ಡಿ. 3 : ಮಂಗಳೂರಿನಲ್ಲಿ ನಾರಾಯಣ ಗುರು – ಗಾಂಧೀಜಿ ಸಂವಾದ ಶತಮಾನೋತ್ಸವ

ಕಾರ್ಕಳ – ಹೆಬ್ರಿ ತಾಲೂಕು ಬಿಲ್ಲವ ಸಂಘಗಳ ಪೂರ್ವಭಾವಿ ಸಭೆ

ಕಾರ್ಕಳ : ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿಯವರ ಸಂವಾದದ ಶತಮಾನೋತ್ಸವ ಮತ್ತು ಶ್ರೀ ನಾರಾಯಣ ಗುರುಗಳ ಮಹಾ ನಿರ್ವಾಣ ಶತಮಾನೋತ್ಸವದ ಅಂಗವಾಗಿ ವರ್ಕಳ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಕೊಣಾಜೆ ಮಂಗಳೂರು ವಿವಿಯ ಮೈದಾನದಲ್ಲಿ ಡಿ. 3 ರಂದು ನಡೆಯಲಿರುವ ಶತಮಾನದ ಮಹಾಪ್ರಸ್ಥಾನ ನಾರಾಯಣ ಗುರು-ಗಾಂಧೀಜಿ ಸಂವಾದ ಶತಾಬ್ಧಿ ಕಾರ್ಯಕ್ರಮದಂಗವಾಗಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಬಿಲ್ಲವ ಸಂಘಗಳ ಪೂರ್ವಭಾವಿ ಸಭೆ ನ. 20 ರಂದು ಪೆರ್ವಾಜೆ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಿತು.

ಒಟ್ಟಾಗೋಣ – ಮಂಜುನಾಥ ಪೂಜಾರಿ ಮುದ್ರಾಡಿ
ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಮಂಡಳಿ ರಾಜ್ಯಾಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಮಾತನಾಡಿ, ಬಿಲ್ಲವರು ಒಟ್ಟಾಗುವುದಿಲ್ಲ ಎನ್ನುವ ಮಾತಿದೆ.‌ ಈ ಮಾತನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಬಿಲ್ಲವ ಸಮುದಾಯದ‌ ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಮಂಗಳೂರಿನಲ್ಲಿ ನಡೆಯುವ ವರ್ಕಳ ಸಂವಾದ ಕಾರ್ಯಕ್ರಮ ಮಹತ್ತರವಾಗಲಿದೆ ಎಂದರು.

ಇತಿಹಾಸ ನಿರ್ಮಿಸೋಣ – ಪಿ.ವಿ. ಮೋಹನ್
ಮುಖ್ಯ ಅತಿಥಿಯಾಗಿ ಭಾಗವಹಿಸಿದ‌‌ ಕಾರ್ಯಕ್ರಮದ ಪ್ರಧಾನ ಸಂಚಾಲಕ ಪಿ.ವಿ. ‌ಮೋಹನ್ ಮಾತನಾಡಿ, ವಿವೇಕಾನಂದರು, ರವೀಂದ್ರನಾಥ ಠ್ಯಾಗೋರ್, ಮಹಾತ್ಮ ಗಾಂದೀಜಿ ಸೇರಿದಂತೆ ಅನೇಕ ಮಹಾನ್ ಪುರುಷರು ನಾರಾಯಣ ಗುರುಗಳನ್ನು ಭೇಟಿಯಾಗಲು ಅವರೆಡೆಗೆ ಬಂದಿದ್ದರು. ಅಂತಹ ಮಹಾನ್ ಪುರುಷ ಸಾಮಾಜಿಕ ಕ್ರಾಂತಿಯ ಮೂಲಕ ಇತಿಹಾಸ ನಿರ್ಮಿಸಿದ್ದರು. ಅವರ ಸಂವಾದ ಶತಾಬ್ಧಿ ಕಾರ್ಯಕ್ರಮದಲ್ಲಿ ಬಿಲ್ಲವ ಸಮುದಾಯದ ಶಕ್ತಿ ಮತ್ತು ಸಂಘಟನೆ‌ಯ ಬಲವನ್ನು ಪ್ರದರ್ಶಿಸುವ ಮೂಲಕ ಮತ್ತೊಂದು ಇತಿಹಾಸವನ್ನು ನಿರ್ಮಿಸಬೇಕು ಎಂದರು.
ಈಗಾಗಲೇ ಇಟಲಿಯ ರೋಮ್‌ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಪೋಪ್ ಉದ್ಘಾಟಿಸಿದ್ದರೆ, ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದೀಗ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ‌‌ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್‌ ಕುಮಾರ್ ಮಾತನಾಡಿ, ನಾರಾಯಣ ಗುರುಗಳು‌ ಮತ್ತು ಗಾಂಧೀಜಿಯವರ‌ ಸಂವಾದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವತೆ ಪಡೆದಿದೆ ಎಂಬುದು ಸಂತಸದಾಯಕ. ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾರ್ಕಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವರು ಭಾಗವಹಿಸೋಣ‌ ಎಂದು ಹೇಳಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಪಿನ್ ಚಂದ್ರಪಾಲ್ ನಕ್ರೆ, ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಪ್ರಭಾಕರ್ ಬಂಗೇರ, ಹೆಬ್ರಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಸುಧಾಕರ್ ಕೋಟ್ಯಾನ್ ಕಲ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಕಳ ಹೆಬ್ರಿ‌ ತಾಲೂಕಿನ ಬಿಲ್ಲವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಕಳ ಬಿಲ್ಲವ ಸಂಘದ  ಸಂಘಟನಾ ಕಾರ್ಯದರ್ಶಿ ಅಶೋಕ ಸುವರ್ಣ ವಂದಿಸಿದರು.































































error: Content is protected !!
Scroll to Top