ದೆಹಲಿ : ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್ಚಾಟ್, ಶೇರ್ಚಾಟ್, ಜಿಯೋಚಾಟ್, ಅರಟ್ಟೈ ಮತ್ತು ಜೋಶ್ನಂತಹ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ಗಳನ್ನು ಬಳಸುವ ರೀತಿಯಲ್ಲೇ ಬದಲಾಯಿಸಬಹುದಾದ ಪ್ರಮುಖ ಸೂಚನೆಯನ್ನು ಭಾರತ ಸರ್ಕಾರ ಹೊರಡಿಸಿದೆ. ದೂರಸಂಪರ್ಕ ಇಲಾಖೆ (DoT) ಈ ಪ್ಲಾಟ್ಫಾರ್ಮ್ಗಳನ್ನು ಬಳಕೆದಾರರು ತಮ್ಮ ಸಾಧನದಲ್ಲಿ ಸಕ್ರಿಯ ಸಿಮ್ ಕಾರ್ಡ್ ಇಲ್ಲದೆ ತಮ್ಮ ಮೆಸೇಜಿಂಗ್ ಅಪ್ಲಿಕೇಶನ್ಗಳನ್ನು ಬಳಸಲು ಅಸಾಧ್ಯವಾಗುವಂತೆ ಮಾಡುವಂತೆ ಕೇಳಿದೆ. ಈ ಆದೇಶವು ಭಾರತದ ಹೊಸ ದೂರಸಂಪರ್ಕ ಸೈಬರ್ ಭದ್ರತಾ ತಿದ್ದುಪಡಿ ನಿಯಮಗಳು- 2025ರ ಭಾಗವಾಗಿದೆ, ಇದು ಮೊದಲ ಬಾರಿಗೆ ಅಪ್ಲಿಕೇಶನ್ ಆಧಾರಿತ ಮೆಸೇಜಿಂಗ್ ಸೇವೆಗಳನ್ನು ಟೆಲಿಕಾಂ ಶೈಲಿಯ ನಿಯಂತ್ರಣದ ಅಡಿಯಲ್ಲಿ ಇರಿಸುತ್ತದೆ.
ಈ ಹೊಸ ಕಾನೂನಿನ ಪ್ರಕಾರ, ವಾಟ್ಸ್ಆ್ಯಪ್ ಸಹಿತ ಮೆಸೇಜಿಂಗ್ ಆ್ಯಪ್ಗಳು ಇನ್ನು ಮುಂದೆ ಅಧಿಕೃತವಾಗಿ ದೂರ ಸಂಪರ್ಕ ಗುರುತಿನ ಬಳಕೆದಾರ ಸ್ವತ್ತುಗಳಾಗಳಿವೆ (ಟಿಐಯುಇ). ಇದರಿಂದಾಗಿ ಇಂತಹ ಆ್ಯಪ್ಗಳನ್ನು ಇನ್ನು ಮುಂದೆ ಸಕ್ರಿಯ ಸಿಮ್ ಸಂಪರ್ಕವಿಲ್ಲದೆ ಬಳಸಲು ಸಾಧ್ಯವಿಲ್ಲ. 90 ದಿನಗಳೊಳಗಾಗಿ ಈ ಸೇವೆಗಳಿಗೆ ಸಿಮ್ ಕಾರ್ಡ್ ಸಂಪರ್ಕ ಇರುವಂತೆ ಖಚಿತಪಡಿಸಿಕೊಳ್ಳುವುದು ಅಗತ್ಯ. ವಾಟ್ಸ್ಆ್ಯಪ್ ಸಹಿತ ಮೆಸೇಜಿಂಗ್ ಆ್ಯಪ್ಗಳನ್ನು ತಮ್ಮ ಕಂಪ್ಯೂಟರ್ಗಳ ವೆಬ್ ಬ್ರೌಸರ್ ಮೂಲಕ ಬಳಸುವ ಬಳಕೆದಾರರೂ ಸಹ ಪ್ರತೀ 6 ಗಂಟೆಗಳಿಗೊಮ್ಮೆ ಲಾಗ್ ಔಟ್ ಮಾಡುವುದು ಕಡ್ಡಾಯ. ಬಳಿಕ ಕ್ಯು.ಆರ್. ಕೋಡ್ ಮೂಲಕ ಪುನರ್ ದೃಢೀಕರಣ ಮಾಡಿಸಿಕೊಳ್ಳಬೇಕಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಸೈಬರ್ ಅಪರಾಧಕ್ಕೆ ಕಡಿವಾಣ ಹಾಕಬಹುದು ಎನ್ನುವುದು ಸರ್ಕಾರದ ವಾದ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವವರು ಇಂತಹ ಮೆಸೇಜಿಂಗ್ ಆ್ಯಪ್ಗಳನ್ನು ಸಿಮ್ ನಿಯಂತ್ರಣವಿಲ್ಲದೇ ದುರ್ಬಳಕೆ ಮಾಡಿಕೊಳ್ಳಲು ಅಸಾಧ್ಯ ಎಂದೂ ಸರ್ಕಾರ ತಿಳಿಸಿದೆ.
