಸ್ಥಾಪನೆಯಾದ ಈ ಕಾಲೇಜಿನ ಮೊದಲ ಬ್ಯಾಚ್‌ನ 32 ವಿದ್ಯಾರ್ಥಿಗಳು ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಳಿಸಿದ್ದು, ಈ ಪೈಕಿ ನಾಲ್ವರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
​ಸಾಧಕರ ವಿವರ: ಮೈಕ್ರೋಬಯಾಲಜಿ ವಿಭಾಗದಲ್ಲಿ ಕೃತಿ ಎ. (5ನೇ ರ್ಯಾಂಕ್) ಹಾಗೂ ರಿಸರ್ಚ್ ಅಂಡ್ ಸ್ಟಾಟಿಸ್ಟಿಕ್ಸ್‌ನಲ್ಲಿ (9ನೇ ರ್ಯಾಂಕ್) ಪಡೆದರೆ, ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದಲ್ಲಿ ವಸಂತಿ ಬಾಲು ನಾಯಕ್ (7ನೇ ರ್ಯಾಂಕ್) ಗಳಿಸಿದ್ದಾರೆ. ಫಾರ್ಮಕಾಲಜಿ ವಿಭಾಗದಲ್ಲಿ ನಿಶಾ ಥಾಮಸ್ (8ನೇ ರ್ಯಾಂಕ್) ಮತ್ತು ನ್ಯೂಟ್ರಿಷನ್ ವಿಭಾಗದಲ್ಲಿ ವಿನೋದ್ ಶಿದ್ದಲಿಂಗಪ್ಪ ಶಿವನಗುಟ್ಟಿ (9ನೇ ರ್ಯಾಂಕ್) ಪಡೆದು ಕಾಲೇಜಿನ ಹೆಗ್ಗಳಿಕೆಯನ್ನು ಹೆಚ್ಚಿಸಿದ್ದಾರೆ.
​ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ: ಪರೀಕ್ಷೆಗೆ ಹಾಜರಾದ ಒಟ್ಟು 32 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ (Distinction) ಹಾಗೂ 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಶೇ. 100ರ ಸಮೀಪದ ಫಲಿತಾಂಶ ದಾಖಲಿಸಿದ್ದಾರೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಕಾಲೇಜಿನ ಆಶಯಕ್ಕೆ ಈ ಫಲಿತಾಂಶ ಹಿಡಿದ ಕನ್ನಡಿಯಾಗಿದೆ.
​ಅಭಿವೃದ್ಧಿಯ ಪಥ: ಉಡುಪಿ ಜಿಲ್ಲೆಯ ಪ್ರಥಮ ಸರ್ಕಾರಿ ನರ್ಸಿಂಗ್ ಕಾಲೇಜು ಇದಾಗಿದ್ದು, ಸ್ಥಳೀಯ ಉದ್ದಿಮೆಗಳ CSR ಅನುದಾನ ಹಾಗೂ ಸರ್ಕಾರದ ಸಹಯೋಗದೊಂದಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಕಾಲೇಜಿನ ಸ್ವಂತ ಕಟ್ಟಡಕ್ಕಾಗಿ ಜಾಗ ಕಾಯ್ದಿರಿಸಲಾಗಿದ್ದು, ಶೀಘ್ರದಲ್ಲೇ ಅನುದಾನ ಬಿಡುಗಡೆಯ ನಿರೀಕ್ಷೆಯಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
​ಗಣ್ಯರ ಅಭಿನಂದನೆ: ಕಾಲೇಜಿನ ಈ ಭವ್ಯ ಸಾಧನೆಗೆ ಶ್ರಮಿಸಿದ ಆಡಳಿತ ವೈದ್ಯಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದ ಮತ್ತು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಿಗೆ ಶಾಸಕ ಸುನಿಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಆರಂಭಿಕ ಹಂತದಲ್ಲೇ ರಾಷ್ಟ್ರೀಯ ಮಟ್ಟದ ಗುಣಮಟ್ಟ ತೋರುತ್ತಿರುವ ಕಾಲೇಜಿನ ಶೈಕ್ಷಣಿಕ ವಾತಾವರಣಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.



































































































error: Content is protected !!
Scroll to Top