ನಾ ಕಂಡಂತೆ ಎಂ. ಕೆ. ವಿಜಯ ಕುಮಾರ್‌

ದಣಿವರಿಯದ ಶ್ರಮ – ಕರ್ತವ್ಯ ನಿಷ್ಠೆ ಅನುಕರಣೀಯ

ನಾನು ಅಂದು 4ನೇ ತರಗತಿ ವಿದ್ಯಾರ್ಥಿ, ವಿಧಾನಸಭೆ ಚುನಾವಣೆಯ ಕಾವು ರಂಗೇರಿತ್ತು. ಕಾರ್ಕಳ ವಿಧಾನಸಭಾ ಕ್ಷೇತ್ರದ ಎಲ್ಲೆಂದರಲ್ಲಿ ಚುನಾವಣಾ ಭಿತ್ತಿಪತ್ರಗಳು ಗೋಡೆಗಳ ಮೇಲೆ ರಾರಾಜಿಸುತ್ತಿದ್ದವು. ಆ ಭಿತ್ತಿಪತ್ರದಲ್ಲಿ ಬರೆದ ಬರವಣಿಗೆ “ವಿಧಾನಸಭೆಯಲ್ಲಿ ಹುಲಿಯಂತೆ ಘರ್ಜಿಸುವ ಅಭ್ಯರ್ಥಿ ಆಯ್ಕೆಯಾಗಬೇಕೆ ? ಹಾಗಾದರೆ ಶ್ರೀ ಎಂ.ಕೆ. ವಿಜಯ ಕುಮಾರ್ ಇವರಿಗೆ ಮತ ನೀಡಿರಿ” ಎನ್ನುವ ಘೋಷವಾಕ್ಯ ಓದಿದ ನೆನಪು ಇಂದು ಕೂಡ ನನ್ನ ಮನಸ್ಸಿನಲ್ಲಿ ನಿಶ್ಚಲವಾಗಿ ನಿಂತಿದೆ. ಆ ವಯಸ್ಸಿನಲ್ಲಿ ರಾಜಕೀಯದ ಗಂಧಗಾಳಿ ಇಲ್ಲದಿದ್ದರೂ ಕೂಡ ಅವ್ಯಕ್ತವಾಗಿ ಎಂ. ಕೆ. ವಿಜಯ ಕುಮಾರ್‌ ಅವರ ಅಭಿಮಾನಿಯಾಗಿದ್ದೆ. ನನ್ನ ತಂದೆ ಪ್ರಸ್ತುತ ದಿವಂಗತ ಹರಿಭಟ್‌ ಅವರೂ ಕೂಡ ಎಂ.ಕೆ. ವಿಜಯ ಕುಮಾರ್‌ ಅವರ ಅಭಿಮಾನಿ. ಮನೆಯಲ್ಲಿ ಅವರದೇ ಗುಣಗಾನ.
ಒಂದು ರಾತ್ರಿ ಸುಮಾರು 9 ಗಂಟೆ ಸಮಯಕ್ಕೆ ಹಲವಾರು ವಾಹನಗಳು ನಮ್ಮ ಮನೆಗೆ ಬಂದವು. ಅದರಲ್ಲಿ ಶ್ವೇತ ವಸ್ತ್ರಧಾರಿಯಾಗಿ ಬಂದಿಳಿದ ವ್ಯಕ್ತಿಯೇ ಎಂ.ಕೆ. ವಿಜಯ ಕುಮಾರ್ ಎಂದು ತಿಳಿದು ಮನಸ್ಸು ಪುಳಕಿತವಾಯಿತು. ನಾನು ಚುನಾವಣಾ ಭಿತ್ತಿಪತ್ರದಲ್ಲಿ ನೋಡಿದ ವ್ಯಕ್ತಿಯು ನಮ್ಮೆದುರು ಬಂದು ನಿಂತಾಗ, ಅಂತಹ ವ್ಯಕ್ತಿ ನಮ್ಮ ಮನೆಗೆ ಬಂದದ್ದನ್ನು ನೋಡಿ ಸಂತೋಷ ಮತ್ತು ಹೆಮ್ಮೆ ಎನಿಸಿತು.
ನಾನು ವಕೀಲ ವೃತ್ತಿಗೆ ಬರಬೇಕೆಂದು ಬಹುಶಃ ವಿಧಿ ಲಿಖಿತವಾಗಿತ್ತು. ಇದರ ಸುಳಿವು ಕೂಡಾ ನನ್ನ ಬಾಲ್ಯದಲ್ಲಿಯೇ ಸಿಕ್ಕಿತ್ತು. ಆ ಆಸೆಯು ಹೆಮ್ಮರವಾಗಿ ಬೆಳೆದು ನನಗೆ ಈ ವೃತ್ತಿಗೆ ಆದರ್ಶವಾಗಿ ನಿಂತವರೇ ಎಂ.ಕೆ. ವಿಜಯ ಕುಮಾರ್‌.

