ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊಲೀಸರ ಪಾತ್ರ

ಸರಕಾರದ ನೌಕರರಾಗಿ ಸೇರಿಕೊಳ್ಳುವ ಪ್ರತಿಯೊಬ್ಬರೂ ಸರಕಾರದ ವಿವಿಧ ಆಜ್ಞೆಗಳನ್ನು, ಆದೇಶಗಳನ್ನು, ನಿರ್ದೇಶನಗಳನ್ನು, ನಿಯಮಗಳನ್ನು ಶೃದ್ಧೆಯಿಂದ ಪಾಲಿಸುವುದು ಅವರ ಆದ್ಯ ಕರ್ತವ್ಯ ಆಗಿರುತ್ತದೆ. ಸರ್ಕಾರಕ್ಕೆ ಗೌರವ ತೋರಿಸುವುದು ಸರ್ಕಾರದಲ್ಲಿ ಪೂರ್ಣ ವಿಶ್ವಾಸ ಮತ್ತು ನಂಬಿಕೆ ಇಡುವುದು ಸರ್ಕಾರದ ಪ್ರತಿಯೊಬ್ಬ ನೌಕರನ ಕರ್ತವ್ಯವಾಗಿರುತ್ತದೆ. ರಾಜ್ಯದ ಪೊಲೀಸ್ ಪಡೆಯ ಪ್ರತಿಯೊಬ್ಬ ಸದಸ್ಯ ಸರಕಾರದ ನೌಕರನೇ ಆಗಿರುವುದರಿಂದ ಆತ ಎಂತಹ ಉನ್ನತ ಅಧಿಕಾರಿಯೇ ಆಗಿರಲಿ, ಅಂತಹ ನೌಕರ ಸರ್ಕಾರದ ಆಡಳಿತ ಯಂತ್ರವು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಕೂಡ ಆತನ ಆದ್ಯ ಕರ್ತವ್ಯವಾಗಿರುತ್ತದೆ. ದೇಶದಲ್ಲಿ ಆಡಳಿತವು ಸಮರ್ಪಕವಾಗಿ ನಡೆಯಬೇಕಾದರೆ ಪೊಲೀಸರು ಹಾಗೂ ಸರಕಾರದ ಇತರ ನೌಕರರು ಸರ್ಕಾರಕ್ಕೆ ವಿಧೇಯರಾಗಿ, ನಿಷ್ಠರಾಗಿ ಸರ್ಕಾರದ ಪರವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ.
ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರದ ಇತರೆ ಇಲಾಖೆಗಳ ನೌಕರರಿಗಿಂತ ಪೊಲೀಸರ ಮೇಲೆ ಹೆಚ್ಚು ಹೊಣೆಗಾರಿಕೆ ಇರುತ್ತದೆ. ಸಮಾಜದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರ ಪೊಲೀಸರ ಮೇಲಿರುತ್ತದೆ. ಯಾರೇ ತಪ್ಪು ಮಾಡಿದರೂ ಸರ್ಕಾರದ ಪರವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾದ ಇಲಾಖೆಯೇ ಪೊಲೀಸರ ಇಲಾಖೆಯಾಗಿರುತ್ತದೆ. ಸಮಾಜದಲ್ಲಿನ ಸಮಾಜ ಘಾತುಕ ವ್ಯಕ್ತಿಗಳು ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಮಾನಭಂಗ, ಅತ್ಯಾಚಾರ ಮೊದಲಾದ ಗಂಭೀರ ಸ್ವರೂಪದ ಅಪರಾಧಗಳಲ್ಲಿ ತೊಡಗಿ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕದಡಬಹುದು. ಇಂತಹ ಗಂಭೀರ ಸ್ವರೂಪದ ಅಪರಾಧಗಳಲ್ಲಿ ತೊಡಗುವವರ ವಿರುದ್ಧ ಕ್ರಮ ಕೈಗೊಳ್ಳುವ ವ್ಯಕ್ತಿಯೇ ಪೊಲೀಸ್‌ ಅಧಿಕಾರಿ. ಆ ಕಾರಣದಿಂದ ಸರ್ಕಾರದ ಆಡಳಿತವನ್ನು ಪ್ರತಿನಿಧಿಸಬೇಕಾದ ಸರ್ಕಾರದ ಕಾನೂನುಗಳನ್ನು ಎತ್ತಿ ಹಿಡಿದು ಗೌರವಿಸಬೇಕಾದ ಪೊಲೀಸ್ ಅಧಿಕಾರಿಯು ಸರ್ಕಾರದ ಬಗ್ಗೆ ಅಗೌರವ ತೋರಿಸುವ ಯಾವುದೇ ಕಾರ್ಯವನ್ನು ಮಾಡುವಂತಿಲ್ಲ.‌ ಅಂತಹ ಕೃತ್ಯಗಳಲ್ಲಿ ಆತ ತನ್ನನ್ನು ತಾನು ತೊಡಗಿಸಿಕೊಳ್ಳಲು ಬರುವುದಿಲ್ಲ. ಹಾಗೆ ಅಂತಹ ಕೃತ್ಯವನ್ನು ಮಾಡಿದರೆ ಅಥವಾ ಅಂತಹ ಕೃತ್ಯಗಳನ್ನು ಮಾಡಲು ತನ್ನನ್ನು ತಾನು ತೊಡಗಿಸಿಕೊಂಡರೆ ಅಥವಾ ಇತರರನ್ನು ತೊಡಗಿಸಿಕೊಂಡರೆ ಕಾನೂನಿನ ಪ್ರಕಾರ ಅದು ಅಪರಾಧವಾಗುತ್ತದೆ. ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ.

