ಮಿಯ್ಯಾರು ಅಪಘಾತ – ಕಾರ್ಕಳಕ್ಕೆ ಬಂದ ಕುಟುಂಬಸ್ಥರು – ಶವಾಗಾರದ ಮುಂದೆ ಆಕ್ರಂದನ

ಕಾರ್ಕಳ : ಮಿಯ್ಯಾರು ಕಂಬಳ ಕ್ರಾಸ್‌ ಸಮೀಪ ಜ. 23ರಂದು ಮಧ್ಯಾಹ್ನ ತೂಫಾನ್‌ ಮತ್ತು ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟು, 9 ಮಂದಿ ಗಾಯಗೊಂಡಿದ್ದರು. ಇಂದು ಕುಟಂಬಸ್ಥರು ಕಾರ್ಕಳಕ್ಕೆ ಆಗಮಿಸಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿರುವ ಶವಾಗಾರದಲ್ಲಿ ಮೃತದೇಹಗಳ ಪೋಸ್ಟ್‌ ಮಾರ್ಟಮ್‌ ಪ್ರಕ್ರಿಯೆ ನಡೆಯುತ್ತಿದೆ.

ಗುಲ್ಬರ್ಗಾದ ಒಂದೇ ಕುಟುಂಬದ 12 ಮಂದಿ ಹಾಗೂ ಡ್ರೈವರ್‌ ಸೇರಿದಂತೆ 13 ಮಂದಿ ತೂಫಾನ್‌ ವಾಹನದಲ್ಲಿ ದೇವರ ದರ್ಶನಕ್ಕೆ ಬಂದಿದ್ದು, ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಊಟ ಮುಗಿಸಿ ಧರ್ಮಸ್ಥಳಕ್ಕೆ ಹೋಗುವಾಗ ಮಿಯ್ಯಾರಿನಲ್ಲಿ ಧರ್ಮಸ್ಥಳದಿಂದ ಕಾರ್ಕಳಕ್ಕೆ ಬರುತ್ತಿದ್ದ ಪ್ರೈಸ್‌ ದಿ ಲಾರ್ಡ್‌ (ವರುಣ್) ಬಸ್‌ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ತೂಫಾನ್‌ ಚಾಲಕ ಮಾನಪ್ಪ ಸ್ಥಳದಲ್ಲೇ ಸಾವನಪ್ಪಿದ್ದು, ಮೂವರು ಚಿಕಿತ್ಸೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ.

ಮೃತ ಮಾನಪ್ಪ (35) ಗುಲ್ಬರ್ಗಾ ನಗರದವರಾಗಿದ್ದು ಚಾಲಕರಾಗಿಯೇ ಕೆಲಸ ಮಾಡುತ್ತಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಲ್ಲಮ್ಮ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇವರು ಕೂಲಿ ಕಾರ್ಮಿಕರಾಗಿದ್ದರು, ಇವರ ಗಂಡ ಬಸವರಾಜ್‌, ಮಗ ಕಿಶೋರ್‌, ಸೊಸೆ ಲಕ್ಷ್ಮೀ ಹಾಗೂ ಮೊಮ್ಮಗ ಕುಶಾಲ್‌ (2ವರ್ಷ) ಕೂಡ ಗಾಯಗೊಂಡಿದ್ದು, ಇವರಲ್ಲಿ ಬಸವರಾಜ್‌ ಮಣಿಪಾಲ ಆಸ್ಪತ್ರೆಯಲ್ಲಿ, ಲಕ್ಷ್ಮೀ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗು ಕುಶಾಲ್‌ನನ್ನು ನಿನ್ನೆ ಮೊದಲು ಸಿಟಿ ಹಾಸ್ಪಿಟಲ್‌ನಲ್ಲಿ ದಾಖಲಿಸಿದ್ದು ಆ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ದರಿಂದ ಮಗುವಿನ ತಂದೆ ಕಿಶೋರ್‌ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುಟುಂಬವು ಗುಲ್ಬರ್ಗಾದ ಖ್ವಾಜಾ ಬಂದೇ ನವಾಜಾ ದರ್ಗಾ ಸಮೀಪದ ಕಾನದ ಪುರದಲ್ಲಿ ವಾಸವಾಗಿದ್ದವರು.

