ಕಾಂಗ್ರೆಸ್ ಮತ್ತು ಅಭಿವೃದ್ಧಿ ವಿರುದ್ಧ ಪದಗಳು – ಸುನಿಲ್ ಕುಮಾರ್
ಕಾರ್ಕಳ : ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಘೋಷಿಸಿದ ಅನಂತರ ವೋಟ್ ಚೋರಿ ಮಾಡುವವರಿಗೆ ಆತಂಕ ಆರಂಭವಾಗಿದೆ. ಮತದಾರರ ಪಟ್ಟಿ ಸರಿಯಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿರಲಿದೆ. ಆದ್ದರಿಂದ ಇಡೀ ದೇಶದಲ್ಲಿ ನಡೆಯುವ ಮತದಾರರ ಪರಿಷ್ಕರಣೆಯಲ್ಲಿ ನಮ್ಮ BLA 2 ಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಬಿಜೆಪಿ ಕಾರ್ಕಳ ಮಂಡಲ ವತಿಯಿಂದ ಜ. 24ರಂದು ಬಾಲಾಜಿ ಇನ್ ಹೊಟೇಲ್‌ನಲ್ಲಿ ನಡೆದ ಬಿಎಲ್‌ಎ–2 (ಬೂತ್ ಲೆವೆಲ್ ಏಜೆಂಟ್ಸ್ –2) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹೊರಗಡೆಯಿಂದ ಬಂದವರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎನ್ನುವ ಗುಮಾನಿಯಿದೆ. ಆದ್ದರಿಂದ ಪೌರತ್ವ ಪರಿಷ್ಕರಣೆ ಮತ್ತೆ ಮತ್ತೆ ಆಗುತ್ತಲೇ ಇರಬೇಕು. ಇದೇನು ಮೊದಲ ಬಾರಿಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವುದಲ್ಲ. 1950ರಲ್ಲಿ ಪ್ರಾರಂಭಗೊಂಡು ಆ ಬಳಿಕ ನಡೆಯುತ್ತಲೆ ಬಂದಿದೆ. ಕಾಂಗ್ರೆಸ್ ಅವಧಿಯಲ್ಲೂ ನಡೆದಿತ್ತು. ಆದ್ದರಿಂದ, ಕಾಂಗ್ರೆಸ್ ಈಗ ಈ ಬಗ್ಗೆ ವಿವಾದ ಸೃಷ್ಠಿಸುತ್ತಿರುವುದು ಅನಗತ್ಯ ಎಂದವರು ಹೇಳಿದರು.
ಅವರಿಗೆ ಅರ್ಥವಾಗುತ್ತಿಲ್ಲ
ರಾಹುಲ್ ಗಾಂಧಿ ಅವರು ವೋಟ್ ಚೋರಿ ಆಗಿದೆ ಎಂದು ದೇಶದೆಲ್ಲೆಡೆ ಹೇಳಿಕೊಂಡು ಬರುತ್ತಿದ್ದಾರೆ. ಅದನ್ನು ಸರಿ ಮಾಡುವುದಕ್ಕಾಗಿಯೇ ಈ ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ ಎಂದು ಸುನಿಲ್ ಕುಮಾರ್ ಹೇಳಿದರು.
ಕಾಂಗ್ರೆಸ್ – ಅಭಿವೃದ್ಧಿ ವಿರುದ್ಧ ಪದಗಳು
ಕಾಂಗ್ರೆಸ್ ಮತ್ತು ಅಭಿವೃದ್ಧಿಗೆ ಯಾವುದೇ ಸಂಬಂಧವಿಲ್ಲ, ಅವೆರಡೂ ವಿರುದ್ಧ ಪದಗಳು ಎಂದ ಸುನಿಲ್ ಕುಮಾರ್ ಪ್ರಸ್ತುತ ಆಧುನಿಕ ತಂತ್ರಜ್ಞಾನ ತೀವ್ರಗತಿಯಲ್ಲಿ ಮುಂದುವರಿಯುತ್ತಿದ್ದರೆ ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಳ್ಳದೇ ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು ಎನ್ನುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ನಲ್ಲೇ ಗೊಂದಲವಿದೆ. ಕಾಂಗ್ರೆಸ್ ಮುಖಂಡರಾಗಿರುವ ಡಿ.ಕೆ. ಸುರೇಶ್ ಅವರು ಇವಿಎಂ ಬೇಕು ಎನ್ನುತ್ತಿದ್ದಾರೆ ಎಂದರು.
ಪ್ರಾಸ್ತವಿಕ ಮಾತುಗಳನ್ನಾಡಿದ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಬೂತ್ ಮಟ್ಟದಲ್ಲಿ ಸಕ್ರಿಯವಾದಾಗ ಮಾತ್ರ ಗೆಲುವು ನಮ್ಮದಾಗಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಅದಕ್ಕಾಗಿ ಇಂದು ನಮ್ಮ BLA 2ಗಳಿಗೆ ವಿಶೇಷ ಕಾರ್ಯಾಗಾರ ನಡೆಸುತ್ತಿದ್ದೇವೆ ಎಂದರು.
ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಕಾರ್ಯಾಗಾರ ನಡೆಸಿಕೊಟ್ಟರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಮಣಿರಾಜ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ರಾಜ್ಯ ಕಾರ್ಯಾಲಯ ಮಹಿಳಾ ಕಾರ್ಯದರ್ಶಿ ರಜನಿ ಪೈ ಉಪಸ್ಥಿತರಿದ್ದರು. ಜ್ಯೋತಿ ರಮೇಶ್ ವಂದೇ ಮಾತರಂ ಗೀತೆ ಹಾಡಿದರು. ಹರ್ಷವರ್ಧನ್ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ 209 ಬೂತ್‌ನ ಬಿಎಲ್‌ಎ-2ಗಳು ಭಾಗವಹಿಸಿದ್ದರು.
























