ಕಾರ್ಕಳ : ಬದಲಾವಣೆ ಎಂಬುದು ಜಗತ್ತಿನ ನಿಯಮ, ಆದರೆ ಆ ಬದಲಾವಣೆ ಸಮಾಜಕ್ಕೆ ಉಪಯುಕ್ತವಾದಾಗ ಅದು ಇತಿಹಾಸವಾಗುತ್ತದೆ. ಕಳೆದ 22 ವರ್ಷಗಳಿಂದ ನಾನು ಪಳ್ಳಿ ಕಣಜಾರು ಗ್ರಾಮಕ್ಕೆ ಜಾರ್ಕಳ ಮಾರ್ಗವಾಗಿ ಸಂಚರಿಸುತ್ತಿದ್ದೆ. ಅಂದು ಬರಿ ಬಂಡೆಕಲ್ಲುಗಳು, ಪೊದೆಗಳಿಂದ ಕೂಡಿದ್ದ ಜಾಗವು ಇಂದು ‘ಗಣಿತನಗರ’ವಾಗಿ ಮಾರ್ಪಟ್ಟು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವುದನ್ನು ಕಂಡಾಗ ಅಚ್ಚರಿಯ ಜೊತೆಗೆ ಹೆಮ್ಮೆಯೂ ಎನಿಸುತ್ತದೆ.
ಶೂನ್ಯದಿಂದ ಸೃಷ್ಟಿಯಾದ ಜ್ಞಾನದೇಗುಲ
ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ಬಂಡೆಗಳನ್ನು ಸಮತಟ್ಟು ಮಾಡಿ, ಅದಕ್ಕೊಂದು ಸುಂದರ ರೂಪ ನೀಡಿ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿ ಡಾ. ಸುಧಾಕರ್ ಶೆಟ್ಟಿಯವರಿಗೆ ಸಲ್ಲುತ್ತದೆ. ಅವರ ನಿರಂತರ ಶ್ರಮದಿಂದಾಗಿ ಇಂದು ನಮ್ಮೂರಿನ ಮಕ್ಕಳು ಮಾತ್ರವಲ್ಲದೆ, ದೇಶ-ವಿದೇಶದ ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾರ್ಜನೆಗಾಗಿ ಬರುತ್ತಿದ್ದಾರೆ. ಕಾರ್ಕಳದ ಹೆಸರನ್ನು ಶೈಕ್ಷಣಿಕ ಭೂಪಟದಲ್ಲಿ ಉತ್ತುಂಗಕ್ಕೆ ಏರಿಸಿದ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ.

ಗುರು ಗೌರವ ಮತ್ತು ಸಂಸ್ಕಾರದ ನೆಲೆವೀಡು
ನನ್ನನ್ನು ಭಾವಪರವಶಳನ್ನಾಗಿ ಮಾಡಿದ ಸಂಗತಿಯೆಂದರೆ ಇಲ್ಲಿನ ಶಿಕ್ಷಕ ದಿನಾಚರಣೆ. ಸಂಸ್ಥೆಯ ಸಿಬ್ಬಂದಿಗಳು ನನ್ನನ್ನು ಆಹ್ವಾನಿಸಿ, ಚಂಡೆ ವಾದನದೊಂದಿಗೆ ಮಕ್ಕಳ ತಂಡದೊಡನೆ ಸ್ವಾಗತಿಸಿ, ಸನ್ಮಾನಿಸಿ ‘ಗುರುಕಾಣಿಕೆ’ ನೀಡುವ ಪದ್ಧತಿಯನ್ನು ನಾನು ಕಂಡಿದ್ದೇನೆ. ಹಿರಿಯ ಶಿಕ್ಷಕರನ್ನು ಗೌರವಿಸುವ ಈ ಸಂಸ್ಕಾರವೇ ಸಂಸ್ಥೆಯ ಶಕ್ತಿಯಾಗಿದೆ. ಇಲ್ಲಿ ಕಲಿಕೆ ಮಾತ್ರವಲ್ಲದೆ, ‘ಮೌಲ್ಯಸುಧಾ’ದಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕ ಗುಣಗಳನ್ನು ಬಿತ್ತಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ವೇಳೆ ಇಲ್ಲಿ ಮೂಡಿಬಂದ ರಾಮಾಯಣದ ಸನ್ನಿವೇಶಗಳು ಮತ್ತು ಭಜನಾ ಕಾರ್ಯಕ್ರಮಗಳು ಇಂದಿಗೂ ನನ್ನ ಕಣ್ಣಮುಂದಿವೆ.


ಅಜೆಕಾರಿನಲ್ಲಿ ಹೊಸ ಅಧ್ಯಾಯದ ಆರಂಭ
ಡಾ. ಸುಧಾಕರ್ ಶೆಟ್ಟಿಯವರಿಗೆ ತಮ್ಮ ತಂದೆ-ತಾಯಿಯ ಮೇಲಿರುವ ಭಕ್ತಿ ಅಪಾರ. ಅವರ ತಾಯಿಯ ನೂರನೇ ವರ್ಷದ ಸವಿನೆನಪಿಗಾಗಿ ಅಜೆಕಾರು ಪದ್ಮನಗರದಲ್ಲಿ ನೂತನ ‘ಜ್ಞಾನಸುಧಾ’ ವಿದ್ಯಾಸಂಸ್ಥೆ ತಲೆಯೆತ್ತಿದೆ. ಏಪ್ರಿಲ್ 10 ರಿಂದ 14ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ಜ್ಞಾನದೇಗುಲ ಲೋಕಾರ್ಪಣೆಗೊಳ್ಳುತ್ತಿದೆ. ಪ್ರತಿಯೊಂದು ಸಂಸ್ಥೆಯ ಮುಂಭಾಗದಲ್ಲಿ ವಿಘ್ನವಿನಾಶಕ ಗಣಪತಿಯನ್ನು ಪ್ರತಿಷ್ಠಾಪಿಸಿ, ದೈವಿಕ ಭಕ್ತಿಯೊಂದಿಗೆ ಶೈಕ್ಷಣಿಕ ಕಾಯಕ ಮಾಡುತ್ತಿರುವುದು ಶ್ಲಾಘನೀಯ.
ಕಾರ್ಕಳ, ಮಣಿಪಾಲ, ಉಡುಪಿಯ ನಂತರ ಈಗ ಅಜೆಕಾರಿನಲ್ಲೂ ಜ್ಞಾನದ ಜ್ಯೋತಿ ಬೆಳಗುತ್ತಿದೆ. ಇಂತಹ ಪವಿತ್ರ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳೇ ಪುಣ್ಯವಂತರು. ಈ ಸಂಸ್ಥೆಯ ರೂವಾರಿಗಳಾದ ಡಾ. ಸುಧಾಕರ್ ಶೆಟ್ಟಿಯವರಿಗೆ, ಆಡಳಿತ ಮಂಡಳಿ ಹಾಗೂ ಸಮಸ್ತ ಸಿಬ್ಬಂದಿ ವರ್ಗಕ್ಕೆ ನನ್ನ ನಮನಗಳು. ಅಜೆಕಾರಿನ ನೂತನ ಸಂಸ್ಥೆಗೆ ಶುಭವಾಗಲಿ.
























