ಪ್ರತಿಯೊಂದು ಕುಟುಂಬದಲ್ಲಿ ಪತಿ-ಪತ್ನಿಯರ ನಡುವೆ ಉಂಟಾಗುವ ಕೌಟುಂಬಿಕ ವಿವಾದಗಳು ಭಾವನಾತ್ಮಕ ಸ್ವರೂಪದ್ದಾಗಿರುತ್ತದೆ. ಹೀಗಿರುವಾಗ್ಗೆ ವಿವಾಹ ಮತ್ತು ಕೌಟುಂಬಿಕ ವ್ಯವಹಾರಗಳಿಗೆ ಸಂಬಂಂಧಿಸಿದ ವಿವಾದಗಳಲ್ಲಿ ಸಂಧಾನವನ್ನು ಪ್ರವರ್ಧಿಸಲು ಮತ್ತು ಇಂತಹ ವಿವಾದಗಳನ್ನು ವಿಶೇಷ ಕಾಳಜಿಯಿಂದ ವ್ಯವಹರಿಸಿ ಅತ್ಯಂತ ಶೀಘ್ರವಾಗಿ ಇತ್ಯರ್ಥಗೊಳಿಸಿ ಪತಿ-ಪತ್ನಿಯರ ಮತ್ತು ಅವರಿಬ್ಬರ ಕುಟುಂಬಗಳ ನಡುವಿನ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಕುಟುಂಬ ನ್ಯಾಯಾಲಯ ಅಧಿನಿಯಮ 1984 ಎಂಬ ಕಾನೂನನ್ನು ಕೇಂದ್ರ ಸರಕಾರವು ನಮ್ಮ ದೇಶಾದ್ಯಂತ ಜ್ಯಾರಿಗೆ ತಂದಿರುತ್ತದೆ.
ಈ ಕಾನೂನಿನ ಪ್ರಕಾರ ಪ್ರತಿಯೊಂದು ಜಿಲ್ಲೆಯಲ್ಲಿ ಪತಿ-ಪತ್ನಿಯರ ನಡುವಿನ ಕೌಟುಂಬಿಕ ವಿವಾದವನ್ನು ಇತ್ಯರ್ಥಗೊಳಿಸಲು ಕೌಟುಂಬಿಕ ನ್ಯಾಯಾಲಯ ಎಂಬ ವಿಶೇಷವಾದ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಪತಿ-ಪತ್ನಿಯರಿಗೆ ಸಂಬಂಧಪಟ್ಟ ಯಾವುದೇ ರೀತಿಯ ವಿವಾದಗಳನ್ನು ಬಗೆಹರಿಸುವ ಮತ್ತು ನೊಂದ ಅರ್ಜಿದಾರರಿಗೆ ಸೂಕ್ತ ಪರಿಹಾರವನ್ನು ಅಂದರೆ ವೈವಾಹಿಕ ಸಮಸ್ಯೆಗಳನ್ನು ಅವಲೋಕಿಸಿ ಖಾಯಂ ಜೀವನಾಂಶ, ಮಧ್ಯಂತರ ಜೀವನಾಂಶ, ಮಕ್ಕಳ ಅಭಿರಕ್ಷೆ ಪೋಷಣೆ, ವಿವಾಹಿತ ದಂಪತಿಗಳ ನಡುವಿನ ದಾಂಪತ್ಯದ ಹಕ್ಕುಗಳ ಪೂರ್ವ ಸ್ಥಿತಿ ಅಂದರೆ ವಿವಾಹಿತ ದಂಪತಿಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳಿಂದ ಪ್ರತ್ಯೇಕವಾಗಿ ವಾಸ ಮಾಡಿಕೊಂಡು ಇರುವ ಸಂದರ್ಭಗಳಲ್ಲಿ ಅವರಿಗೆ ಕೂಡಿಕೊಂಡು ತಮ್ಮ ವೈವಾಹಿಕ ಜೀವನವನ್ನು ನಡೆಸಿಕೊಂಡು ಹೋಗಬೇಕೆಂಬ ಸೂಕ್ತ ಕೋರ್ಟ್ ನಿರ್ದೇಶನದ ಬಗ್ಗೆ ಆದೇಶ, ಮದುವೆಯಾದ ದಂಪತಿಗಳು ಪರಸ್ಪರರು ವೈವಾಹಿಕ ಬಂಧನದಿಂದ ಬಿಡುಗಡೆಯಾಗಲು ಕೇಳಿಕೊಳ್ಳುವ ವಿವಾಹ ವಿಚ್ಚೇದನ ಕುರಿತು ಆದೇಶ ಮತ್ತು ವಿವಾಹಿತ ದಂಪತಿಗಳ ನಡುವಿನ ಆಸ್ತಿ ವಿವಾದಗಳು ಇದೆಲ್ಲವೂ ಕೌಟುಂಬಿಕ ನ್ಯಾಯಾಲಯಗಳ ವ್ಯಾಪ್ತಿಗೆ ಬರುತ್ತದೆ. ಆದರೆ ಪತಿ-ಪತ್ನಿಯರ ನಡುವಿನ ಅಪರಾಧಿತ ಸ್ವರೂಪದ ವಿವಾದಗಳು ಈ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ವರದಕ್ಷಿಣೆ ಕಾಯಿದೆಯಡಿಯ ಅಪರಾಧಗಳು ಮತ್ತು ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಅಪರಾಧವೆಂದು ಪರಿಗಣಿಸುವ ವಿವಾದಗಳು ಎಂದರೆ ದ್ವಿಪತ್ನಿತ್ವ, ಕೌಟುಂಬಿಕ ಹಿಂಸೆ ಮುಂತಾದ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯಗಳ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಈ ಕಾರಣದ ಮೇಲೆ ವಿಚ್ಚೇದನೆ, ನ್ಯಾಯಿಕ ಬೇರ್ಪಡೆ ಅಥವಾ ಜೀವನಾಂಶದ ವೈವಾಹಿಕ ಪರಿಹಾರವನ್ನು ಕೋರಿದ್ದರೆ ಆಗ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯಗಳ ವ್ಯಾಪ್ತಿಯೊಳಗೆ ಬರುತ್ತದೆ. ಕೌಟುಂಬಿಕ ನ್ಯಾಯಾಲಯಗಳಲ್ಲಿ ಅನೌಪಚಾರಿಕ ಮಾತುಕತೆಯ ಮೂಲಕ ವಿವಾದಗಳನ್ನು ಪರಿಹರಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ತೊಂದರೆಗೊಳಗಾಗಿರುವ ಕುಟುಂಬಗಳಿಗೆ ಸಮಗ್ರ ರೀತಿಯ ಪರಿಹಾರವನ್ನು ಕೊಡುವುದು ಈ ವ್ಯವಸ್ಥೆಯ ಮೂಲ ಉದ್ದೇಶವಾಗಿರುತ್ತದೆ.
