ಸಾಕ್ಷಿ ವಿಚಾರಣೆ

ಯಾವುದೇ ಪ್ರಕರಣ ಅಂದರೆ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣದಲ್ಲಿ ಸಾಕ್ಷಿ ವಿಚಾರಣೆಯು ಪ್ರಕರಣವನ್ನು ನಿರ್ಧರಿಸುವಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಾರಣ ಪ್ರಕರಣವನ್ನು ನಿರ್ಧರಿಸುವ ಸಂದರ್ಭದಲ್ಲಿ ನ್ಯಾಯಾಲಯವು ತನ್ನ ಕಡತದಲ್ಲಿರುವ ಸಾಕ್ಷಾಧಾರಗಳನ್ನು ತುಲನಾತ್ಮಕವಾಗಿ ಪರಿಶೀಲಿಸಿ ತೀರ್ಪನ್ನು ನೀಡಬೇಕಾಗುತ್ತದೆ. ಆದುದರಿಂದ ಸಾಕ್ಷ್ಯವನ್ನು ನುಡಿಯುವ ಪ್ರತಿಯೊಬ್ಬ ವ್ಯಕ್ತಿಯು ನ್ಯಾಯಾಲಯದಲ್ಲಿ ಸಾಕ್ಷ್ಯವನ್ನು ನುಡಿಯುವ ಸಂದರ್ಭದಲ್ಲಿ ಬಹಳ ಮುಂಜಾಗ್ರತೆಯನ್ನು ವಹಿಸಿ ಸಾಕ್ಷ್ಯವನ್ನು ನುಡಿಯಬೇಕಾಗುತ್ತದೆ.

ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣವನ್ನು ದಾಖಲು ಮಾಡುವ ವ್ಯಕ್ತಿಯನ್ನು ವಾದಿ ಎಂಬುದಾಗಿಯೂ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವ ವ್ಯಕ್ತಿಯನ್ನು ಫಿರ್ಯಾದಿದಾರ ಎಂಬುದಾಗಿ ಸಂಭೋದಿಸಲಾಗುತ್ತದೆ. ಅದೇ ಪ್ರಕಾರ ಸಿವಿಲ್ ಪ್ರಕರಣವನ್ನು ಅಂದರೆ ದಾವೆಯನ್ನು ಎದುರಿಸುವ ವ್ಯಕ್ತಿಯನ್ನು ಪ್ರತಿವಾದಿ ಎಂಬುದಾಗಿಯೂ ಮತ್ತು ಕ್ರಿಮಿನಲ್ ಪ್ರಕರಣವನ್ನು ಎದುರಿಸುವ ವ್ಯಕ್ತಿಯನ್ನು ಆಪಾದಿತ ಎಂಬುದಾಗಿ ಸಂಭೋದಿಸಲಾಗುತ್ತದೆ. ಅದೇ ಪ್ರಕಾರ ಸಿವಿಲ್ ಪ್ರಕರಣಕ್ಕೆ ಸಂಬಂಧಪಟ್ಟ ಅಂದರೆ ವಾದ ಪತ್ರದಲ್ಲಿ ನಮೂದಿಸಲ್ಪಟ್ಟ ವಿವಾದಿತ ಸ್ವತ್ತನ್ನು ದಾವಾ ಆಸ್ತಿ ಎನ್ನುತ್ತಾರೆ. ಸಿವಿಲ್ ಪ್ರಕರಣದಲ್ಲಿ ದಾವಾ ಪತ್ರ ಎಂದರೆ ವಾದಿ ನೀಡಿರುವ ಮಾಹಿತಿಯ ಆಧಾರದಲ್ಲಿ ಆತನ ವಕೀಲರು ತಯಾರಿಸಿ ಸೂಕ್ತ ನಿವೃತ್ತಿಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕೋರಿಕೆ ಪತ್ರವಾಗಿರುತ್ತದೆ. ಅಂತೆಯೇ ಪ್ರತಿವಾದಿಯು ತಾನು ನ್ಯಾಯಲಯದಿಂದ ಪಡೆದ ಸಿವಿಲ್ ಪ್ರಕರಣದ ಪರ ಅಥವಾ ವಿರುದ್ಧ ಲಿಖಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸುವ ಹೇಳಿಕೆಯನ್ನು ಲಿಖಿತ ಹೇಳಿಕೆ ಎನ್ನುತ್ತಾರೆ. ನ್ಯಾಯಾಲಯದಲ್ಲಿ ಯಾವುದೇ ಒಬ್ಬ ವ್ಯಕ್ತಿ ತನ್ನ ಪರವಾಗಿ ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ ನೀಡುವ ಸಾಕ್ಷಿಗೆ ಮುಖ್ಯ ವಿಚಾರಣೆ ಎಂಬುದಾಗಿಯೂ ಮತ್ತು ಆತನಿಗೆ ಎದುರುದಾರನ ಪರ ವಕೀಲರು ಕೇಳುವ ಪ್ರಶ್ನೆಗೆ ಪಾಟೀ ಸವಾಲು ಎನ್ನುತ್ತಾರೆ. ಸಾಮಾನ್ಯವಾಗಿ ಸಾಕ್ಷಿದಾರನಿಗೆ ಆತನ ಎದುರುದಾರನ ವಕೀಲರು ಕೇಳುವಂತಹ ಪ್ರಶ್ನೆಗಳು ನೇರ ಅಥವಾ ಸುಲಭವಾಗಿ ಅರ್ಥ ಆಗುವ ರೀತಿಯಲ್ಲಿ ಇರುವುದಿಲ್ಲ. ಹೀಗಾಗಿ ಸಾಕ್ಷಿದಾರನು ಪಾಟೀ ಸವಾಲನ್ನು ಎದುರಿಸುವ ಸಂದರ್ಭದಲ್ಲಿ ಎದುರುದಾರನ ವಕೀಲರು ತನಗೆ ಕೇಳುವ ಪ್ರಶ್ನೆಯನ್ನು ಸರಿಯಾಗಿ ಮತ್ತು ಪೂರ್ತಿಯಾಗಿ ಕೇಳಿಸಿಕೊಂಡು ಮತ್ತು ಸರಿಯಾಗಿ ಅರ್ಥೈಸಿಕೊಂಡ ನಂತರ ಆಲೋಚಿಸಿ ಉತ್ತರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಾಕ್ಷಿದಾರನು ತನಗೆ ಕೇಳುವ ಪ್ರಶ್ನೆಯನ್ನು ಎದುರುದಾರರ ವಕೀಲರಿಂದ ಕೇಳಿಸಿಕೊಂಡ ನಂತರ ತನ್ನ ಮುಖವನ್ನು ನ್ಯಾಯಾಧೀಶರ ಕಡೆ ತಿರುಗಿಸಿ ಉತ್ತರವನ್ನು ನ್ಯಾಯಾಧೀಶರಿಗೆ ಸರಿಯಾಗಿ ಕೇಳುವಂತೆ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಹೇಳಬೇಕು. ವಕೀಲರು ಕೇಳಿದ ಪ್ರಶ್ನೆ ತನಗೆ ಅರ್ಥ ಆಗದಿದ್ದರೆ ಕೇಳಿದ ಪ್ರಶ್ನೆಯು ತನಗೆ ಅರ್ಥವಾಗಿರುವುದಿಲ್ಲ ಎಂದು ಎದುರುದಾರನ ವಕೀಲರಿಗೆ ಅಥವಾ ನ್ಯಾಯಾಧೀಶರಿಗೆ ತಿಳಿಸಿ ಪ್ರಶ್ನೆಯನ್ನು ಪುನಃ ಕೇಳಿಸಿ ಅರ್ಥೈಸಿಕೊಂಡು ಸರಿಯಾಗಿ ಉತ್ತರ ನೀಡುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಯು ಹೊಂದಿರುತ್ತಾನೆ. ಆದರೆ ತಾನು ಒಮ್ಮೆ ನ್ಯಾಯಾಲಯಕ್ಕೆ ನೀಡುವ ಸಾಕ್ಷ್ಯವನ್ನು ತಿರುಚುವ ಅಥವಾ ಬದಲಾಯಿಸುವ ಹಕ್ಕನ್ನು ಯಾವುದೇ ವ್ಯಕ್ತಿಯು ಹೊಂದಿರುವುದಿಲ್ಲ. ಈ ಕಾರಣದಿಂದ ಪ್ರತಿಯೊಬ್ಬ ವ್ಯಕ್ತಿಯು ನ್ಯಾಯಾಲಯದಲ್ಲಿ ಸಾಕ್ಷವನ್ನು ನುಡಿಯುವ ಸಂದರ್ಭದಲ್ಲಿ ತನ್ನ ಕೇಸಿಗೆ ಸಂಬಂಧಪಟ್ಟ ವಿವರಗಳನ್ನು ತಿಳಿದುಕೊಂಡು ನ್ಯಾಯಾಲಯಕ್ಕೆ ಹೇಳುವಷ್ಟರ ಮಟ್ಟಿಗೆ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು.

ತಾನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಜರುಪಡಿಸಿರುವ ಅಥವಾ ಹಾಜರು ಪಡಿಸಬೇಕಾಗಿರುವ ಪ್ರತಿಯೊಂದು ದಾಖಲೆಯ ವಿವರ ಹಾಗೂ ತನ್ನ ಎದುರುದಾರರು ಸಹಾ ಏನೆಲ್ಲಾ ದಾಖಲೆಗಳನ್ನು ಹಾಜರುಪಡಿಸಿರುತ್ತಾರೆ ಎಂಬ ವಿಚಾರವನ್ನು ಸಹ ತನ್ನ ವಕೀಲರ ಮೂಲಕ ಕೇಳಿ ತಿಳಿದುಕೊಳ್ಳಬೇಕು. ಮಾತ್ರವಲ್ಲದೆ ತನ್ನ ಪ್ರಕರಣಕ್ಕೆ ಪೂರಕವಾಗಿ ಮುಂದಕ್ಕೆ ಏನೆಲ್ಲಾ ದಾಖಲೆಗಳನ್ನು ತಾನು ಹಾಜರು ಪಡಿಸುವ ಅಗತ್ಯವಿದೆ ಎಂಬುವುದಾಗಿ ಸಹ ತನ್ನ ವಕೀಲರೊಂದಿಗೆ ಸಮಾಲೋಚಿಸಿ ಕೇಳಿ ತಿಳಿದುಕೊಳ್ಳಬೇಕು.

ನ್ಯಾಯಾಲಯದಲ್ಲಿ ಕಟಕಟೆ ಅಂದರೆ ವಿಟ್‌ನೆಸ್ ಬಾಕ್ಸ್ಗೆ ಪ್ರವೇಶ ಆಗಿ ಸಾಕ್ಷಿ ಹೇಳುವ ಸಂದರ್ಭದಲ್ಲಿ ಸಾಕ್ಷಿದಾರನು ತನ್ನ ಮನಸ್ಸನ್ನು ಸಂಪೂರ್ಣವಾಗಿ ಕೇಸಿಗೆ ಸಂಬಂಧಪಟ್ಟ ವಿಷಯದ ಮೇಲೆ ಕೇಂದ್ರೀಕರಿಸಬೇಕು. ಎದುರುದಾರನ ವಕೀಲರು ಸಾಕ್ಷಿದಾರನಿಗೆ ಪಾಟೀ ಸವಾಲು ಮಾಡುವ ಸಂದರ್ಭದಲ್ಲಿ
ಅನಾವಶ್ಯಕವಾದ ಕೇಸಿಗೆ ಸಂಬಂಧಪಡದ ವಿಚಾರದ ಬಗ್ಗೆ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಈ ಬಗ್ಗೆ ನನಗೆ ಮಾಹಿತಿ ಇರುವುದಿಲ್ಲ ಅಥವಾ ಈಗ ನನಗೆ ನೆನಪಿರುವುದಿಲ್ಲಾ ಎಂಬುದಾಗಿ ಉತ್ತರಿಸಬಹುದಾಗಿದೆ.









































error: Content is protected !!
Scroll to Top