ಮೆಸೆಜಿಂಗ್ ಆ್ಯಪ್ ವೆರಿಫೈ ಮಾಡುವುದರಲ್ಲಿ ಇರುವ ಕೊರತೆಗಳನ್ನು ಸರಿಪಡಿಸಲು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ದೂರ ಸಂಪರ್ಕ ಇಲಾಖೆ ಹೇಳಿಕೊಂಡಿದೆ. ಪ್ರಸ್ತುತ ಈ ಹೆಚ್ಚಿನ ಮೆಸೇಜಿಂಗ್ ಆ್ಯಪ್ಗಳು ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಒಮ್ಮೆ ಮಾತ್ರ ವೆರಿಫೈ ಮಾಡಿಕೊಳ್ಳುತ್ತವೆ. ಅದೂ ಸಹ ಬಳಕೆದಾರರು ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುವ ಸಂದರ್ಭದಲ್ಲಿ. ಇದಾದ ಬಳಿಕ ಆ ಬಳಕೆದಾರ ತನ್ನ ಸಿಮ್ ಕಾರ್ಡ್ ತೆಗೆದು ಹಾಕಿದರೂ ಅಥವಾ ನಿಷ್ಕ್ರಿಯಗೊಳಿಸಿದರೂ ಈ ಆ್ಯಪ್ಗಳು ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ. ಈ ವ್ಯವಸ್ಥೆಯಿಂದಾಗಿ, ಮೆಸೇಜಿಂಗ್ ಆ್ಯಪ್ಗಳ ದುರ್ಬಳಕೆ ಮಾಡಲು, ಸೈಬರ್ ಕ್ರಿಮಿನಲ್ಗಳಿಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಮತ್ತು ಭಾರತದಿಂದ ಹೊರಗಿದ್ದುಕೊಂಡೇ ಕಾರ್ಯ ನಿರ್ವಹಿಸಲು ಅವಕಾಶವಿತ್ತು. ಮಾತ್ರವಲ್ಲದೆ ಸಿಮ್ ಬದಲಾಯಿಸಿ ಅಥವಾ ನಿಷ್ಕ್ರಿಯಗೊಳಿಸಿಯೂ ಈ ಸೇವೆಗಳನ್ನು ಬಳಸಬಹುದಾಗಿತ್ತು. ಇದೀಗ, ಹೊಸ ನಿಯಮದ ಮೂಲಕ ಮೆಸೇಜಿಂಗ್ ಫ್ಲ್ಯಾಟ್ಫಾರ್ಮ್ಗಳ ಮೂಲಕ ವಂಚನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ ಎಂಬ ಭರವಸೆ ಮೂಡಿದೆ ಎಂದು ಸೆಲ್ಯುಲರ್ ಅಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ಹೇಳಿಕೊಂಡಿದೆ.

ಇದೇ ಮಾದರಿಯ ಸುರಕ್ಷಾ ವಿಧಾನಗಳು ಈಗಾಗಲೇ ಡಿಜಿಟಲ್ ಪೇಮೆಂಟ್ ವಿಧಾನದಲ್ಲಿ ಜಾರಿಯಲ್ಲಿವೆ. ಅನಧಿಕೃತ ವ್ಯವಹಾರ ಚಟುವಟಿಕೆಗಳನ್ನು ತಡೆಗಟ್ಟಲು ಬ್ಯಾಂಕಿಂಗ್ ಮತ್ತು ಯುಪಿಐ ಆ್ಯಪ್ಗಳು ಕಠಿಣ ಸಿಮ್ ವೆರಿಫಿಕೇಶನ್ ನಿಯಮಗಳನ್ನು ಅನುಸರಿಸುತ್ತಿವೆ.
































































