✒️ ರವೀಂದ್ರ ಮೊಯ್ಲಿ
ಕಾರ್ಕಳ ಊರಲ್ಲಿ ಮನಸ್ಸಿನಲ್ಲಿ ಮೂಡುವ ವ್ಯಕ್ತಿ – ಶಕ್ತಿ ಎಂ. ಕೆ. ವಿಜಯ ಕುಮಾರ್. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ವಕೀಲರಾಗಿ ಹಲವಾರು ದಶಕಗಳಿಂದ ಮನೆಮಾತಾಗಿರುವ ಎಂ. ಕೆ. ಅವರ ಇನ್ನೊಂದು ಬದುಕು ಅದು ರಾಜಕೀಯ. ಸಿದ್ದಾಂತದೊಂದಿಗೆ ರಾಜಿ ಮಾಡಿಕೊಳ್ಳದ ಕಾರಣದಿಂದ ಪ್ರವಾಹದ ವಿರುದ್ಧವಾಗಿ ಈಜಬೇಕಾದ ಅನಿವಾರ್ಯತೆಯನ್ನು ತನ್ನ ರಾಜಕೀಯ ಜೀವನದುದ್ದಕ್ಕೂ ಎದುರಿಸಿಕೊಂಡು ಬಂದವರು. ರಾಜಕೀಯ ಜೀವನದಲ್ಲಿ ತಾನು ನಿತ್ಯ ತೊಡುವ ಶುಭ್ರ, ಶ್ವೇತ ವಸ್ತ್ರದಂತೆ ತನ್ನ ವರ್ಚಸ್ಸು, ವಿದ್ವತ್ತು, ಸಿದ್ಧಾಂತಗಳನ್ನು ಪಾಲಿಸಿ, ಪೋಷಿಸಿಕೊಂಡು ಬಂದವರು.
ಎಂ.ಕೆ. ಅವರ ಯೋಗ್ಯತೆಗೆ ಸರಿಯಾದ ಯೋಗ ಒದಗಿ ಬರುತ್ತಿದ್ದಲ್ಲಿ ಸಂಸತ್ತು ಅಥವಾ ವಿಧಾನ ಸಭೆಯಲ್ಲಿ ಜನಪ್ರತಿನಿಧಿಯಾಗಿರಬೇಕಿತ್ತು. ಉತ್ತಮ ಸಂಸದೀಯ ಪಟುಗಳಿಗೆ ಇರಬೇಕಾದ ಎಲ್ಲಾ ಲಕ್ಷಣ, ಯೋಗ್ಯತೆ, ತಿಳುವಳಿಕೆ, ಆಸ್ಥೆ, ಆಸಕ್ತಿ ಇತ್ತು.
ಸಾಮಾಜಿಕ ಕಳಕಳಿ, ಪ್ರಗತಿಪರ ಚಿಂತನೆಯಿದ್ದ ಎಂ. ಕೆ. ವಿಜಯ ಕುಮಾರ್ ಅವರು ರಾಷ್ಟ್ರ ನಿರ್ಮಾಣದ ಕೈಂಕರ್ಯದಲ್ಲಿ ಭಾಗಿಯಾದ ಸ್ವತಂತ್ರ ಪೂರ್ವದ ಸಂಘಟನೆಗಳ ಕುರಿತು ಒಲವುಳ್ಳವರಾಗಿ ಅದರ ಧೈಯೋದ್ದೇಶದ ಬಗ್ಗೆ ಪ್ರಭಾವಿತರೂ ಆಗಿದ್ದವರು. ಭಾರತದ ಸ್ವಾತಂತ್ರ್ಯದ ನಂತರ ಕಾಂಗ್ರೆಸನ್ನು ವಿಸರ್ಜಿಸಿ ಸ್ವತಂತ್ರವಾಗಿ ಮಾಡದೇ ಇರುವುದರಿಂದ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಜನಾದೇಶವನ್ನು ಪಡೆಯಬೇಕೆನ್ನುವ ಗಾಂಧೀಜಿಯವರ ಮಾತನ್ನು ಪಾಲಿಸದಿರುವುದರಿಂದ ಎಂ.ಕೆ. ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಧುಮುಕಿದರು.
ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಲ್ಲೊಬ್ಬರಾದ ದೇವರಾಜ ಅರಸು ಅವರು ಕರ್ನಾಟಕ ಭೂ ಸುಧಾರಣಾ ಕಾನೂನನ್ನು 1974 ರಲ್ಲಿ ಜಾರಿಗೆ ತಂದಾಗ ಅದರ ಸಂಪೂರ್ಣ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡ ಮತ್ತು ಕಾಂಗ್ರೆಸ್ ಅತ್ಯಂತ ಬಲಿಷ್ಠವಾಗಿದ್ದ ಸಂದರ್ಭದಲ್ಲಿ ಆ ಪಕ್ಷವನ್ನು ಎದುರಿಸಲು ಕಾರ್ಕಳದ ಜನತೆಗೆ ಸಿಕ್ಕ ನಾಯಕ ಎಂ.ಕೆ. ವಿಜಯ ಕುಮಾರ್. 1977ರ ತುರ್ತು ಪರಿಸ್ಥಿತಿಯನ್ನು ತನ್ನ ವಕೀಲ ವೃತ್ತಿಯ ಮೂಲಕವೇ ವಿರೋಧಿಸಿದರಲ್ಲದೇ ತನ್ನ ಅನುಯಾಯಿಗಳ ಮೂಲಕ, ಹಿತೈಷಿಗಳ ಒತ್ತಾಯ ಮತ್ತು ಒತ್ತಾಸೆಯಿಂದ ಪ್ರಥಮವಾಗಿ 1978ರಲ್ಲಿ ಜನ ಸಂಘದ ಮೂಲಕ ಕರ್ನಾಟಕ ವಿಧಾನ ಸಭೆಗೆ ಪ್ರವೇಶ ಪಡೆಯಲು ಪ್ರಯತ್ನಿಸಿದ ಅವರು ಎದುರಾಳಿ ಕಾಂಗ್ರೆಸ್ಸಿನ ಎಂ. ವೀರಪ್ಪ ಮೊಯ್ಲಿಯವರಿಗೆ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತೀವ್ರ ಪೈಪೋಟಿ ನೀಡಿ ನಿಜ ಅರ್ಥದ ಜನನಾಯಕರಾದರು.

ತನ್ಮಧ್ಯೆ ಕರ್ನಾಟಕದಲ್ಲಿ ಲೋಹಿಯಾ ವಾದದಿಂದ ಪ್ರಭಾವಿತರಾದ ಸಮಾಜವಾದ ಚಿಂತನೆಯ ರಾಜಕೀಯ ಮುಖಂಡರನ್ನು ಒಳಗೊಂಡ ಜನತಾ ಪಕ್ಷ ಅಧಿಕಾರಕ್ಕೆ ಬಂದು ರಾಮಕೃಷ್ಣ ಹೆಗಡೆಯವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಆಹ್ವಾನದಂತೆ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. 1985ರಲ್ಲಿ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಾಳುವಾಗಿ ನೆಲೆ ಕಂಡುಕೊಳ್ಳುತ್ತಿದ್ದ ಜನತಾ ಪಕ್ಷಕ್ಕೆ ಕಾರ್ಕಳದಲ್ಲಿ ನೆಲೆ ಮತ್ತು ಬೆಲೆಯನ್ನು ಒದಗಿಸಿಕೊಟ್ಟ ಕೀರ್ತಿ ಎಂ. ಕೆ. ವಿಜಯ ಕುಮಾರ್ ಅವರದ್ದು. ಆ ಸಂದರ್ಭದಲ್ಲಿ ಅವರ ವೈಯಕ್ತಿಕ ವರ್ಚಸ್ಸಿನಿಂದಲೇ ಚುನಾವಣೆಯಲ್ಲಿ ಸೆಣಸುತ್ತಿದ್ದರು. ತದ ನಂತರ ಜನತಾ ಪಕ್ಷದ ಆಂತರಿಕ ಸ್ಥಿತ್ಯಂತರ, ನೀತಿಯ ಪಲ್ಲಟಗಳು ಅವರನ್ನು ತನ್ನ ಮಾತೃಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ಮರಳುವಂತೆ ಮಾಡಿದ್ದು ಮಾತ್ರವಲ್ಲ ಮಾತೃಪಕ್ಷದ ಸರ್ವಸದಸ್ಯರ ಸಂತೋಷಕ್ಕೂ, ಉತ್ಸಾಹಕ್ಕೂ ಕಾರಣವಾಯಿತು. ಭಾರತೀಯ ಜನತಾ ಪಕ್ಷದ ಕಾರ್ಕಳದ ಓರ್ವ ಹಿರಿಯ, ಪ್ರಬುದ್ದ ನಾಯಕನಾಗಿ, ದಿಗ್ದರ್ಶಕನಾಗಿ ಭಾರತೀಯ ಜನತಾ ಪಕ್ಷದ ಕಾರ್ಕಳದ ಆಧಾರ ಸ್ತಂಭಗಳಾದ ಪಾಂಡುರಂಗ ಪ್ರಭು, ಬೋಳ ಪ್ರಭಾಕರ ಕಾಮತ್‌ರವರೊಂದಿಗೆ ಭುಜಕ್ಕೆ ಭುಜ ಕೊಟ್ಟು ಪಕ್ಷದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಆದರ್ಶ ನಾಯಕರಾಗಿದ್ದರು. ಇದರ ಫಲವೇ 2004ರಲ್ಲಿ ಪ್ರಪ್ರಥಮ ಬಾರಿಗೆ ಕಾರ್ಕಳ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಶಾಸಕ ವಿಧಾನಸಭೆಗೆ ಆಯ್ಕೆಯಾಗುವಂತಾಯಿತು.

