ಅಂಧರ ಬಾಳಿಗೆ ಬೆಳಕಾಗುತ್ತಿರುವ ಸರಕಾರಿ ವೈದ್ಯೆ

ಜೀವನದ ನಿಜವಾದ ಅರ್ಥ ಸೇವೆಯಲ್ಲಿ ಅಡಗಿದೆ. ನಮ್ಮಲ್ಲಿನ ಜ್ಞಾನ, ಶ್ರಮ, ಹೃದಯವನ್ನು ಸಮಾಜದ ಹಿತಕ್ಕಾಗಿ ಬಳಸಿದಾಗ ದೊರೆಯುವ ಬೆಲೆಕಟ್ಟಲಾಗದ ಆತ್ಮತೃಪ್ತಿ, ಕಣ್ಣು ಕಾಣದವರ ಬದುಕಿನಲ್ಲಿ ಬೆಳಕು ತರಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಸಂತೋಷವೇನಿದೇ ಎಂದು ವೈದ್ಯಕೀಯ ವೃತ್ತಿಯನ್ನು ಸೇವೆಯೆಂದೇ ಪರಿಗಣಿಸಿರುವ ಅಪೂರ್ವ ವೈದ್ಯೆ ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರ ತಜ್ಞೆಯಾಗಿರುವ ಡಾ. ಮಾಲಿನಿ ಬಂಗೇರ.

ಕಳೆದ 5 ವರ್ಷಗಳಲ್ಲಿ ಸಾವಿರಕ್ಕೂ ಅಧಿಕ ಅಂಧರ ಬಾಳಿಗೆ ಬೆಳಕಾದವರು. ಕಣ್ಣಿಲ್ಲದೇ ಜಗತ್ತನ್ನು ನೋಡುವ ಅವಕಾಶದಿಂದ ವಂಚಿತರಾದವರ ಪಾಲಿಗೆ ಅಕ್ಷರಶಃ ಆಶಾಕಿರಣವಾದವರು. ಸಮಾಜ ಸೇವೆಯಲ್ಲಿಯೇ ಖುಷಿ, ನೆಮ್ಮದಿ ಕಾಣುತ್ತಿರುವ ಡಾ. ಮಾಲಿನಿ ಬಡ ರೋಗಿಗಳ ಹೃದಯ ಗೆದ್ದವರು.

ಶಿಕ್ಷಣ
ಮೂಲತಃ ಬೆಳ್ತಂಗಡಿಯವರಾಗಿರುವ ಮಾಲಿನಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಎಸ್‌.ಡಿ.ಎಂ. ಉಜಿರೆಯಲ್ಲಿ ಪೂರೈಸಿರುತ್ತಾರೆ. ಬಳಿಕ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮಂಗಳೂರಿನಲ್ಲಿ ಎಂಬಿಬಿಎಸ್ (1998 -2004) ವ್ಯಾಸಂಗ ಮಾಡಿರುತ್ತಾರೆ.

ವೃತ್ತಿ
2004ರಿಂದ 2013ರವರೆಗೆ ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿರುವ ಡಾ. ಮಾಲಿನಿ ಅವರು ಆ ಬಳಿಕ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ MS Ophthalmology ಪದವಿ ಪಡೆದಿರುತ್ತಾರೆ. 2016ರಿಂದ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು ದಾಖಲೆ ಎಂಬಂತೆ ಕಳೆದ 5 ವರ್ಷಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ಬಡವರ ಪಾಲಿಗೆ ವರವಾಗಿದ್ದಾರೆ.

ಪ್ರಶಂಸೆ
ತನ್ನ ಬಳಿ ಬಂದ ರೋಗಿಗಳ ಬಗ್ಗೆ ವಿಶೇಷ ಕಾಳಜಿ, ವಾತ್ಸಲ್ಯ, ಪ್ರೀತಿ ತೋರುವ ಡಾ. ಮಾಲಿನಿ ಅವರ ಸರಳತೆ, ರಜಾದಿನಗಳಲ್ಲೂ ಅವರ ಸ್ಪಂದನೆ, ಸೇವೆಯಿಂದಾಗಿಯೇ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾದವರು ಡಾ. ಮಾಲಿನಿ. ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಕೂಡ ಅಭಿನಂದಿಸಿದ್ದಾರೆ.

ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭ ಎಂಬಿಬಿಎಸ್‌ ಕಲಿಕೆಗೆ ಆರ್ಥಿಕ ಸಹಕಾರ ನೀಡಿದ್ದರು ಎಂದು ಸ್ಮರಣಿಸುತ್ತಾರೆ ಡಾ. ಮಾಲಿನಿ.

