ಮದುವೆಯಾಗುವುದಾಗಿ ನಂಬಿಸಿ ಲಿವ್‌ಇನ್ ರಿಲೇಷನ್ಶಿಪ್‌ನಲ್ಲಿದ್ದ ಯುವಕ ನಾಪತ್ತೆ: ಯುವತಿಯಿಂದ ದೂರು

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಯುವತಿ

ಹಾಸನ: ಮದುವೆಯಾಗುವುದಾಗಿ ನಂಬಿಸಿ ಲಿವ್ ಇನ್ ರಿಲೇಷನ್‌ನಲ್ಲಿದ್ದ ಪ್ರಿಯಕರ ಕೈಕೊಟ್ಟು ನಾಪತ್ತೆಯಾಗಿದ್ದಾನೆ ಎಂದು ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದು, ಆತ ಮದುವೆಯಾಗದೇ ಹೋದಲ್ಲಿ ತಾನು ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಕಣ್ಣೀರಿಟ್ಟಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಪತ್ತೆಯಾದ ಯುವಕನನ್ನು ಚೆನ್ನರಾಯಪಟ್ಟಣದ ಕಲ್ಲೇಸೋಮಹಳ್ಳಿಯ ಸೂರ್ಯ (26) ಎಂದು ಗುರುತಿಸಲಾಗಿದೆ.
ಕೇರಳ ಮೂಲದ ನಿಷ್ಮಾ(26) ದೂರು ನೀಡಿರುವ ಯುವತಿ. ಇವರಿಬ್ಬರೂ ಕಳೆದ ಐದಾರು ತಿಂಗಳಿನಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು‌. ಸೂರ್ಯನ ಪೋಷಕರಿಗೆ ಇವರಿಬ್ಬರ ಪ್ರೀತಿಯ ವಿಷಯ ಗೊತ್ತಿದ್ದು ಆರಂಭದಲ್ಲಿ ಮದುವೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಆ ಬಳಿಕ ಅಂತರ್ಜಾತಿ ವಿವಾಹ ಎಂದು ಇವರಿಬ್ಬರ ಪ್ರೀತಿಯನ್ನು ವಿರೋಧಿಸಿದ್ದರು. ನಿಷ್ಮಾ ಪೋಷಕರು ಸಹ ಈ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಇವರಿಬ್ಬರೂ ಒಂದೇ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು.

ಸೆ. 24 ರಂದು ಸೂರ್ಯ ತನ್ನ ಮೊಬೈಲ್ ಫೋನ್ ಬಿಟ್ಟು ಪರಾರಿಯಾಗಿದ್ದಾನೆ.ಆತನ ಸ್ನೇಹಿತ ಪ್ರವೀಣ್ ತನ್ನ ಬಗ್ಗೆ ಸೂರ್ಯನ ಪೋಷಕರಲ್ಲಿ ಇಲ್ಲಸಲ್ಲದ್ದನ್ನು ಹೇಳಿದ್ದು, ಇದರಿಂದ ಆತನ ಮನೆಯವರು ಮದುವೆ ನಿರಾಕರಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಜೊತೆಗೆ ಗುರುವಾರದೊಳಗಾಗಿ ಸೂರ್ಯ ಬರದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ಸೂರ್ಯ, ಅವನ ಪೋಷಕರು ಮತ್ತು ಅವನ ಗೆಳೆಯ ಪ್ರವೀಣ್ ಕಾರಣರಾಗಿರುತ್ತಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ.



















































































error: Content is protected !!
Scroll to Top