ಸಾರ್ವಜನಿಕ ಹಿತಾಸಕ್ತಿ

ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಜೀವ, ಸೊತ್ತು ಮತ್ತು ನೆಮ್ಮದಿಗೆ, ಅಡ್ಡಿ, ಹಾನಿ ಅಥವಾ ಅಪಾಯ ಉಂಟುಮಾಡುವ ಯಾವುದೇ ಹಾನಿಕಾರಕ ವ್ಯವಹಾರ ಮತ್ತು ಉಪದ್ರವನ್ನು ಕಾನೂನು ಬದ್ಧವಾಗಿ ತಡೆಗಟ್ಟಿ ಅಥವಾ ನಿರ್ಮೂಲನೆ ಮಾಡಿ ಸಾರ್ವಜನಿಕರ ಜೀವ, ಸೊತ್ತು ಮತ್ತು ನೆಮ್ಮದಿಯನ್ನು ರಕ್ಷಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಸಂಪೂರ್ಣ ಕಾನೂನು ಬದ್ಧ ಅಧಿಕಾರವನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ಕಾನೂನಿನ 133ನೇ ಸೆಕ್ಷನ್ ಪ್ರಕಾರ ಆಯಾಯ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂದರೆ ಜಿಲ್ಲಾಧಿಕಾರಿಯವರು ಮತ್ತು ಉಪವಿಭಾಗದ ಮ್ಯಾಜಿಸ್ಟ್ರೇಟ್ ಅಂದರೆ ಸಹಾಯಕ ಕಮಿಶನರ್ ಮತ್ತು ತಾಲೂಕು ಮ್ಯಾಜಿಸ್ಟ್ರೇಟ್ ಅಂದರೆ ತಹಶೀಲ್ದಾರರು ಹೊಂದಿರುತ್ತಾರೆ. ಇದರಂತೆ ತೊಂದರೆಗೊಳಪಟ್ಟ ಯಾವುದೇ ವ್ಯಕ್ತಿ ತನ್ನ ಸ್ವಂತ ನೆಲೆಯಲ್ಲಿ ಅಥವಾ ನೊಂದಾಯಿತ ಸಾರ್ವಜನಿಕ ಸೇವಾ ಸಂಸ್ಥೆ ಮೂಲಕ ಸೂಕ್ತ ಅರ್ಜಿಯನ್ನು ಆಯಾಯ ಪ್ರದೇಶಕ್ಕೆ ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್‌ರಿಗೆ ಅಥವಾ ಉಪವಿಭಾಗದ ಮ್ಯಾಜಿಸ್ಟ್ರೇಟ್ರಿಗೆ ಅಥವಾ ತಾಲೂಕು ಮ್ಯಾಜಿಸ್ಟ್ರೇಟ್ರಿಗೆ ಲಿಖಿತವಾಗಿ ಸಲ್ಲಿಸಿ ಸೂಕ್ತ ಪರಿಹಾರವನ್ನು ಪಡೆದುಕೊಳ್ಳುಲು ಹಕ್ಕುಳ್ಳವರಾಗಿರುತ್ತಾರೆ.

ಈ ಕಾನೂನಿನನ್ವಯ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಉಪವಿಭಾಗದ ಮ್ಯಾಜಿಸ್ಟ್ರೇಟ್ ಅಥವಾ ತಾಲೂಕು ಮ್ಯಾಜಿಸ್ಟ್ರೇಟ್ ಅಥವಾ ರಾಜ್ಯ ಸರಕಾರದಿಂದ ಈ ಬಗ್ಗೆ ವಿಶೇಷವಾಗಿ ಶಕ್ತಗೊಳಿಸಲಾದ ಇತರ ಯಾವುದೇ ಕಾರ್ಯಾಂಗ ಮ್ಯಾಜಿಸ್ಟ್ರೇಟ್ ಸಂಬಂಧಪಟ್ಟ ಪ್ರದೇಶದ ಪೋಲೀಸ್‌ ಅಧಿಕಾರಿಯ ವರದಿಯನ್ನು ಅಥವಾ ಇತರೆ ಮಾಹಿತಿಯನ್ನು ಪಡೆದು ತನಿಖೆ ನಡೆಸಿ ಸೂಕ್ತ ಆದೇಶವನ್ನು ಜ್ಯಾರಿಗೊಳಿಸಿ ಈ ಕೆಳಕಾಣಿಸಿದಂತೆ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬಹುದು.

