ಟೆಹ್ರಾನ್: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸುವ ಕುರಿತು ಅಮೆರಿಕ ನೀಡಿರುವ ಗಡುವು ಮಂಗಳವಾರಕ್ಕೆ ಅಂತ್ಯವಾಗುತ್ತಿರುವ ಬೆನ್ನಲ್ಲೇ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕದ ಯಾವುದೇ ಬೆದರಿಕೆಗಳಿಗೆ ತಾವು ಮಣಿಯುವುದಿಲ್ಲ ಎಂದು ಘೋಷಿಸಿರುವ ಅವರು, ದೇಶದ ರಕ್ಷಣೆಗಾಗಿ ತಾನು ಸೇರಿದಂತೆ 14 ಮಿಲಿಯನ್‌ಗಿಂತಲೂ (1.4 ಕೋಟಿ) ಹೆಚ್ಚು ಇರಾನಿಯನ್ನರು ಪ್ರಾಣತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದು ಗುಡುಗಿದ್ದಾರೆ. ಇದು ಇರಾನ್ ಜನರ ಅಚಲ ಬದ್ಧತೆ ಹಾಗೂ ದೇಶಪ್ರೇಮದ ಸಂಕೇತ ಎಂದು ಅವರು ಬಣ್ಣಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು ಮರು ತೆರೆಯಲು ಇರಾನ್‌ಗೆ ಅಂತಿಮ ಗಡುವು ನೀಡಿದ್ದು, ಒಂದೊಮ್ಮೆ ಒಪ್ಪಂದಕ್ಕೆ ಬರದಿದ್ದರೆ ಇಡೀ ಇರಾನ್ ದೇಶವನ್ನು ಸ್ಫೋಟಿಸುವುದಾಗಿ ಎಚ್ಚರಿಸಿದ್ದಾರೆ. ಇರಾನ್‌ನ ಪ್ರತಿಯೊಂದು ಸೇತುವೆ, ವಿದ್ಯುತ್ ಸ್ಥಾವರ ಹಾಗೂ ಪೆಟ್ರೋಕೆಮಿಕಲ್ ಘಟಕಗಳನ್ನು ನಾಶಪಡಿಸುವುದಾಗಿ ಟ್ರಂಪ್ ನೀಡಿರುವ ಗಂಭೀರ ಬೆದರಿಕೆಯು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡವನ್ನು ಮತ್ತಷ್ಟು ದಟ್ಟವಾಗಿಸಿದೆ.
ಈ ನಡುವೆ, ಗಡುವು ಮುಗಿಯುವ ಮುನ್ನವೇ ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಇರಾನ್ ಮೇಲೆ ವಾಯುದಾಳಿ ಆರಂಭಿಸಿವೆ ಎಂದು ವರದಿಯಾಗಿದೆ. ಇರಾನ್‌ನ ಖೋರಾಮಾಬಾದ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿರುವುದನ್ನು ಮೆಹರ್ ಸುದ್ದಿ ಸಂಸ್ಥೆ ಖಚಿತಪಡಿಸಿದೆ. ಅಲ್ಲದೆ, ಇಸ್ರೇಲ್ ಸೇನೆಯು ಇರಾನ್‌ನ ಸುಮಾರು 130ಕ್ಕೂ ಹೆಚ್ಚು ವಾಯು ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿದ್ದು, ಶಿರಾಜ್ ನಗರದ ಪ್ರಮುಖ ಪೆಟ್ರೋಕೆಮಿಕಲ್ ಸಂಕೀರ್ಣವನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ದಾಳಿಗೊಳಗಾದ ಪೆಟ್ರೋಕೆಮಿಕಲ್ ಸಂಕೀರ್ಣವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಸ್ಫೋಟಕಗಳ ತಯಾರಿಕೆಗೆ ಅಗತ್ಯವಾದ ರಾಸಾಯನಿಕಗಳನ್ನು ಉತ್ಪಾದಿಸುತ್ತಿತ್ತು ಎಂದು ಇಸ್ರೇಲ್ ಪ್ರತಿಪಾದಿಸಿದೆ. ಅಮೆರಿಕದ ಆರ್ಥಿಕ ದಿಗ್ಬಂಧನ ಹಾಗೂ ಸರಣಿ ವಾಯುದಾಳಿಗಳಿಂದ ಇರಾನ್ ಸಂಕಷ್ಟಕ್ಕೆ ಸಿಲುಕಿದ್ದರೂ, ಅಧ್ಯಕ್ಷ ಪೆಜೆಶ್ಕಿಯಾನ್ ಮಾತ್ರ ಹೋರಾಟದ ಹಾದಿಯನ್ನು ಆಯ್ದುಕೊಂಡಿದ್ದು, ಇಡೀ ವಿಶ್ವದ ಗಮನ ಈಗ ಇರಾನ್ ಗಡಿಯತ್ತ ನೆಟ್ಟಿದೆ.
ಅಮೆರಿಕ ಬೆದರಿಕೆಗೆ ಮಣಿಯದ ಇರಾನ್: ಪ್ರಾಣತ್ಯಾಗಕ್ಕೆ 1.4 ಕೋಟಿ ಜನ ಸಜ್ಜು





