ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ – ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನ

ಕನ್ನಡ ಬೆಳೆಸಲು ಬಳಸುವುದೊಂದೇ ದಾರಿ – ವಿಶ್ವೇಶ್ವರ ಭಟ್ ಅಭಿಮತ

ಬೆಳ್ತಂಗಡಿ : ಕನ್ನಡ ಬೆಳೆಸಬೇಕಾದರೆ ಕನ್ನಡ ಬಳಸುವುದೊಂದೇ ದಾರಿ ಎಂದು ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು. ಅವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಬುಧವಾರ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡಕ್ಕೆ ಸ್ವಂತ ಲಿಪಿ ಇದ್ದು ಎಲ್ಲಾ ದೃಷ್ಠಿಯಿಂದಲೂ ಕನ್ನಡ ಅತ್ಯಂತ ಪರಿಪೂರ್ಣ, ಸಮೃದ್ಧ ಹಾಗೂ ಸುಂದರ ಭಾಷೆಯಾಗಿದೆ. ಕನ್ನಡ ಉಳಿಸಬೇಕಾದರೆ ಭಾಷಾ ಶುದ್ಧಿಯೊಂದಿಗೆ ಮನೆಯಲ್ಲಿ ಹಾಗೂ ವ್ಯವಹಾರದಲ್ಲಿ ನಿತ್ಯವೂ ಶುದ್ಧ ಕನ್ನಡ ಬಳಸಬೇಕು. ಭಾಷೆ ಸ್ವಚ್ಛವಾಗಿದ್ದರೆ ಸಾಹಿತ್ಯವೂ ಸ್ವಚ್ಛವಾಗಿರುತ್ತದೆ ಎಂದವರು ಹೇಳಿದರು.

ಸೀಮಿತವಾಗದಿರಲಿ
ಸಾಹಿತ್ಯ ಪುಸ್ತಕಕ್ಕೇ ಮಾತ್ರ ಸೀಮಿತವಾಗಬಾರದು. ಸಾಹಿತ್ಯವು ದೈನಂದಿನ ಬದುಕು ಮತ್ತು ಸಮಾಜಕ್ಕೆ ಸಂಬಂಧಪಟ್ಟಿದೆ. ಇಂಗ್ಲಿಷ್ ಪದಗಳ ಬಳಕೆಯಿಂದ ಕನ್ನಡ ಅಪಾಯದ ಅಂಚಿನಲ್ಲಿದೆ ಎಂದು ಎಚ್ಚರಿಕೆ ನೀಡಿರು್ ವಿಶ್ವೇಶ್ವರ್‌ ಭಟ್‌ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಧರ್ಮಸ್ಥಳದ ಕೊಡುಗೆಯನ್ನು ಶ್ಲಾಘಿಸಿದರು.

ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು. ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು ಎಂದು ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಹೇಳಿದರು. ಇತ್ತೀಚೆಗೆ ಸಾಹಿತಿಗಳು ಬದುಕಿನ ವಾಸ್ತವದ ಬಗ್ಗೆ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಏನು ನಡೆಯುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಬರೆಯುತ್ತಾರೆ. ದೇಶದ ಅಸ್ತ್ವಿತ್ವ, ಭವಿಷ್ಯದ ಬಗ್ಗೆ ಮುಂದಿನ ಸವಾಲುಗಳ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು. ಪ್ರೀತಿ, ಪ್ರೇಮ ಅಲ್ಲದೇ ಬದುಕಿನ ಸೋಲು, ಸವಾಲು, ಅವಹೇಳನ, ಆತಂಕಗಳ ಬಗ್ಗೆಯೂ ಸಾಹಿತ್ಯ ರಚನೆ ಮಾಡಬೇಕು. ಬದುಕು ಹೇಗಿದೆಯೋ ಹಾಗೆ ಚಿತ್ರಿಸುವುದು ನವೋದಯ ಸಾಹಿತ್ಯವಾದರೆ, ಮುಂದೆ ಹೇಗೆ ಬದಲಾಗಬೇಕು ಎಂದು ಬರೆಯುವುದು ಪ್ರಗತಿಪರ ಸಾಹಿತ್ಯ. ವಿದೇಶದಲ್ಲಿ ಉದ್ಯೋಗ ಮಾಡಿ ಅಸ್ತಿತ್ವಕ್ಕಾಗಿ ಸಾಹಿತ್ಯ ರಚನೆ ಮಾಡುವುದು ನವ್ಯ ಸಾಹಿತ್ಯವಾಗಿದೆ. ಸುಂದರ ಬದುಕಿಗಾಗಿ ಹೋರಾಡಬೇಕು ಎಂದು ಬರೆಯುವುದು ಬಂಡಾಯ ಸಾಹಿತ್ಯವಾಗಿದೆ ಎಂದು ಹೇಳಿದ ಅವರು ಇಂದು ಮುದ್ರಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ಹಾಗೂ ಆಧುನೀಕರಣದಿಂದಾಗಿ ಹೆಚ್ಚು ಕೃತಿಗಳು ಪ್ರಕಟವಾಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ
ಧರ್ಮಸ್ಥಳದಲ್ಲಿ ಪ್ರತೀವರ್ಷ ಆಷಾಢ ಮತ್ತು ಶ್ರಾವಣಮಾಸದಲ್ಲಿ ಪುರಾಣ ವಾಚನ-ಪ್ರವಚನ, ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಸಂಕಿರಣ, ‘ಮಂಜುವಾಣಿ” ಮತ್ತು “ನಿರಂತರ” ಮಾಸಪತ್ರಿಕೆಗಳ ಪ್ರಕಾಶನ, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ನೈತಿಕಮೌಲ್ಯಗಳ ಪುಸ್ತಕಗಳ ಪ್ರಕಾಶನ, ಯಕ್ಷಗಾನ ಬಯಲಾಟ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ 2200
ಗ್ರಂಥಾಲಯಗಳನ್ನು ಪ್ರಾರಂಭಿಸಿ ಓದುವ ಹವ್ಯಾಸ ಬೆಳೆಸಲಾಗುತ್ತದೆ ಎಂದು ಹೆಗ್ಗಡೆಯವರು ಮಾಹಿತಿ ನೀಡಿದರು.

ಬೆಂಗಳೂರಿನ ಶಾಂತಾ ನಾಗಮಂಗಲ, ಡಾ. ರಘು, ವಿ., ಧಾರವಾಡದ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ ಸಾಹಿತ್ಯ ಮತ್ತು ಸಾರ್ಥಕ ಬದುಕಿನ ಬಗ್ಗೆ ಉಪನ್ಯಾಸ ನೀಡಿದರು. ಹರ್ಷೇಂದ್ರ ಡಿ. ಹೆಗ್ಗಡೆ, ಸುರೇಂದ್ರ ಡಿ. ಹೆಗ್ಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉನ್ಯಾಸಕರಾದ ಡಾ. ಶ್ರೀಧರ ಭಟ್ ಮತ್ತು ಡಾ. ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು. ರಾಜಶ್ರೀ ಎಸ್. ಹೆಗ್ಡೆ ವಂದಿಸಿದರು.









































































































error: Content is protected !!
Scroll to Top