ನಾನು ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರಿನಲ್ಲಿ ಅಂತಿಮ ವರ್ಷದ ಎಲ್‌ಎಲ್.ಬಿ ವ್ಯಾಸಂಗ ಮಾಡುತ್ತಿದ್ದ ವೇಳೆ ಅನೇಕ ಕಾನೂನು ತಜ್ಞರನ್ನು ಕರೆಯಿಸಿ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಲಾಯಿತು. ಆ ವಿಚಾರ ಸಂಕಿರಣದಲ್ಲಿ ಎಂ.ಕೆ. ವಿಜಯ ಕುಮಾರ್‌ ಅವರು ಸೇರಿದಂತೆ ಬೇರೆ ಕಾನೂನು ತಜ್ಞರು ಕೂಡ ಭಾಷಣವನ್ನು ಮಾಡಿದ್ದರು. ಆದರೆ, ಅವರೆಲ್ಲರ ಭಾಷಣವನ್ನು ಕೇಳಿದ ನಂತರ ನನ್ನ ಕೇರಳದ ಸಹಪಾಠಿಯೊಬ್ಬ ಆ ದಿನ ನಡೆದ ಇಡೀ ವಿಚಾರ ಸಂಕಿರಣದಲ್ಲಿ ಮನ ಮುಟ್ಟುವ ಭಾಷಣ ಮಾಡಿದ್ದು ಎಂ.ಕೆ ವಿಜಯ ಕುಮಾರ್ ಮಾತ್ರ ಎಂದು ಹೇಳಿದ. ಅಂದು ಅವರು ತಮ್ಮ ಭಾಷಣದಲ್ಲಿ “ನಾವು ಕಾಲೇಜಿನಲ್ಲಿ ಕಲಿಯುವ ವಿಷಯಗಳು ನಮ್ಮ ವೃತ್ತಿ ಜೀವನಕ್ಕೆ ಸಾಕಾಗುವುದಿಲ್ಲ. ಅದು ಮುಂದೆ ವಕೀಲ ವೃತ್ತಿಯನ್ನು ನಡೆಸುವಾಗ ಅನುಭವದಿಂದ ಬರುತ್ತದೆ. ಪ್ರತಿ ಹೆಜ್ಜೆ-ಹೆಜ್ಜೆಗೂ ವೃತ್ತಿಯಲ್ಲಿ ನಾವು ಅನುಭವವನ್ನು ಗಳಿಸಬೇಕಾಗಿದೆ. ಆದ್ದರಿಂದ ಯುವ ವಕೀಲರು ಕೇಸಿನ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸೂಕ್ತ ರೀತಿಯಲ್ಲಿ ವಾದ ಮಂಡಿಸಬೇಕು. ಇದರಿಂದ ಯಶಸ್ಸು ಸಾಧ್ಯ” ಎಂದು ಹೇಳಿದ್ದರು. ಇದು ಅವರ ಜೀವನದಲ್ಲಿ ಅಳವಡಿಸಿಕೊಂಡಿರುವ ಸತ್ಯ ಕೂಡ.

ನನ್ನ ವಿದ್ಯಾಭ್ಯಾಸ ಮುಗಿದ ಅನಂತರ ಯಾರ ಕಚೇರಿಗೆ ಸಹಾಯಕನಾಗಿ ಸೇರಬೇಕು ಎಂಬ ಗೊಂದಲ ನನ್ನಲ್ಲಿರಲಿಲ್ಲ. ಏಕೆಂದರೆ ಎಂ.ಕೆ. ವಿಜಯ ಕುಮಾರ್ ನನ್ನ ಗುರುವೆಂದು ಮೊದಲೇ ನಿರ್ಧರಿಸಿದ್ದೆ. ಅದಕ್ಕೆ ತಕ್ಕಂತೆ ನನ್ನ ತಂದೆಗೆ ಎಂ.ಕೆ. ವಿಜಯ ಕುಮಾರ್‌ ಅವರಲ್ಲಿದ್ದ ಅಭಿಮಾನ ಮತ್ತು ಸಲುಗೆ ಕೂಡ ಸಹಕಾರಿಯಾಯಿತು. ನೇರವಾಗಿ ನನ್ನ ತಂದೆಯವರು “ನಿಮ್ಮ ಕಚೇರಿಗೆ ನನ್ನ ಮಗ ಬರುತ್ತಾನೆ. ಅವನಿಗೆ ಒಳ್ಳೆ ಮಾರ್ಗದರ್ಶನ ನೀಡಿ” ಎಂದು ಹೇಳಿದ್ದರು. 1993ರಲ್ಲಿ ಎಂ.ಕೆ. ಅವರಿಗೆ ಸಹಾಯಕ ವಕೀಲನಾಗಿ ಸೇರಿದೆ.

