ಸಾರ್ವಜನಿಕ ಅರ್ಜಿಗೆ ತಕ್ಷಣವೇ ಸ್ಪಂದಿಸಿ – ಶಂಕರ ಸೇರಿಗಾರ್
ಹೆಬ್ರಿ : ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಾರ್ವಜನಿಕರಿಂದ ಬರುವ ಅರ್ಜಿಗಳಿಗೆ ಶೀಘ್ರ ಸ್ಪಂದಿಸಬೇಕೆಂದು ಹೆಬ್ರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಸೇರಿಗಾರ್ ಅಧಿಕಾರಿಗಳಿಗೆ ತಿಳಿಸಿದರು.
ಅವರು ಹೆಬ್ರಿ ಸಮಾಜಮಂದಿರದಲ್ಲಿ ನಡೆದ ಹೆಬ್ರಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಬ್ರಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯದರ್ಶಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಮಾತನಾಡಿ, ಯೋಜನೆಗೆ ಹೊಸ ಅರ್ಜಿಗಳು ಬಂದರೆ ಸಕಾಲದಲ್ಲಿ ಇತ್ಯರ್ಥ ಮಾಡಿ ಯೋಜನೆಯನ್ನು ಜನತೆಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದರು.
ಆಹಾರ ನಿರೀಕ್ಷಕ ಗುರುಪ್ರಸಾದ್ ಮಾಹಿತಿ ನೀಡಿ, 21 ಮಂದಿ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ದೊರೆಯುತ್ತಿದೆ ಎಂದರು. ಮೆಸ್ಕಾಂ ಹೆಬ್ರಿ ಉಪ ವಿಭಾಗದ ವ್ಯಾಪ್ತಿಯಲ್ಲಿ 14,437 ಫಲಾನುಭವಿಗಳು, 80 ಲಕ್ಷ ರೂ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಮೆಸ್ಕಾಂ ಎಇಇ ನಾಗರಾಜ್ ಮಾಹಿತಿ ನೀಡಿದರು.
ಸರಕಾರಿ ಬಸ್ ಬೇಡಿಕೆ
ಕಾರ್ಕಳ, ಹೆಬ್ರಿ, ಮಡಾಮಕ್ಕಿ, ಸಿದ್ಧಾಪುರ, ಅಮಾಸೆಬೈಲು ಮಾರ್ಗದಲ್ಲಿ ಶೀಘ್ರವಾಗಿ ಸರಕಾರಿ ಬಸ್ ಓಡಿಸುವ ಪ್ರಸ್ತಾವನೆಯನ್ನು ಮಂಜೂರುಗೊಳಿಸುವಂತೆ ಸಮಿತಿಯ ಸದಸ್ಯರು ಹಾಗೂ ಶಂಕರ ಸೇರಿಗಾರ್ ಮನವಿ ಮಾಡಿದರು. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ತಿಂಗಳಿನಲ್ಲಿ ಒಮ್ಮೆ ಕುಚ್ಚಿಗೆ, ಮತ್ತೊಮ್ಮೆ ಬೆಳ್ತಿಗೆ ಅಕ್ಕಿಯನ್ನು ರೊಟೇಷನ್ ಮಾದರಿಯಲ್ಲಿ ವಿತರಿಸಬೇಕು. ಇದರಿಂದ ಜನತೆಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು. ಸದಸ್ಯರ ಅಭಿಪ್ರಾಯವನ್ನು ಸರಕಾರ ಮತ್ತು ಆಹಾರ ಇಲಾಖೆಗೆ ತಿಳಿಸಲಾಗುವುದು ಎಂದು ಶಂಕರ ಸೇರಿಗಾರ್ ಹೇಳಿದರು.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ರೇವತಿ, ಕೆಎಸ್‌ಆರ್‌ಟಿಸಿಯ ಭೋಜ ಕಾರ್ಕಳ, ಹೆಬ್ರಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸಾವಿತ್ರಿ ನಾಯ್ಕ್, ಶಶಿಕಲಾ ಆರ್. ಪಿ. ರಘುನಾಥ ಪೂಜಾರಿ, ವಸಂತ ಪೂಜಾರಿ, ರಾಜು ಪೂಜಾರಿ, ಜಗದೀಶ ಹೇರಳೆ, ತಾಲೂಕು ಪಂಚಾಯತ್‌ನ ಲತಾ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಇ. ಡಿ. ಸಭೆ ನಿರ್ವಹಿಸಿದರು.

































