ಪೊಲೀಸ್ ಪಡೆಯ ಸದಸ್ಯರಲ್ಲಿ ಇರಬೇಕಾದ ಶಿಸ್ತು‌, ಆಡಳಿತ ಹತೋಟಿ, ಆಡಳಿತ ನೀತಿ, ಕಟ್ಟು ಪಾಡುಗಳನ್ನು ಸದಸ್ಯರಲ್ಲಿ ಏಕರೂಪತೆಯನ್ನು ತರಲು ಕರ್ನಾಟಕ ಪೊಲೀಸ್‌ ಅಧಿನಿಯಮ 1963 ಕಾನೂನನ್ನು ಜಾರಿಗೆ ತರಲಾಗಿದೆ. ಯಾವುದೇ ಪೊಲೀಸ್ ಅಧಿಕಾರಿ ಯಾವುದೇ ಮನೆ ಆವರಣ‌, ಕೋಣೆ ಇತ್ಯಾದಿಗಳನ್ನು ಮಾಲೀಕರ ಒಪ್ಪಿಗೆ ಇರಲಿ ಅಥವಾ ಇಲ್ಲದಿರಲಿ ಪ್ರವೇಶಿಸಬಹುದು. ಆದರೆ ಇದಕ್ಕೆ ಕಾರಣವಿರಬೇಕು. ಕಾರಣವಿಲ್ಲದೇ ಹಾಗೆ ಆತ ಪ್ರವೇಶ ಮಾಡಲು ಬರುವುದಿಲ್ಲ ಅಥವಾ ಅಲ್ಲಿ ದೊರೆಯುವ ಚರ ಸ್ವತ್ತುಗಳನ್ನು ತಾನೇ ಇಟ್ಟುಕೊಳ್ಳಲು ಬರುವುದಿಲ್ಲ. ಹಾಗೇನಾದರೂ ಒಂದು ವೇಳೆ ತಾನು ಪೊಲೀಸ್‌ ಅಧಿಕಾರಿ ಎಂಬ ಕಾರಣದಿಂದ ಕಾನೂನು ಬಾಹಿರವಾಗಿ ಮನೆ ಪ್ರವೇಶಿಸಿದರೆ ಅಥವಾ ಅಲ್ಲಿರುವ ವ್ಯಕ್ತಿಯನ್ನು ಶೋಧಿಸಿದರೆ, ಜಪ್ತಿ ಮಾಡಿದರೆ ಅಂತಹ ಪೊಲೀಸ್ ಅಧಿಕಾರಿ ಈ ಪ್ರಕರಣದ ಅನ್ವಯ ಅಪರಾಧಕ್ಕೆ ಗುರಿಯಾಗುವನು. ಈ ಪ್ರಕರಣದ ಅನ್ವಯ ಪೊಲೀಸ್ ಅಧಿಕಾರಿಯ ನಡುವಳಿಕೆಯು ತನ್ನ ಅಧಿಕಾರ ವ್ಯಾಪ್ತಿಯೊಳಗಿರಬೇಕು ಮತ್ತು ಕಾನೂನಿನ ಚೌಕಟ್ಟಿನ ಒಳಗಿರಬೇಕು ಮತ್ತು ಕಿರುಕುಳ ಕೊಡುವ ದುರುದ್ದೇಶದಿಂದ ಕೂಡಿರಬಾರದು ಇದಕ್ಕೆ ವ್ಯತಿರಿಕ್ತವಾಗಿ ಮತ್ತು ತನ್ನ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಅಥವಾ ಅಧಿಕಾರಿ ಕಾನೂನಿನ ಅನ್ವಯ ಅಪರಾಧ ಮಾಡಿದಂತಾಗುತ್ತದೆ ಮತ್ತು ಸೂಕ್ತ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.‌



































































































error: Content is protected !!
Scroll to Top