ಚಳಿಗಾಲದಲ್ಲಿ ಹೀಗೆ ಮಾಡಿ

ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗುತ್ತದೆ. ಚಳಿಗಾಲಕ್ಕೆ ನಮ್ಮ ದೇಹವನ್ನು ತಯಾರಿಸುದು ಸೂಕ್ತ. ಪ್ರತೀ ಋತುವಿನಲ್ಲಿ ಪಾಲಿಸಬೇಕಾದ ಹಲವು ನಿಯಮಗಳು ಆಯುರ್ವೇದದಲ್ಲಿ ಹೇಳಿದೆ. ಇದನ್ನೇ ಋತುಚರ್ಯವೆಂದು ಕರೆಯುತ್ತಾರೆ. ನಾವು ಇದನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಆರೋಗ್ಯದಿಂದಿರಲು ಸಾಧ್ಯವಾಗುವುದು. ಹೇಮಂತ ಹಾಗೂ ಶಿಶಿರ ಋತು ಚಾತುರ್ಯ ಅಂದರೆ ಚಳಿಗಾಲದಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿದುಕೊಳ್ಳೋಣ. ಹೇಮಂತ ಋತುವಿನಲ್ಲಿ ಮಾರ್ಗಶಿರ ಹಾಗೂ ಪುಷ್ಯ ಮಾಸವು ಹಾಗೂ ಶಿಶಿರ ಋತುವಿನಲ್ಲಿ ಮಾಘ ಹಾಗೂ ಫಾಲ್ಗುಣ ಮಾಸ ಸೇರಿದೆ.

ಚಳಿಗಾಲದಲ್ಲಿ ವಾತ ಪ್ರಕೋಪ ವಿರುವುದು. ವಾತಾವರಣವು ಬಹಳ ತಂಪಾಗಿ ಶುಷ್ಕ ಹವೆಯಿಂದ ಕೂಡಿರುತ್ತದೆ. ಇದರಿಂದ ದೇಹದಲ್ಲಿ ತ್ವಚೆಯ ಶುಷ್ಕತೆ ಸಂದುನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಚಳಿ ಗಾಳಿಯಿಂದಾಗಿ ನೆಗಡಿ, ಕೆಮ್ಮು ಮುಂತಾದ ಕಫ ಕಟ್ಟುವ ಸಾಧ್ಯತೆಗಳೂ ಅಧಿಕ. ಹಾಗಾಗಿ ಈ ಋತುವಿನಲ್ಲಿ ತ್ವಚೆಯ ರಕ್ಷಣೆ ಬಹಳ ಅಗತ್ಯ. ಆದರೂ ಚಳಿಗಾಲದಲ್ಲಿ ಕೆಲವು ಒಳ್ಳೆಯ ಪರಿಣಾಮಗಳೂ ಇವೆ. ದೇಹ ಬಲ ಹಾಗೂ ಜೀರ್ಣಶಕ್ತಿ ಈ ಸಮಯದಲ್ಲಿ ಎಲ್ಲ ಋತುಗಳಿಗಿಂತ ಅಧಿಕವಿರುವುದರಿಂದ ಗುರು ಆಹಾರವನ್ನು ಅಂದರೆ ನಿಧಾನವಾಗಿ ಪಚನವಾಗುವ ಆಹಾರವನ್ನು ಸೇವಿಸುವ ಉತ್ತಮ ಕಾಲವಿದು.

ಸೇವಿಸಬಹುದಾದ ಆಹಾರ
ಜಠರಾಗ್ನಿಯು ಪ್ರಬಲವಾಗಿರುವುದರಿಂದ ಜಿಡ್ಡಿನ ಪದಾರ್ಥಗಳು, ಸಿಹಿ ಪದಾರ್ಥಗಳು, ಹುಳಿ ಮತ್ತು ಲವಣವಿರುವ ಆಹಾರ ಸೇವನೆ ಅಗತ್ಯ.

ಹೊಸ ಅಕ್ಕಿ, ಹುರುಳಿ, ಗೋಧಿ, ಬಾರ್ಲಿ, ಬೆಲ್ಲ, ಕಬ್ಬು, ಹಾಲು, ತುಪ್ಪ, ಪನೀರ್, ಬೆಣ್ಣೆ, ಉದ್ದಿನ ಬೇಳೆಯಿಂದ ಮಾಡಿದ ದೋಸೆ ಇಡ್ಲಿ, ಬಟಾಟೆ, ಗೆಣಸು, ಕ್ಯಾರೆಟ್, ಬೀಟ್ರೂಟ್, ಕುಂಬಳಕಾಯಿ, ಬಿಸಿನೀರು, ದ್ರಾಕ್ಷಿ ಮತ್ತು ಖರ್ಜೂರದ ಸೇವನೆ ಮಾಡಿದರೆ ಉತ್ತಮ. ಬೆಲ್ಲದಿಂದ ತಯಾರಿಸಿದ ಆಹಾರ ಆರೋಗ್ಯದಾಯಕ .

