ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು:ಲಾಕ್ ಡೌನ್ಗೆ ಸಿದ್ಧತೆ

ಮಾರುಕಟ್ಟೆ, ಮಾಲ್‌ಗಳಿಗೆ ರಾತ್ರಿ 8 ಗಂಟೆಯ ಗಡುವು

ಇಸ್ಲಾಮಾಬಾದ್: ತೀವ್ರಗೊಂಡಿರುವ ಜಾಗತಿಕ ಇಂಧನ ಬೆಲೆ ಏರಿಕೆ ಹಾಗೂ ದೇಶೀಯವಾಗಿ ಎದುರಾಗಿರುವ ತೈಲ ಕೊರತೆಯನ್ನು ನೀಗಿಸಲು ಪಾಕಿಸ್ತಾನ ಸರ್ಕಾರವು ಕಠಿಣ ನಿರ್ಧಾರ ಕೈಗೊಂಡಿದೆ. ಇಂಧನ ಉಳಿತಾಯ ಮಾಡುವ ನಿಟ್ಟಿನಲ್ಲಿ ದೇಶಾದ್ಯಂತ ಭಾಗಶಃ ಲಾಕ್‌ಡೌನ್ ಮಾದರಿಯ ನಿಯಮಗಳನ್ನು ಜಾರಿಗೊಳಿಸಿದ್ದು, ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಪ್ರತಿದಿನ ರಾತ್ರಿ 8 ಗಂಟೆಗೆ ಕಡ್ಡಾಯವಾಗಿ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಡಿಎನ್‌ಎ ವರದಿ ಮಾಡಿದೆ.
​ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ನಡೆದ ಪೆಟ್ರೋಲಿಯಂ ಉತ್ಪನ್ನಗಳ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು ಈ ಕ್ರಮ ಅನಿವಾರ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಹೊಸ ನಿಯಮದನ್ವಯ ಇಸ್ಲಾಮಾಬಾದ್, ಬಲೂಚಿಸ್ತಾನ್, ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಪ್ರಮುಖ ಪ್ರಾಂತ್ಯಗಳಲ್ಲಿ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ಹಾಗೂ ಇಲಾಖಾ ಸ್ಟೋರ್‌ಗಳು ನಿಗದಿತ ಸಮಯದೊಳಗೆ ವಹಿವಾಟು ಸ್ಥಗಿತಗೊಳಿಸಬೇಕಿದೆ.
​ಇನ್ನುಳಿದಂತೆ ರೆಸ್ಟೋರೆಂಟ್‌ಗಳು, ಬೇಕರಿಗಳು, ಆಹಾರ ಕೇಂದ್ರಗಳು ಹಾಗೂ ವಿವಾಹ ಮಂಟಪಗಳಿಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ವಿಶೇಷವೆಂದರೆ, ರಾತ್ರಿ 10 ಗಂಟೆಯ ನಂತರ ಖಾಸಗಿ ನಿವಾಸಗಳಲ್ಲಿ ನಡೆಯುವ ಮದುವೆ ಸಮಾರಂಭಗಳಿಗೂ ನಿಷೇಧ ಹೇರಲಾಗಿದ್ದು, ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
​ಇಂಧನ ಉಳಿತಾಯದ ಈ ಅಭಿಯಾನದ ಭಾಗವಾಗಿ ಈಗಾಗಲೇ ದೇಶದಾದ್ಯಂತ ಶಾಲೆಗಳನ್ನು ಒಂದು ತಿಂಗಳ ಅವಧಿಗೆ ಮುಚ್ಚಲಾಗಿದೆ. ಖೈಬರ್ ಪಖ್ತುನ್ಖ್ವಾದ ಆಯ್ದ ಭಾಗಗಳಲ್ಲಿ ಮಾರುಕಟ್ಟೆಗಳಿಗೆ ರಾತ್ರಿ 9 ಗಂಟೆಯವರೆಗೆ ಸಡಿಲಿಕೆ ನೀಡಲಾಗಿದ್ದರೂ, ಉಳಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಕತ್ತರಿ ಬಿದ್ದಿದೆ. ಆರ್ಥಿಕ ದಿವಾಳಿತನದ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಸದ್ಯ ಈ ನಿಯಂತ್ರಣ ಕ್ರಮಗಳೇ ದಾರಿಯಾಗಿವೆ.





























































































error: Content is protected !!
Scroll to Top