ಸಾಮಾನ್ಯವಾಗಿ ಆಯಾಯ ಜಿಲ್ಲಾ ನ್ಯಾಯಾಧೀಶರು ಅಥವಾ ಅಪರ ಜಿಲ್ಲಾ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸುವ ಪ್ರತಿಯೊಂದು ಪತಿ-ಪತ್ನಿಯರ ನಡುವಿನ ವಿವಾದವನ್ನು ನೇರವಾಗಿ ತನಿಖೆ ಮಾಡಿ ಸೂಕ್ತ ಪರಿಹಾರವನ್ನು ನೊಂದವರಿಗೆ ನೀಡುವ ಅಧಿಕಾರವನ್ನು ಕೌಟುಂಬಿಕ ನ್ಯಾಯಾಲಯವು ಹೊಂದಿರುತ್ತದೆ. ಆದರೆ ಈ ನ್ಯಾಯಾಲಯವನ್ನು ಸಂಪರ್ಕಿಸುವ ಪತಿ ಅಥವಾ ಪತ್ನಿ ತಮ್ಮ ಪ್ರಕರಣವನ್ನು ನೇರವಾಗಿ ಸಮರ್ಥಿಸಿಕೊಳ್ಳಲು ಅಸಹಾಯಕರಾದ ಸಂಧರ್ಭದಲ್ಲಿ ತಮ್ಮ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಲು ಕೌಟುಂಬಿಕ ನ್ಯಾಯಾಲಯದಿಂದ ಸೂಕ್ತ ಅನುಮತಿಯನ್ನು ಪಡೆಯಬೇಕಾಗುತ್ತದೆ. ಪತಿ-ಪತ್ನಿಯರ ನಡುವಿನ ಯಾವುದೇ ವಿವಾದದ ವಿಚಾರಣೆಯನ್ನು ಗೌಪ್ಯವಾಗಿ ನಡೆಸಬೇಕಾಗಿ ಪಕ್ಷಕಾರರು ನ್ಯಾಯಾಲಯಕ್ಕೆ ಸೂಕ್ತ ಕಾರಣದೊಂದಿಗೆ ಮನವಿ ಮಾಡಿಕೊಂಡಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಗೌಪ್ಯವಾಗಿ ನಡೆಸಬಹುದಾಗಿದೆ. ಈ ರೀತಿಯ ಗೌಪ್ಯ ವಿಚಾರಣೆಯನ್ನು ಇನ್ ಕ್ಯಾಮರಾ ಪ್ರೊಸೀಡಿಂಗ್ಸ್ ಎನ್ನಲಾಗುವುದು. ಒಟ್ಟಾರೆಯಾಗಿ ಕೌಟುಂಬಿಕ ನ್ಯಾಯಾಲಯಗಳಲ್ಲಿ ಪಕ್ಷಕಾರರ ಅಂದರೆ ಪತಿ-ಪತ್ನಿಯರ ಒಳಗಿನ ವಿವಾದಕ್ಕೆ ಕುರಿತಂತೆ ಸೋಲು ಗೆಲುವಿಗಿಂತ ಹೆಚ್ಚಾಗಿ ಅವರೊಳಗೆ ಹೊಂದಾಣಿಕೆ ಉಂಟು ಮಾಡಿ ಕೌಟುಂಬಿಕ ಸಾಮರಸ್ಯವನ್ನು ಕಾಪಾಡುವ ಪ್ರಾಮುಖ್ಯತೆಯನ್ನು ಕೌಟುಂಬಿಕ ನ್ಯಾಯಾಲಯಗಳ ಅಧಿನಿಯಮ 1984 ಹೊಂದಿರುತ್ತದೆ.

















































