ಸಹೋದರರ ಸಾವು
ಮಲ್ಲಮ್ಮ ಅವರ ತಂಗಿ ಅಪಘಾತದಲ್ಲಿ ಗಾಯಗೊಂಡಿದ್ದ ಕವಿತಾ ಹಾಗೂ ಅವರ ಮಗಳು ಜಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕವಿತಾ ಅವರ ಮಕ್ಕಳಾದ ರೋಹಿತ್‌ (20) ಹಾಗೂ ಚೇತನ್‌ (18) ನಿನ್ನೆ ಆಸ್ಪತ್ರೆ ಸಾಗಿಸುವಾಗ ಕೊನೆಯುಸಿರೆಳೆದಿದ್ದರು. ರೋಹಿತ್‌ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು, ಚೇತನ್‌ ಆಟೋ ಚಾಲಕನಾಗಿದ್ದ. ಇವರು ಗುಲ್ಬರ್ಗಾದ ದೇವಲ್ ಗಾಣಗಾಪುರದಲ್ಲಿ ವಾಸವಾಗಿದ್ದರು.

ಮಲ್ಲಮ್ಮ ಮತ್ತು ಕವಿತಾ ಸಂಬಂಧಿಕರಾದ ಸಂಗೀತಾ ಮತ್ತು ಜ್ಯೋತಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಹುಲ್‌ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕುಟುಂಬಸ್ಥರು ಇಂದು ಬೆಳಿಗ್ಗೆ ಮಣಿಪಾಲ ಆಸ್ಪತ್ರೆಗೆ ಬಂದು ಬಳಿಕ ಕಾರ್ಕಳ ಆಸ್ಪತ್ರೆಗೆ ಬಂದಿದ್ದಾರೆ. ಕಾರ್ಕಳ ನಗರ ಪೊಲೀಸರ ಸಮ್ಮುಖದಲ್ಲಿ ಆಸ್ಪತ್ರೆಯ ಶವಾಗಾರದಲ್ಲಿರುವ ಮಾನಪ್ಪ, ರೋಹಿತ್‌ ಮತ್ತು ಚೇತನ್‌ ಮೃತದೇಹಗಳ ಪೋಸ್ಟ್‌ ಮಾರ್ಟಮ್‌ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಮಲ್ಲಮ್ಮ ಮೃತದೇಹದ ಪೋಸ್ಟ್‌ ಮಾರ್ಟಮ್‌ ಮಣಿಪಾಲ ಆಸ್ಪತ್ರೆಯ ಶವಾಗಾರದಲ್ಲಿ ನಡೆಯುತ್ತಿದೆ.

ಈ ರೀತಿ ಘಟನೆ ನಡೆದಿದೆ ಎಂದು ನಿನ್ನೆ ಸಂಜೆ ಸುಮಾರು 6 ಗಂಟೆಗೆ ತಿಳಿಯಿತು. ಅದೂ ಕೂಡ ರೋಹಿತ್‌ಗೆ ಕರೆ ಮಾಡಿದಾಗ ಇಲ್ಲಿನ ಜನ ಯಾರೋ ಫೋನ್‌ ಎತ್ತಿ ಮಾತಾಡಿದ್ದು ಆ ಬಳಿಕ ತಿಳಿಯಿತು ಎಂದು ರೋಹಿತ್‌ನ ಸೋದರ ಸಂಬಂಧಿ ಹೇಳಿದರು. ಕುಟುಂಬಸ್ಥರು ದು:ಖದಲ್ಲಿ ಮುಳುಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ಬಸ್‌ ಚಾಲಕ ವಶಕ್ಕೆ
ಆರೋಪಿ ಪ್ರೈಸ್‌ ದಿ ಲಾರ್ಡ್‌ (ವರುಣ್)‌ ಬಸ್‌ ಚಾಲಕ ಪರ್ಕಳ ಹೆರ್ಗದ ರಾಹುಲ್‌ ಕುಂದರ್‌ (24) ನನ್ನು ಕಾರ್ಕಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.























error: Content is protected !!
Scroll to Top