ಉಡುಪಿ : ತುಳುನಾಡಿನಲ್ಲಿ ದೇವತಾರಾಧನೆ, ದೈವಾರಾಧನೆ, ನಾಗಾರಾಧನೆಗೆ ವಿಶೇಷ ಪ್ರಾಮುಖ್ಯತೆ ಇದೆ. ಕಾರ್ಕಳ ತಾಲೂಕು ಶಿರ್ಲಾಲು ಪಂಗ್ಲಬೆಟ್ಟು ಶ್ರೀ ಬ್ರಹ್ಮಮುಗೇರ್ಕಳ ಕ್ಷೇತ್ರದ ವರ್ಧಂತ್ಯುತ್ಸವದಲ್ಲಿ ತನ್ನಿಮಾನಿಗ ನೇಮದಲ್ಲಿ 7ನೇ ತರಗತಿಯ ವಿದ್ಯಾರ್ಥಿ ಸಮರ್ಥ್ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿರುವುದು ಗಮನ ಸೆಳೆದಿದೆ. ದೈವ ಕುಣಿತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಿರ್ಲಾಲು ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿರುವ ಸಮರ್ಥ್ ತನ್ನ ಅಜ್ಜ ಮತ್ತು ತಂದೆ ಮಾಡುವ ದೈವನರ್ತನವನ್ನು ನೋಡಿಕೊಂಡು ಬೆಳೆದವನು. ಸಮರ್ಥ್ ಅಜ್ಜ ಪ್ರಸಿದ್ಧ ದೈವ ನರ್ತಕ ದಿ. ಮೋನು ಪಾಣಾರ ಮೊಮ್ಮಗ. ಇದೀಗ ಸಣ್ಣ ವಯಸ್ಸಿನಲ್ಲೇ ದೈವನರ್ತನ ಸಿದ್ದಿಸಿಕೊಂಡಿದ್ದಾನೆ ಸಮರ್ಥ್. ಆತನ ತಂದೆ ಹರೀಶ ಅವರ ಮಾರ್ಗದರ್ಶದಲ್ಲಿ ಸಮರ್ಥ್ ತನ್ನಿಮಾನಿಗ ದೈವಕ್ಕೆ ಬಣ್ಣ ಹಚ್ಚಿದ್ದಾನೆ.
11 ವರ್ಷದ ಬಾಲಕ ತನ್ನಿಮಾನಿಗ ದೈವದ ಗಗ್ಗರ ಕಟ್ಟಲು ಇರುವ ಸಂಪ್ರದಾಯ, ಕಟ್ಟುಪಾಡುಗಳನ್ನು ಪಾಲಿಸಿಕೊಂಡು ನರ್ತನ ಮಾಡಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಈ ಮೂಲಕ ತುಳುನಾಡಿನ ಆಚರಣೆ, ಸಂಸ್ಕೃತಿಯನ್ನು ಅನುಕರಣೆ ಮಾಡಿಕೊಂಡಿರುವುದು ಇದೀಗ ವ್ಯಾಪಕ ಸುದ್ದಿಗೆ ಕಾರಣವಾಗಿದೆ. ಕಳೆದ ವರ್ಷವೂ ಇದೇ ಬಾಲಕನ ದೈವನರ್ತಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.





































