ಕಾರ್ಕಳ : ಸಾಮಾಜಿಕ ಜಾಲತಾಣದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಬಗ್ಗೆ ನಿಂದನಾತ್ಮಕ ಪೋಸ್ಟ್ ಹಾಕಿರುವ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇನ್ನಾ ಗ್ರಾಮದ ಯೋಗೀಶ್ ನಯನ್ ಇನ್ನಾನನ್ನು ಬಂಧಿಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಯೋಗೀಶ್ ನಯನ್ ಇನ್ನಾ ಮತ್ತು ಹಿರ್ಗಾನ ಚಿಕ್ಕಲ್ ಬೆಟ್ಟು ನಿವಾಸಿ ರಾಧಾಕೃಷ್ಣ ನಾಯಕ್ ಅವರು ಕೊರೋನಾ ಸಂದರ್ಭ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಕಾರ್ಕಳ ಶಾಸಕರು ಗೇರುಬೀಜ ಕಂಪನಿಯವರ ಪರವಾಗಿದ್ದು, ಗೇರುಬೀಜ ಕಂಪೆನಿಯವರು ಶಾಸಕರಿಗೆ ಚುನಾವಣಾ ಸಮಯದಲ್ಲಿ ದೇಣಿಗೆ ನೀಡುತ್ತಿರುವುದರಿಂದ ಕೋವಿಡ್ ಸಮಯದಲ್ಲಿ ಅವರ ಕಾರ್ಖಾನೆ ತೆರೆಯಲು ಸಹಾಯ ಮಾಡಿರುತ್ತಾರೆ. ಶಾಸಕರು ಬಂಡವಾಳಶಾಹಿಗಳ ಪರವಾಗಿದ್ದು, ಜನಸಾಮಾನ್ಯರ ಪರವಾಗಿಲ್ಲ. ಶಾಸಕರು ಅನ್ನದ ಬದಲು ಗೋಡಂಬಿಯನ್ನು ತಮ್ಮ ಊಟಕ್ಕೆ ಉಪಯೋಗಿಸಿರುತ್ತಾರೆ. ತಮಗೆ ನೀಡುವವರ ಬಗ್ಗೆ ಹೆಚ್ಚು ಕಾಳಜಿವುಳ್ಳವಾಗಿರುತ್ತಾರೆ ಎಂಬ ಪೋಸ್ಟ್ಗಳನ್ನು ಹಾಕಿದ್ದರು. ಇಂತಹ ಬರಹಗಳಿಂದ ತಮ್ಮ ಘನತೆಗೆ, ಭಾವನೆಗಳಿಗೆ ಹಾಗೂ ಹೆಸರಿಗೆ ಧಕ್ಕೆಯಾಗಿರುತ್ತದೆ. ಇದನ್ನು ನಿರ್ಬಂಧಿಸಬೇಕು ಮತ್ತು ನಷ್ಟ ಭರ್ತಿಯನ್ನು ನೀಡಬೇಕು ಎಂದು ಕೋರಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಬೆಂಗಳೂರಿನ 12ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲದಲ್ಲಿ ದಾವೆ ಸಲ್ಲಿಸಿದ್ದರು.
ನ್ಯಾಯಾಲಯವು ಕಳೆದ ಜನವರಿಯಲ್ಲಿ ತೀರ್ಪು ನೀಡಿದ್ದು ಅವರಿಬ್ಬರೂ ಶಾಸಕ ಸುನಿಲ್ ಕುಮಾರ್ ಅವರಲ್ಲಿ ಬೇಷರತ್ ಕ್ಷಮಾಪಣೆ ಯಾಚಿಸಬೇಕು ಮತ್ತು ನಷ್ಟ ಭರ್ತಿ ಪರಿಹಾರ ನೀಡಬೇಕೆಂದು ಆದೇಶಿಸಿತ್ತು.
ರಾಧಾಕೃಷ್ಣ ನಾಯಕ್ ಈಗಾಗಲೇ ಬೇಷರತ್ ಕ್ಷಮೆಯಾಚಿಸಿ ಭಾಗಶಃ ಪರಿಹಾರ ಮೊತ್ತವನ್ನು ನ್ಯಾಯಾಲಯಕ್ಕೆ ಜಮೆ ಮಾಡಿರುತ್ತಾರೆ. ಆದರೆ, ಯೋಗೀಶ್ ನಯನ್ ಇನ್ನಾ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳದೇ ಇದ್ದುದರಿಂದ ಅವರ ವಿರುದ್ಧ ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಆರ್.ಸಿ. ಯೋಗೀಶ್ ಇನ್ನಾ ಅವರನ್ನು ಬಂಧಿಸಿ ತರುವಂತೆ ಪೊಲೀಸರಿಗೆ ಆದೇಶಿಸಿರುತ್ತಾರೆ. ಯೋಗೀಶ್ ನಯನ ಇನ್ನಾ ಇವರನ್ನು ಬಂಧಿಲು ನ್ಯಾಯಾಲಯದ ಅಮೀನ್ ಅವರಿಗೆ ಸಹಕಾರ ನೀಡುವಂತೆ ಹಾಗೂ ಬಂಧನ ಮಾಡುವ ಸಂದರ್ಭದಲ್ಲಿ ಮಹಿಳಾ ಪೊಲೀಸರೂ ಸಹ ಇರುವಂತೆ ನೋಡಿಕೊಳ್ಳಲು ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ನ್ಯಾಯಾಧೀಶರು ನಿರ್ದೇಶನ ನೀಡಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸುನಿಲ್ ಕುಮಾರ್ ನಿಂದನೆ – ಯುವ ಕಾಂಗ್ರೆಸ್ ಮುಖಂಡ ಯೋಗೀಶ್ ಬಂಧನಕ್ಕೆ ನ್ಯಾಯಾಲಯ ನಿರ್ದೇಶನ





































