ಪರ್ಯಾಯ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಡಿಸಿ ಚಾಲನೆ ಕುರಿತು ಕ್ರಮಕ್ಕೆ ಆಗ್ರಹಿಸಿ ಸಿಎಂಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಮನವಿ

ಕಾರ್ಕಳ : ಉಡುಪಿ ಜಿಲ್ಲಾಧಿಕಾರಿಯವರು ಪರ್ಯಾಯ ಕಾರ್ಯಕ್ರಮದ ಸಂದರ್ಭದಲ್ಲಿ ಆರ್.ಎಸ್.ಎಸ್. ಧ್ವಜವನ್ನು ಪ್ರದರ್ಶಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗ ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದೆ.

ಈ ಬಗ್ಗೆ ಸಿಎಂಗೆ ನೀಡಿದ ಪತ್ರದಲ್ಲಿ ಜ. 18ರಂದು ಮುಂಜಾನೆ 3 ಗಂಟೆಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ನಡೆದ ಪರ್ಯಾಯ ಮೆರವಣಿಗೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ಭಾಗವಹಿಸಿದ್ದರು. ಮೆರವಣಿಗೆ ಆರಂಭಕ್ಕೂ ಮೊದಲು ಉಡುಪಿ ಶಾಸಕ ಯಶಪಾಲ್ ಸುವರ್ಣರವರು ಆರ್.ಎಸ್.ಎಸ್. ಧ್ವಜವನ್ನು ಜಿಲ್ಲಾಧಿಕಾರಿಯವರ ಕೈಗೆ ಹಸ್ತಾಂತರಿಸಿದರು. ನಂತರ ಜಿಲ್ಲಾಧಿಕಾರಿಯವರು ಈ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ ಸಾರ್ವಜನಿಕವಾಗಿ ಪ್ರದರ್ಶಿಸಿದರು. ಜಿಲ್ಲಾಧಿಕಾರಿಯವರ ಈ ನಡೆ ಸರಕಾರಿ ಸೇವಾ ನಿಯಮಗಳು ಮತ್ತು ಸಂವಿಧಾನದ ಧರ್ಮ ನಿರಪೇಕ್ಷತೆಯ ತತ್ವಗಳಿಗೆ ವಿರುದ್ಧವಾಗಿದ್ದು ಈ ರೀತಿಯ ನಡೆ ಅತ್ಯಂತ ಆಕ್ಷೇಪಾರ್ಹವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಹರೀಶ್‌ ಶೆಟ್ಟಿ ಉಲ್ಲೇಖಿಸಿದ್ದಾರೆ.

ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ ಡಿಸಿ ಸ್ವರೂಪ ಟಿ.ಕೆ.
ಆಕ್ಷೇಪದ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ನಾನು ಉಡುಪಿ ಜಿಲ್ಲೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಹೋತ್ಸವ ಮೆರವಣಿಗೆಗ ಚಾಲನೆ ನೀಡಿದ್ದೇನೆ. ಯಾವುದೇ ರಾಜಕೀಯ ಪ್ರೇರಿತವಾಗಿ ಭಾಗವಹಿಸಿಲ್ಲ. ಪುರಪ್ರವೇಶ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಯಾಗಿ ಭಾಗವಹಿಸಿದ್ದೇನೆ. ಪುರಪ್ರವೇಶಕ್ಕೂ ನಗರಸಭೆಯ ಆಡಳಿತಾಧಿಕಾರಿಯಾಗಿ ಭಾಗವಹಿಸಿದ್ದೇನೆ. ಯತಿಗಳ ಪೌರ ಸಮ್ಮಾನ ಹಾಗೂ ಸರ್ವಜ್ಞ ಪೀಠ ಏರಿದ ನಂತರ ದರ್ಬಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಈ ವಿಚಾರವನ್ನು ಸಾರ್ವಜನಿಕರು ಗಮನಿಸಬೇಕು ಎಂದು ತಿಳಿಸಿದ್ದಾರೆ. 

ಪರ್ಯಾಯಕ್ಕೆ ಚಾಲನೆ ನೀಡಿದ್ದು ಭಗವಾಧ್ವಜದ ಮೂಲಕ ಹೊರತು ಪಾಕಿಸ್ತಾನದ ಧ್ವಜದಿಂದ ಅಲ್ಲ – ಯಶ್‌ಪಾಲ್‌ ಸುವರ್ಣ
ಉಡುಪಿ ಪರ್ಯಾಯ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅತ್ಯಂತ ಯಶಸ್ವಿಯಾಗಿ ಪರ್ಯಾಯ ಮಹೋತ್ಸವವನ್ನು ಮಾಡಿದೆ. ಜಿಲ್ಲಾಧಿಕಾರಿಯವರು ಭಗವಾಧ್ವಜದ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ್ದರು. ಆದರೆ ಕಾಂಗ್ರೆಸಿಗರು ಇದನ್ನು ಪಾಕಿಸ್ತಾನದ ಧ್ವಜ ಎಂಬ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ಒಂದು ವೇಳೆ ಜಿಲ್ಲಾಧಿಕಾರಿಗಳ ಜಾಗದಲ್ಲಿ ಉಸ್ತುವಾರಿ ಸಚಿವರಿದ್ದರೂ ಅದೇ ಧ್ವಜದ ಮೂಲಕ ಚಾಲನೆ ನೀಡುತ್ತಿದೆವು. ಆಗ ಕಾಂಗ್ರೆಸ್ ಮುಖಂಡರು ರಾಜ್ಯ ನಾಯಕರಿಗೆ ದೂರು ನೀಡುತ್ತಿದ್ದರೇ? ಎಂದು ಪ್ರಶ್ನಿಸಿರುವ ಯಶ್‌ಪಾಲ್‌ ಭಗವಾಧ್ವಜ ಹಿಂದೂ ಧರ್ಮದ ಒಂದು ಪವಿತ್ರ ಸಂಕೇತ. ಆದ್ದರಿಂದ ಭಗವಾಧ್ವಜದ ಕುರಿತು ಕಾಂಗ್ರೆಸಿಗರ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.

ಪರ್ಯಾಯ ಮಹೋತ್ಸವವು ಅಷ್ಟಮಠಾಧೀಶರು ಭಾಗವಹಿಸಿದ್ದ ಪುಣ್ಯವೇದಿಕೆಯಾಗಿತ್ತು. ಕಳೆದ ಬಾರಿ ಕೂಡ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಭಗವಾಧ್ವಜದ ಮೂಲಕವೇ ಚಾಲನೆ ನೀಡಿದ್ದರು. ಈ ಬಾರಿ ಕೂಡ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಭಗವಾಧ್ವಜದ ಮೂಲಕ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಬಹುಶಃ ಕಾಂಗ್ರೆಸ್ಸಿಗರು ಟೀಕೆ ಮಾಡುವ ರೀತಿ ನೋಡಿದರೆ ಎಲ್ಲೋ ಪಾಕಿಸ್ತಾನದ ಧ್ವಜದ ಮೂಲಕ ಚಾಲನೆ ನೀಡಿದ್ದಾರೆ ಎಂಬ ರೀತಿಯಲ್ಲಿ ಟೀಕಿಸುತ್ತಿದ್ದಾರೆ ಎಂದು ಯಶ್ಪಾಲ್ ಹೇಳಿದ್ದಾರೆ.









































































































error: Content is protected !!
Scroll to Top