ಉಡುಪಿ : ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಗುರುತಿಸಲು ಕಟ್ಟುನಿಟ್ಟಿನ ಕ್ರಮವಹಿಸುವುದರೊಂದಿಗೆ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಚಿವ ಕೆ. ಹೆಚ್. ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವರು ಸೆ. 26ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಆರ್ಥಿಕ ಸ್ಥಿತಿಯು ರಾಷ್ಟ್ರದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರಕಾರದ ಸಮೀಕ್ಷೆ ಅನ್ವಯ ಸುಮಾರು 7 ಲಕ್ಷಕ್ಕೂ ಅಧಿಕ ಅನರ್ಹ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಬಗ್ಗೆ ಮಾಹಿತಿಯಿದ್ದು, ರಾಜ್ಯ ಸರ್ಕಾರವು ಇಂತಹ ಅನುಮಾನಸ್ಪದ ಪಡಿತರ ಚೀಟಿಗಳನ್ನು ಪರಿಷ್ಕರಣೆ ಮಾಡಲಿದೆ. ಇಂತಹ ಪಡಿತರ ಚೀಟಿಗಳನ್ನು ಶೀಘ್ರದಲ್ಲಿ ಎ.ಪಿ.ಎಲ್. ಕಾರ್ಡ್ ಆಗಿ ಪರಿವರ್ತಿಸುವಂತೆ ತಿಳಿಸಿದ ಅವರು, ಒಂದು ವೇಳೆ ಅರ್ಹ ಬಿಪಿಎಲ್ ಕಾರ್ಡ್ ಎ.ಪಿ.ಎಲ್. ಎಂದು ಪರಿವರ್ತನೆ ಹೊಂದಿದ್ದಲ್ಲಿ ಅಂಥವರು ಸಂಬಂಧಿಸಿದ ದಾಖಲೆಗಳನ್ನು ತಾಲೂಕಿನ ತಹಶೀಲ್ದಾರ್‌ರಿಗೆ ಸಲ್ಲಿಸಿದ್ದಲ್ಲಿ ಅದನ್ನು ಬಿಪಿಎಲ್ ಚೀಟಿಗೆ ಪರಿವರ್ತಿಸಲಾಗುವುದು ಎಂದರು.
ಅಕ್ಕಿ ಅಕ್ರಮ ಮಾರಾಟವಾದಲ್ಲಿ ಕ್ರಮವಹಿಸಿ
ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿದಾರರು ಪತ್ತೆಯಾದಲ್ಲಿ ಅಂತಹವರ ಪಡಿತರ ಚೀಟಿಗಳನ್ನು ಸರಕಾರದ ಮಾನದಂಡಗಳ ಅನ್ವಯ ಎ.ಪಿ.ಎಲ್. ಗೆ ಪರಿವರ್ತಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಪಡಿತರ ಚೀಟಿ ಅಕ್ಕಿಯನ್ನು ಅಕ್ರಮ ದಾಸ್ತಾನು ಅಥವಾ ಮಾರಾಟ ಮಾಡುತ್ತಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದರು.
ರಾಜ್ಯದಲ್ಲೆ ಮೂರನೇ ಸ್ಥಾನ
ಜಿಲ್ಲೆಯಲ್ಲಿ ಒಟ್ಟು 295 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, 1,95,058 ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳಿದ್ದು, ಒಟ್ಟು 8,31,846 ಫಲಾನುಭವಿಗಳಿದ್ದಾರೆ. ಪಡಿತರ ವಿತರಣೆಯಲ್ಲಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ಸೆಪ್ಟಂಬರ್ ಮಾಹೆಯಲ್ಲಿ 40375.45 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡುವುದರೊಂದಿಗೆ ಶೇ. 78.42 ಪ್ರಗತಿ ಸಾಧಿಸಲಾಗಿರುತ್ತದೆ ಎಂದರು.

ಜಿಲ್ಲೆಯಲ್ಲಿ ಇ-ಕೆ.ವೈ.ಸಿ. ಕಾರ್ಯ ಶೇ. 99.30 ಪೂರ್ಣಗೊಂಡಿದೆ. ಮನೆ ಮನೆಗೆ ಭೇಟಿ ನೀಡಿ ಇ-ಕೆ.ವೈ.ಸಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸೆಪ್ಟಂಬರ್ ಮಾಹೆಯಲ್ಲಿ 2950 ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿದ್ದು, ಅದರಲ್ಲಿ 2739 ಅನ್ನು ಆದ್ಯತೇತರ ಪಡಿತರ ಚೀಟಿಗಳಾಗಿ ಪರಿವರ್ತಿಸಲಾಗಿದೆ ಎಂದು ಸಚಿವರು ಬಾಕಿ ಉಳಿದ 211 ಪಡಿತರ ಚೀಟಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಆದ್ಯತಾ ಪಡಿತರ ಚೀಟಿಗೆ 13,947 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 13,412 ಅರ್ಜಿಗಳನ್ನು ವಿಲೇವಾರಿ ಮಾಡಿ, 535 ಅರ್ಜಿಗಳು ಬಾಕಿ ಇವೆ. ಆದ್ಯತೇತರ ಪಡಿತರ ಚೀಟಿಗೆ 12,332 ಅರ್ಜಿಗಳು ಸಲ್ಲಿಕೆಯಾಗಿ 10,294 ಅರ್ಜಿಗಳನ್ನು ವಿಲೇವಾರಿ ಮಾಡಿ, 2038 ಅರ್ಜಿಗಳ ವಿಲೇವಾರಿಗೆ ಬಾಕಿ ಇವೆ. ಇವುಗಳ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ 9 ಪ್ರಕರಣಗಳು ದಾಖಲಾಗಿ 200.95 ಕ್ವಿಂಟಾಲ್ ಅಕ್ಕಿಯನ್ನು ಹಾಗೂ 3 ವಾಹನಗಳನ್ನು ವಶಪಡಿಸಿಕೊಂದು 2 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಂಗಡಿ ಮುಂಗಟ್ಟುಗಳು, ಮಾಲ್, ಪೆಟ್ರೋಲ್ ಪಂಪ್‌ಗಳಲ್ಲಿ ತೂಕ ಮತ್ತು ಅಳತೆಯ ತಪಾಸಣೆಯನ್ನು ನಿರಂತರವಾಗಿ ಕೈಗೊಳ್ಳಬೇಕು ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಯಾವುದೇ ಗ್ರಾಹಕರಿಗೆ ತೊಂದರೆ ಆಗದಂತೆ ಪ್ರತಿಯೊಂದು ಅಂಗಡಿಗಳನ್ನು ತಪಾಸಣೆ ನಡೆಸಿ ಮೋಸ ಕಂಡುಬಂದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಹಕರ ಹಿತರಕ್ಷಣೆ ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು, ಸಾರ್ವಜನಿಕ ಸೇವೆಗಳನ್ನು ನೀಡುವಾಗ ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಗ್ರಾಹಕರು ದಿನನಿತ್ಯದ ವ್ಯವಹಾರಗಳಲ್ಲಿ ಮೋಸಹೋಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ರಶ್ಮಿ, ದ. ಕ. ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಆಹಾರ ನಿರೀಕ್ಷಕರು ಉಪಸ್ಥಿತರಿದ್ದರು.




