ಮರೆಯಲಾಗದ ಕ್ಷಣಗಳು
2022ರಲ್ಲಿ ಕಿನ್ನಿಗೋಳಿಯ ಬಡಕುಟುಂಬದ 18 ವರ್ಷದ ಗುರುಪ್ರಸಾದ್‌ ಎಂಬ ಹುಡುಗ ಎರಡೂ ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡು ಚಿಕಿತ್ಸೆಗಾಗಿ ಬಂದಿದ್ದು, ತಕ್ಷಣ ಅವನಿಗೆ ತುರ್ತು ಚಿಕಿತ್ಸೆ ನೀಡಿ ಬಳಿಕ ಫಾದರ್‌ ಮುಲ್ಲರ್‌ ಹಾಸ್ಪಿಟಲ್‌ನಲ್ಲಿ ಉಚಿತ ಚಿಕಿತ್ಸೆ ಕೊಡಿಸಿ 11 ದಿನಗಳ ಚಿಕಿತ್ಸೆಯ ನಂತರ ಅವನಿಗೆ ಮರಳಿ ದೃಷ್ಠಿ ಬಂದಾಗ ನನಗಾದ ಸಂತೋಷ ಮರೆಯಲು ಅಸಾಧ್ಯ. ಒಂದು ತಿಂಗಳು ಚಿಕಿತ್ಸೆ ಪಡೆದು ಸಂಪೂರ್ಣ ದೃಷ್ಟಿ ಮರಳಿ ಬಂದಾಗ ಆ ಹುಡುಗ ನಮ್ಮ ಆಸ್ಪತ್ರೆಗೆ ಬಂದು ಕೃತಜ್ಞತೆ ಹೇಳಿದ ರೀತಿ ಸ್ಮರಣೀಯ. ಅಂತೆಯೇ 19 ವರ್ಷದ ನರ್ಸಿಂಗ್‌ ವಿದ್ಯಾರ್ಥಿನಿಯೊಬ್ಬಳ ಮಿದುಳಿನ ಗೆಡ್ಡೆಯನ್ನು ಕಣ್ಣಿನ ನರದ ತಪಾಸಣೆಯ ಮೂಲಕ ಊಹಿಸಿ ತುರ್ತು MRI Scan ಮಾಡಿಸಿ ನರರೋಗ ಶಸ್ತ್ರಚಿಕಿತ್ಸಕರಿಗೆ ಕಳುಹಿಸಿದ್ದೆ, ಅವಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಿದುಳಿನ ಗೆಡ್ಡೆ ತೆಗೆದ ವೈದ್ಯರು ಕರೆ ಮಾಡಿ ಸ್ವಲ್ಪ ತಡವಾಗಿದ್ದರೂ ಹುಡುಗಿಯ ಪ್ರಾಣ ಹೋಗುತ್ತಿತ್ತು. ತುರ್ತಾಗಿ ಚಿಕಿತ್ಸೆ ಪಡೆಯಲು ಸಹಕರಿಸಿದ್ದಕ್ಕೆ ಧನ್ಯವಾದಗಳು ಎಂದ ಕ್ಷಣ ಜೀವನದಲ್ಲಿ ಸದಾ ನೆನಪಿನಲ್ಲಿರುವಂತಹದು ಎನ್ನುವ ಡಾ. ಮಾಲಿನಿ ಕಣ್ಣಿನ ಪೊರೆಯಿಂದಾಗಿ ದೃಷ್ಠಿ ಕಳೆದುಕೊಂಡು ಗಾಲಿಕುರ್ಚಿಯಲ್ಲಿ ಬರುವ ರೋಗಿಗಳು ಶಸ್ತ್ರಚಿಕಿತ್ಸೆಯಾದ ನಂತರ ಬೇರೆಯವರ ಸಹಾಯವಿಲ್ಲದೆ ನಡೆದುಕೊಂಡು ಹೋಗುವಾಗ ಅವರ ಮುಖದಲ್ಲಿ ಕಾಣುವ ನಗುವನ್ನು ಕಂಡಾಗ ಆಗುವ ತೃಪ್ತಿ ಕೋಟಿ ರೂಪಾಯಿಗೂ ಮಿಗಿಲಾದದ್ದು ಎನ್ನುತ್ತಾರೆ.

ದೃಢಸಂಕಲ್ಪ, ಪರಿಶ್ರಮ ಮತ್ತು ಆತ್ಮವಿಶ್ವಾಸವೇ ನಮ್ಮ ಭವಿಷ್ಯವನ್ನು ಉಜ್ವಲಗೊಳಿಸುವುದು. ಜೀವನದಲ್ಲಿ ಎದುರಾಗುವ ಯಾವ ಸಮಸ್ಯೆ, ಸಂಕಷ್ಟಗಳಿಗೂ ಎದೆಗುಂದದೆ ಧೈರ್ಯವಾಗಿ ಮುಂದುವರಿಯಬೇಕು. ಅದೇ ನಮ್ಮ ಜೀವನದ ಯಶಸ್ಸು ಎನ್ನುತ್ತಾರೆ ಡಾ. ಮಾಲಿನಿ.

ಡಾ. ಮಾಲಿನಿ ಅವರ ಸೇವಾಮನೋಭಾವ, ಬಧ್ಧತೆಯನ್ನು ಗುರುತಿಸಿರುವ ಪ್ರತಿಷ್ಠಿತ ಎಂಸಿಎಫ್ ಸಂಸ್ಥೆ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ಅವಶ್ಯವಿರುವ 10 ಲಕ್ಷ ರೂ. ಮೌಲ್ಯದ ಪರಿಕರವನ್ನು ನೀಡಿದೆ.















































































error: Content is protected !!
Scroll to Top