ಈದು ಗ್ರಾಮದ ಗಂಗೆನೀರು ಎಂಬಲ್ಲಿಂದ ನಾನು ಕಾರ್ಕಳಕ್ಕೆ ಹೋಗಿ ಬರುತ್ತಿದ್ದೆ. ಒಂದು ದಿನ ರಾತ್ರಿ ವಿಜಯ ಕುಮಾರ್ ಅವರು ನನ್ನನ್ನು ಕರೆದು “7 ಗಂಟೆಗೆ ಕಚೇರಿಯಿಂದ ಹೋದರೆ ನಿಮಗೆ ಏನು ಕಲಿಯಲು ಆಗುವುದಿಲ್ಲ. ಆದ್ದರಿಂದ ಕಾರ್ಕಳದಲ್ಲಿಯೇ ನಿಲ್ಲುವ ವ್ಯವಸ್ಥೆ ಮಾಡುವುದು ಒಳ್ಳೆಯದು” ಎಂದರು. ಆ ಪ್ರಕಾರ ಕಾರ್ಕಳದಲ್ಲಿಯೇ ರೂಮ್‌ನಲ್ಲಿ ನಿಂತು ಮೊದಲ 3 ವರ್ಷ ಅಂದರೆ 1993 ರಿಂದ 1996 ರವರೆಗೆ ಕಠಿಣ ಅಭ್ಯಾಸದಲ್ಲಿ ನಿರತನಾಗಿದ್ದೆ. ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಹಾಜರಾಗುತ್ತಿದ್ದ ನನ್ನ ಗುರುಗಳು ರಾತ್ರಿ 10 ಗಂಟೆವರೆಗೂ ಕರ್ತವ್ಯ ನಿರತರಾಗುತ್ತಿದ್ದರು. ಅವರ ಅವಿರತ ಶ್ರಮ ಹಾಗೂ ದಣಿವರಿಯದ ಕೆಲಸವನ್ನು ನೋಡಿ ನಾನು ಕೂಡ ಅಷ್ಟೇ ಪರಿಶ್ರಮದಿಂದ ಅಧ್ಯಯನವನ್ನು ಮಾಡಬೇಕು ಎನ್ನುವಂತಹ ಪ್ರೇರಣೆ ನನಗೆ ಸಿಕ್ಕಿತು.

ಯಶಸ್ವಿ ನ್ಯಾಯವಾದಿ
ಅವರ ಜೊತೆ ಸಹಾಯಕ ವಕೀಲನಾಗಿ ಕೆಲಸ ಮಾಡುವ ಸಮಯದಲ್ಲಿ ಅವರ ಕಾರ್ಕಳ ನ್ಯಾಯಾಲಯದಲ್ಲಿ ಇರುವ ಎಲ್ಲಾ ಸಿವಿಲ್ ಕೇಸ್‌ಗಳಲ್ಲಿ ಪ್ರತಿನಿಧಿಸುವ ಅವಕಾಶವನ್ನು ಮಾಡಿಕೊಟ್ಟರು. ಜೊತೆಗೆ ವಕೀಲ ವೃತ್ತಿಯ ಪ್ರಾರಂಭದ ದಿನದಿಂದಲೂ ಕೂಡ ನನ್ನ ಖರ್ಚಿಗೆ ಯಾವುದೇ ಕುಂದು ಕೊರತೆ ಬಾರದಂತೆ ಸಹಾಯ ಮಾಡುತ್ತಿದ್ದರು. ಆದ್ದರಿಂದ ವೃತ್ತಿ ಜೀವನವನ್ನು ಯಾವುದೇ ಅಡ್ಡದಾರಿ ಹಿಡಿಯದೇ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಯಿತು. ಎಂ.ಕೆ. ವಿಜಯ ಕುಮಾರ್‌ ಅವರ ಎಲ್ಲ ಶಿಷ್ಯರು ಕೂಡ ಇಂದು ಯಶಸ್ಸಿನ ಹಾದಿಯಲ್ಲಿ ಸಾಗುವಲ್ಲಿ ಪ್ರಾಯಶಃ ಅವರು ನಮ್ಮ ಪ್ರಾರಂಭದ ದಿನಗಳಲ್ಲಿ ನೀಡಿದ ಪ್ರೋತ್ಸಾಹವೇ ಕಾರಣ. ಯಶಸ್ವಿ ವಕೀಲನಿಗೆ ಇರಬೇಕಾದ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡವರು ಎಂ.ಕೆ. ವಿಜಯ ಕುಮಾರ್‌.


1967ನೇ ಇಸವಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಎಂ.ಕೆ. ವಿಜಯ ಕುಮಾರ್ ತಾನು ನಡೆದದ್ದೆ ದಾರಿ ಎಂದು ಸಾಧಿಸಿ ತೋರಿಸಿದವರು. ಅವರ ಯಶಸ್ಸಿನ ಗುಟ್ಟನ್ನು ನಾನು ಬಹಳ ಹತ್ತಿರದಿಂದ ಬಲ್ಲವನಾಗಿದ್ದೇನೆ. ಕಠಿಣ ದುಡಿಮೆಯೆ ಅವರ ಯಶಸ್ಸಿನ ಮೂಲ ರಹಸ್ಯ. ಕರ್ತವ್ಯ ನಿಷ್ಠೆ, ಅವರ ಸರಳತೆ ನಮಗೆಲ್ಲರಿಗೂ ಅನುಕರಣೀಯ.

ಜಿ. ಮುರಲೀಧರ ಭಟ್‌



















































































error: Content is protected !!
Scroll to Top