ಜಿಲ್ಲೆಯಲ್ಲಿ 660 ಲಸಿಕಾ ಕೇಂದ್ರಗಳು
ಉಡುಪಿ : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಡಿ. 21ರಂದು 0-5 ವರ್ಷದೊಳಗಿನ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಪೋಷಕರು ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕರೆ ನೀಡಿದರು.
ಅವರು ನ. 20ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದಡಿಯಲ್ಲಿ ಡಿ. 21 ರ ಭಾನುವಾರದಂದು ಜಿಲ್ಲೆಯ ಸುಮಾರು 660 ಲಸಿಕಾ ಕೇಂದ್ರಗಳಲ್ಲಿ ಪೊಲೀಯೋ ಹನಿಗಳನ್ನು ಹಾಕಲಾಗುವುದು ಎಂದ ಅವರು, ಯಾವುದೇ ಮಕ್ಕಳು ಪಲ್ಸ್ ಪೊಲೀಯೋ ಲಸಿಕೆಯಿಂದ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ 53,595 ಹಾಗೂ ನಗರ ಪ್ರದೇಶಗಳಲ್ಲಿ 13,545 ಸೇರಿದಂತೆ ಒಟ್ಟು 67,140 ಐದು ವರ್ಷದೊಳಗಿನ ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ. ಮಕ್ಕಳಿಗೆ ಲಸಿಕೆಗಳನ್ನು ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 660 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು ಎಂದ ಅವರು, ಇವುಗಳ ಜೊತೆಯಲ್ಲಿ ಟ್ರಾನ್ಸಿಟ್ 31 ಬೂತುಗಳು, 6 ಮೊಬೈಲ್ ಟೀಮ್‌ಗಳಿದ್ದು, 2788 ಸಿಬ್ಬಂದಿ ಹಾಗೂ 144 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ಮನೆ ಮನೆಗೆ ಡಿಸಿ
ಲಸಿಕಾ ದಿನದಂದು ಬಿಟ್ಟು ಹೋದ ಮಕ್ಕಳಿಗೆ ಗ್ರಾಮೀಣ ಭಾಗದಲ್ಲಿ ಡಿ. 22 ರಿಂದ 23 ರವರೆಗೆ ಹಾಗೂ ನಗರ ಭಾಗಗಳಲ್ಲಿ ಡಿ. 22 ರಿಂದ 24 ರ ವರೆಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಮನೆ-ಮನೆಗೆ ತೆರಳಿ ಲಸಿಕೆ ಹಾಕಲಿದ್ದು, ಅವರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಡಿಸಿಯವರು ಹೇಳಿದರು.
ಸಮನ್ವಯತೆ ಸಾಧಿಸಿ
ವಲಸೆ, ಕಟ್ಟಡ ಹಾಗೂ ಮತ್ತಿತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕೆ ಪಡೆಯುವುದರಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಪಲ್ಸ್ ಪೊಲೀಯೋ ಕಾರ್ಯಕ್ರಮದ ಯಶಸ್ವಿಗೆ ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪಾತ್ರ ಮಹತ್ತರವಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಲತಾ ನಾಯಕ್, ಜಿಲ್ಲಾ ಆರ್.ಸಿ. ಹೆಚ್. ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.