ಸಾರ್ವಜನಿಕರು ವಿಧಿಬದ್ಧವಾಗಿ ಉಪಯೋಗಿಸಬಹುದಾದ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಯಾವುದೇ ದಾರಿ, ನದಿ ಅಥವಾ ನಾಲೆಯಲ್ಲಿ ಇರುವ ಯಾವುದೇ ಅಡ್ಡಿ ಅಥವಾ ಅಡಚಣೆ ಅಥವಾ ಉಪದ್ರವವನ್ನು ನಿವಾರಿಸಬಹುದು.
ಸಾರ್ವಜನಿಕರಿಗೆ ಅಪಾಯ ಒಡ್ಡುವ ಮತ್ತು ಉಪದ್ರ ನೀಡುವ ಮತ್ತು ಹಾನಿ ಉಂಟುಮಾಡುವ ಯಾವುದೇ ವ್ಯಾಪಾರ, ವ್ಯವಹಾರ ಮತ್ತು ಕಸುಬನ್ನು ತಡೆಗಟ್ಟಬಹುದು.
ಯಾವುದೇ ವಾಣಿಜ್ಯ ಸರಕುಗಳನ್ನು ದಾಸ್ತಾನು ಇಟ್ಟುಕೊಳ್ಳುವುದರಿಂದ ಜನಸಮುದಾಯದ ಆರೋಗ್ಯ ಅಥವಾ ದೈಹಿಕ ಸುಖಕ್ಕೆ ಹಾನಿಕಾರಕವೆಂದು ಕಂಡುಬಂದಲ್ಲಿ ಅಂತಹ ಸರಕು ಅಥವಾ ಸಾಮಾಗ್ರಿಗಳನ್ನು ಅಲ್ಲಿಂದ ಬೇರೆ ಕಡೆಗೆ ವರ್ಗಾಯಿಸುವರೇ ಆದೇಶಿಸಬಹುದು.
ಬೆಂಕಿ ಹೊತ್ತಿಕೊಳ್ಳುವ ಅಥವಾ ಸ್ಪೋಟಗೊಳ್ಳಲು ಅವಕಾಶ ನೀಡುವ ಸಾಮಾಗ್ರಿಗಳನ್ನು ಉಪಯೋಗಿಸಿ ಕಾರ್ಯಾಚರಣೆ ಮಾಡುವ ಕಟ್ಟಡ ನಿರ್ಮಾಣವನ್ನು ನಿಲ್ಲಿಸಬಹುದು.
ಯಾವುದೇ ಕಟ್ಟಡ, ಡೇರೆ ಅಥವಾ ಮರ ಬೀಳುವ ಪರಿಸ್ಥಿತಿಯಲ್ಲಿದ್ದಲ್ಲಿ ಮತ್ತು ಇದರಿಂದಾಗಿ ಆಸುಪಾಸಿನಲ್ಲಿ ವಾಸಿಸುತ್ತಿರುವ ಅಥವಾ ವ್ಯವಹಾರ ನಡೆಸುತ್ತಿರುವ ಅಥವಾ ಹಾದು ಹೋಗುತ್ತಿರುವ ವ್ಯಕ್ತಿಗಳಿಗೆ ಹಾನಿಯುಂಟಾಗುವ ಸಂಭವ ನಿರ್ಮಾಣಗೊಂಡಲ್ಲಿ ಇಂತಹ ಕಟ್ಟಡ, ಡೇರೆ ಅಥವಾ ಮರವನ್ನು ತೆಗೆಸಬಹುದು,
ಸಾರ್ವಜನಿಕರ ಜೀವ, ನೆಮ್ಮದಿ ಮತ್ತು ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿರುವ ಅಥವಾ ಯಾವುದೇ ಅಪಾಯಕರವಾದ ಪ್ರಾಣಿಯನ್ನು ನಾಶಗೊಳಿಸಬಹುದು ಅಥವಾ ಬಂಧಿಸಬಹುದು.
ಯಾವುದೇ ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕರು ಹಾದುಹೋಗುವ ಸ್ಥಳದ ಪಕ್ಕದಲ್ಲಿ ಇರುವ ಯಾವುದೇ ತೆರೆದ ಅಂದರೆ ಬೇಲಿ ಅಥವಾ ಗೋಡೆ ಇಲ್ಲದ ಕೆರೆ, ಬಾವಿ ಅಥವಾ ಹೊಂಡದಿಂದಾಗಿ ಸಾರ್ವಜನಿಕರಿಗೆ ಅಪಾಯ ಅಥವಾ ತೊಂದರೆ ಉಂಟಾಗುವ ಸಂದರ್ಭದಲ್ಲಿ ಅಂತಹ ಕೆರೆ ಬಾವಿ ಅಥವಾ ಹೊಂಡಕ್ಕೆ ಬೇಲಿ ಅಥವಾ ಗೋಡೆ ಹಾಕಿಸಬಹುದು ಅಥವಾ ಅಗತ್ಯ ಬಿದ್ದಲ್ಲಿ ಮುಚ್ಚಿಸಬಹುದು.

ಮೇಲ್ಕಾಣಿಸಿದ ಸಂದರ್ಭಗಳಲ್ಲಿ ಸಂಬಂಧಪಟ್ಟ ಕಾರ್ಯಾಂಗ ಮ್ಯಾಜಿಸ್ಟ್ರೇಟ್‌ರವರು ಹೊರಡಿಸುವ ಆದೇಶವನ್ನು ಸದರಿ ಆದೇಶದಲ್ಲಿ ಉಲ್ಲೇಖಿಸಿರುವ ವ್ಯಕ್ತಿ ಉಲ್ಲಂಘಿಸಿದಲ್ಲಿ ಅಥವಾ ಆದೇಶದ ಪರಿಪಾಲನೆಗೆ ನಿರಾಕರಿಸಿದಲ್ಲಿ ಅಂತಹ ವ್ಯಕ್ತಿಯನ್ನು ಬಂಧಿಸುವ ಮತ್ತು ಆತನ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಂಬಂಧಪಟ್ಟ ಕಾರ್ಯಾಂಗ ಮ್ಯಾಜಿಸ್ಟ್ರೇಟ್‌ರವರು ಹೊಂದಿರುತ್ತಾರೆ.









































error: Content is protected !!
Scroll to Top