ಬೀಸುವ ಗಾಳಿ ತಂಪಾಗಿರುವುದರಿಂದ ನಮ್ಮ ತ್ವಚೆ ಶುಷ್ಕವಾಗುವುದು. ತ್ವಚೆಯ ಶುಷ್ಕತೆಯನ್ನು ದೂರ ಮಾಡಲುಎಳ್ಳೆಣ್ಣೆಯಿಂದ ದೇಹ ಅಭ್ಯಂಜನ ಹಾಗೂ ಬಿಸಿ ನೀರಿನ ಸ್ನಾನ ಒಳ್ಳೆಯದು. ಬೆಳಿಗ್ಗೆ ಹಾಗೂ ಸಾಯಂಕಾಲ ಬಿಸಿಲಿಗೆ ಮೈಯೊಡ್ಡಿದರೆ ತ್ವಚೆಗೆ ಹಿತ .

ಈ ಕಾಲದಲ್ಲಿ ದೇಹ ಬಲ ಹೆಚ್ಚಿರುವುದರಿಂದ ಪ್ರತಿ ನಿತ್ಯ ವ್ಯಾಯಾಮ ಮಾಡುವುದು ಉತ್ತಮ. ಪ್ರಕೃತಿಯಲ್ಲಿ ನಡಿಗೆ ಮಾಡೋದು ಹಿತಕರ.

ಬೆಚ್ಚನೆಯ ಬಟ್ಟೆ ಸಿಲ್ಕ್, ಉಣ್ಣೆ ಮತ್ತು ಹತ್ತಿ ಬಟ್ಟೆ ಧರಿಸುವುದರಿಂದ ದೇಹವನ್ನು ಚಳಿಯಿಂದ ಕಾಪಾಡಬಹುದು.

ಮುಖ ಕಾಂತಿ ಹೆಚ್ಚಾಗಲು ಹಾಲಿನ ಕೆನೆ ಹಚ್ಚಿ. ಒಣಗಿದ ನಂತರ ನೀರಿನಲ್ಲಿ ತೊಳೆಯಿರಿ. ಸಾಬೂನು ಬಳಸುವುದು ಆದಷ್ಟು ಕಡಿಮೆ ಮಾಡಿ, ಅದರ ಬದಲು ಹೆಸರಿನ ಹಿಟ್ಟು ಅಥವಾ ಕಡಲೆ ಹಿಟ್ಟಿಗೆ ಸ್ವಲ್ಪ ಹಾಲು ಹಾಕಿ ಕಲಸಿ ಬಳಸಿ ನೋಡಿ. ಅಲೋವೆರಾ ಜೆಲ್ ಕೂಡ ಬಳಸಬಹುದು.

ಗಮನದಲ್ಲಿಡಬೇಕಾದ ಅಂಶಗಳು
ಶುಷ್ಕ ಆಹಾರ ಮತ್ತು ಅಧಿಕ ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು. ಬಿಸಿ ನೀರನ್ನು ಕುಡಿದರೆ ಮತ್ತೂ ಒಳ್ಳೆಯದು. ಉಪವಾಸ ಮಾಡುವುದು ಹಿತವಲ್ಲ. ವಾತ ವರ್ಧಕ ಲಘು ಆಹಾರವನ್ನು ಸೇವಿಸಬೇಡಿ. ಕಟು ರಸ, ಕಹಿರಸ ಹಾಗೂ ಕಷಾಯ ರಸವಿರುವ ಆಹಾರವನ್ನು ಸೇವಿಸುವುದು ಆರೋಗ್ಯಕರವಲ್ಲ.

ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವುದು ವರ್ಜ್ಯ
ಈ ಋತುವಿನಲ್ಲಿ ಕೆಮ್ಮು, ನೆಗಡಿ, ಬ್ರಾಂಕೈಟಿಸ್, ನಿಮೋನಿಯಾ, ಗಂಟಲು ಕೆರೆತ ಕಾಡುವುದು ಸಾಮಾನ್ಯ ಇದನ್ನು ತಡೆಗಟ್ಟಲು ನೀರನ್ನು ಬಿಸಿ ಮಾಡಿ ಕುಡಿಯಿರಿ.
ತಿಂಡಿ ತಿನ್ನುವ ಮೊದಲು ಕೈ ಕಾಲನ್ನು ಸರಿಯಾಗಿ ತೊಳೆದು ಆಹಾರ ಸೇವಿಸಿ. ಆರೋಗ್ಯಕರ ಆಹಾರವನ್ನು ಸೇವಿಸಿ.
ಸ್ವಚ್ಛ ಬಟ್ಟೆಯನ್ನು ಧರಿಸಿರಿ. ತುಳಸಿ, ಅರಿಷಿಣ, ಕರಿಮೆಣಸು, ಬೆಲ್ಲ ಹಾಕಿ ತಯಾರಿಸಿದ ಕಷಾಯವನ್ನು ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ.









































































































error: Content is protected !!
Scroll to Top