ಬೋರ್ಡ್ ಕಾಲೇಜಿನಲ್ಲಿ ನೂತನ ಸಭಾಂಗಣ – ರಂಗ ವೇದಿಕೆ ಲೋಕಾರ್ಪಣೆ

ಕಾರ್ಕಳ : ತಂದೆ ತಾಯಿಯರನ್ನು ಗೌರವಿಸುವುದರಿಂದ ಜೀವನದಲ್ಲಿ ಶ್ರೇಷ್ಠ ಗುರಿ ಸಾಧಿಸಬಹುದೆಂದು ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್ ಅಭಿಪ್ರಾಯಪಟ್ಟರು.

ಅವರು ಸೆ. 4 ರಂದು ತಾವು ಕಲಿತಂತಹ ಸರಕಾರಿ ಪದವಿ ಪೂರ್ವ ಕಾಲೇಜಿಗೆ ತಮ್ಮ ಹೆತ್ತವರ ಸ್ಮರಣಾರ್ಥವಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವಕೀಲ ಶ್ರೀ ವಾಸುದೇವ ಕಾಮತ್ ಸಭಾಂಗಣ ಮತ್ತು ಶ್ರೀಮತಿ ರಮಾ ಬಾಯಿ ವೇದಿಕೆ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳಿಸಲಾದ ಪ್ರೌಢಶಾಲೆಯ ಕೊಠಡಿಗಳ ಉದ್ಘಾಟನೆಯೂ‌ ನಡೆಯಿತು.

ವಿದ್ಯಾರ್ಥಿ ವೇತನ

ಶಾಂತಿ ವಿಠಲ್ ಟ್ರಸ್ಟ್ ವತಿಯಿಂದ ಕೊಡ ಮಾಡಲಾದ ವಿದ್ಯಾರ್ಥಿ ವೇತನವನ್ನು ಅರ್ಹ ಎಂಟು ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂಪಾಯಿಯಂತೆ ನೀಡಲಾಯಿತು. ಫಲಾನುಭವಿಗಳ ಪಟ್ಟಿಯನ್ನು ಕನ್ನಡ ಉಪನ್ಯಾಸಕಿ ಜ್ಯೋತಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಕಮಲಾಕ್ಷ ಕಾಮತ್ ಹಾಗೂ ಕಟ್ಟಡದ ಇಂಜಿನಿಯರ್ ಪ್ರಶಾಂತ್ ಬೆಳಿರಾಯರನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಿವೃತ್ತ ಇಸ್ರೋ ವಿಜ್ಞಾನಿ ಇಡ್ಯಾ ಜನಾರ್ಧನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇದರ ಉಪನಿರ್ದೇಶಕ ಮಾರುತಿ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಸಿಬಿಸಿ ಕೋಶಾಧಿಕಾರಿ ನಿತ್ಯಾನಂದ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕಾ ಅಡ್ಯಂತಾಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ, ಸಿಬಿಸಿ ಸದಸ್ಯರಾದ ನಾಗೇಶ ದೇವಾಡಿಗ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಅನ್ನಪೂರ್ಣ ಕಾಮತ್ ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕ ಸದಾನಂದ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಮುಖ್ಯಸ್ಥೆ ಮಲ್ಲಿಕಾ ವಂದಿಸಿದರು.





























































































































error: Content is protected !!
Scroll to Top