ಉಕ್ರೇನ್ ರಷ್ಯಾ ಯುದ್ಧವನ್ನು ‘ಮೋದಿ ಯುದ್ಧ’ ಎಂದ ಅಮೆರಿಕ

ವಾಷಿಂಗ್ಟನ್ : ವಿಶ್ವದ ಮೇಲೆ ತೆರಿಗೆ ಸಮರ ಆರಂಭಿಸಲು ಟ್ರಂಪ್‌ಗೆ ಸಲಹೆ ನೀಡಿರುವ ಶ್ವೇತ ಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ರಷ್ಯಾ- ಉಕ್ರೇನ್‌ ಯುದ್ಧಕ್ಕೆ ಹೊಸ ವಾಖ್ಯಾನ ನೀಡಿದ್ದು, ಇದು ಮೋದಿ ನಡೆಸುತ್ತಿರುವ ಯುದ್ಧ ಎಂದು ಬಣ್ಣಿಸಿದ್ದಾರೆ.

ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವುದಕ್ಕೆ ದಂಡದ ರೂಪದಲ್ಲಿ ಅಮೆರಿಕ 25% ಸುಂಕ ವಿಧಿಸಿದ ಆದೇಶ ಅಧಿಕೃತವಾಗಿ ಜಾರಿಯಾದ ಬಳಿಕ ಈ ಹೇಳಿಕೆ ಬಂದಿದೆ. ಇಲ್ಲಿಯವರೆಗೆ ಡೊನಲ್ಡ್‌ ಟ್ರಂಪ್‌ ಭಾರತವನ್ನು ದೂರುತ್ತಿದ್ದರು. ಆದರೆ ಈಗ ಶ್ವೇತ ಭವನದ ಅಧಿಕಾರಿಗಳು ದೂರಲು ಆರಂಭಿಸಿದ್ದಾರೆ.

ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ರಷ್ಯಾದ ಇಂಧನವನ್ನು ಭಾರತ ನಿರಂತರವಾಗಿ ಖರೀದಿಸುತ್ತಿರುವುದರಿಂದ ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿದೆ. ಮಾಸ್ಕೋದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿದರೆ ಅಮೆರಿಕ ಭಾರತದ ಮೇಲೆ ವಿಧಿಸಿದ 25% ಸುಂಕ ಕಡಿತ ಕಾಣಬಹುದು ಎಂದು ಹೇಳಿದರು.

ಭಾರತಕ್ಕೆ ಈಗ ಅಹಂಕಾರ ಬಂದಿದೆ. ನಮಗೆ ಹೆಚ್ಚಿನ ಸುಂಕಗಳು ಇಲ್ಲ. ನಮ್ಮದು ಸಾರ್ವಭೌಮ ಹೊಂದಿದ ದೇಶ. ನಾವು ಯಾರಿಂದ ಬೇಕಾದರೂ ತೈಲ ಖರೀದಿಸಬಹುದು ಎಂಬಂತೆ ಭಾರತ ವರ್ತಿಸುತ್ತಿದೆ ಎಂದು ದೂರಿದರು. ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಹೌದು. ಆದರೆ ಅಮೆರಿಕದ ವಿಶ್ವದ ದೊಡ್ಡ ಆರ್ಥಿಕತೆತಯನ್ನು ಹೊಂದಿದ ದೇಶವಾಗಿದೆ. ಭಾರತ ಮಾಡುತ್ತಿರುವ ಕೆಲಸಗಳಿಂದ ಅಮೆರಿಕದಲ್ಲಿರುವ ಪ್ರತಿಯೊಬ್ಬರೂ ನಷ್ಟ ಅನುಭವಿಸುತ್ತಿದ್ದಾರೆ. ಭಾರತದ ಹೆಚ್ಚಿನ ಸುಂಕಗಳು ನಮ್ಮ ಉದ್ಯೋಗಗಳು, ಕಾರ್ಖಾನೆಗಳನ್ನು ಕಸಿದುಕೊಳ್ಳುತ್ತಿದೆ. ಅಮೆರಿಕನ್ನರು ಆರ್ಥಿಕವಾಗಿ ಬಳಲುತ್ತಿರುವಾಗ ಉಕ್ರೇನ್‌ ಯುದ್ಧಕ್ಕೆ ರಷ್ಯಾಕ್ಕೆ ಹಣಕಾಸಿನ ಸಹಾಯ ಮಾಡುತ್ತಿದೆ. ಇನ್ನೊಂದು ಕಡೆ ಉಕ್ರೇನ್‌ ನೆರವು ನೀಡುವಂತೆ ಅಮೆರಿಕ ಮತ್ತು ಯುರೋಪ್‌ ದೇಶವನ್ನು ಕೇಳಿಕೊಳ್ಳುತ್ತಿದೆ. ಈ ಕಾರಣಕ್ಕೆ 50% ಸುಂಕ ವಿಧಿಸಲಾಗಿದೆ ಎಂದು ಟ್ರಂಪ್‌ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿದರು.

ರಷ್ಯಾದಿಂದ ಭಾರತ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುತ್ತದೆ. ಖರೀದಿಸಿದ ಕಚ್ಚಾತೈಲವನ್ನು ರಿಫೈನರಿಯಲ್ಲಿ ಸಂಸ್ಕರಿಸಿ ಬೇರೆ ದೇಶಗಳಿಗೆ ಮಾರಾಟ ಮಾಡುವ ಮೂಲಕ ಲಾಭ ಮಾಡುತ್ತಿದೆ. ಈ ನಿರ್ಧಾರದಿಂದ ಭಾರತ ರಷ್ಯಾಕ್ಕೆ ಸಹಾಯ ಮಾಡಿದರೆ ಅಮೆರಿಕಕ್ಕೆ ಹಾನಿ ಮಾಡುತ್ತಿದೆ ಎಂದು ಹೇಳಿದರು.





















error: Content is protected !!
Scroll to Top