ದೇಶದಾದ್ಯಂತ ನರೇಂದ್ರ ಮೋದಿಯವರ ಅಲೆ ಜನಮಾನಸದಲ್ಲಿದ್ದಾಗ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕೆಂದು ಜನಗಳ, ನಾಯಕರ ಒತ್ತಾಯ ಬಂದದ್ದೇ ಇವರ ಹಿರಿತನಕ್ಕೆ, ಯೋಗ್ಯತೆಗೆ ಸಾಕ್ಷಿ. ಆ ಅವಕಾಶವನ್ನು ವಿನಯಪೂರ್ವಕವಾಗಿ ನಿರಾಕರಿಸಿ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸುವಲ್ಲಿ ಅವರ ಶ್ರಮ ಬಹಳಷ್ಟಿದೆ. ರಾಷ್ಟ್ರೀಯ ಕಾರ್ಯಕಾರಿಣಿಗೆ ಎಂ.ಕೆ. ಸದಸ್ಯರಾಗಿದ್ದು ಪಕ್ಷ ಸಂಘಟನೆಗೆ ದೊರೆತ ಉಡುಗೊರೆ. ವಕೀಲ ವೃತ್ತಿ, ರಾಜಕೀಯದಲ್ಲಿಯೂ ಕಿರಿಯರಿಂದ ಹಿರಿಯರವರೆಗೆ ಹೀಗೆ ಎಲ್ಲಾ ವಯೋಮಾನದವರ ಗೆಳೆತನ ಪೂರ್ವಕ ಸಂಪರ್ಕ ಇದ್ದರೂ ಕೂಡಾ ಬಿಗುಮಾನ ತೋರದ ಸರಳ ಸಜ್ಜನಿಕೆ ಇವರದು. ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ, ನರೇಂದ್ರ ಮೋದಿ, ಜಾರ್ಜ್ ಫರ್ನಾಂಡಿಸ್, ರಾಮಕೃಷ್ಣ ಹೆಗಡೆ ಅವರಂತಹ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದರೂ ಸಾಮಾನ್ಯ ಕಾರ್ಯಕರ್ತನಂತಹ ನಡವಳಿಕೆ ವಿಜಯ ಕುಮಾರ್ ಅವರದ್ದು.
ತನ್ನ ವಯಸ್ಸನ್ನು ಪರಿಗಣಿಸದೇ ಅವಿರತವಾಗಿ ವಕೀಲರಾಗಿ ಸೇವೆ ಸಲ್ಲಿಸಿರುವ ಎಂ. ಕೆ. ವಿಜಯ ಕುಮಾರ್ ಚುರುಕುತನ ಯುವಕರನ್ನೂ ನಾಚಿಸುವಂತಹದ್ದು. ಉತ್ತಮ ವಾಗ್ಮಿಯಾಗಿ ಜನರನ್ನು ಸೆಳೆಯಬಲ್ಲ ಭಾಷಣಕಾರರೂ ಆಗಿದ್ದ ಎಂ.ಕೆ. ಅವರು ಕೊಡುಗೈ ದಾನಿಯಾಗಿಯೂ ಗುರುತಿಸಿಕೊಂಡವರು. ಒತ್ತಡದ ನಡುವೆ ಸ್ಥಿತಪ್ರಜ್ಞನಾಗಿ ತನ್ನ ವ್ಯಕ್ತಿತ್ವವನ್ನು ಪೋಷಿಸಿಕೊಂಡು ಉಳಿದವರಿಗೆ ಆದರ್ಶ ಪ್ರಾಯರಾದ ಅವರು ಸಾಧಕರಿಗೆ ಸೂಕ್ತ ಉದಾಹರಣೆಯಾಗಿ ನಿಲ್ಲಬಲ್ಲ ವ್ಯಕ್ತಿತ್ವದವರಾಗಿದ್ದರು.

ಬದುಕಿನ ಆದರ್ಶಕ್ಕಾಗಿ ನಿತ್ಯ ನಿರಂತರ ಚಿಂತನಶೀಲರಾಗಿದ್ದ ಅವರು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾ ಅವರನ್ನು ಬೆಳೆಸುತ್ತಿದ್ದ ಪರಿ ವರ್ಣಣಾತೀತ. ತನ್ನ ವೃತ್ತಿಯ ಬಗೆಗಿನ ಅಗಾಧ ಪ್ರೀತಿ, ವೃತ್ತಿ ಬದ್ಧತೆ, ಸತತ ಪರಿಶ್ರಮ, ನಿರಂತರ ಅಧ್ಯಯನ ಶೀಲತೆ ಮತ್ತು ಕಿರಿಯರೊಂದಿಗೆ ಬೆರೆತು ಅನುಭವವನ್ನು ಹಂಚಿಕೊಳ್ಳುವ ಪರಿಯಿಂದ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಜನಮನ ಗೆದ್ದ ವಿಜಯ ಕುಮಾರ್ ಅವರ ಆತ್ಮಕೆ ಚಿರಶಾಂತಿ ದೊರೆಯಲಿ.





















