ಬೆಂಗಳೂರು : ಆ್ಯಂಕರ್ ಅನುಶ್ರೀ ಅವರು ಇಂದು ರೋಷನ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನು ಕೆಲವೇ ಸಮಯದಲ್ಲಿ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ಮದುವೆ ನಡೆಯುತ್ತಿದೆ. ವಿವಾಹ ಕಾರ್ಯಕ್ರಮಕ್ಕೆ ಅತ್ಯಾಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ. ಕಿರುತೆರೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರಿಗೆ ಅನುಶ್ರಿ ಆಹ್ವಾನ ನೀಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಾಗುವ ನಿರೀಕ್ಷೆ ಇದೆ.
ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ವಿವಾಹವಾಗಲಿರುವ ಅನುಶ್ರೀ ಅವರ ಮದುವೆಯ ಆಮಂತ್ರಣ ಸಾಕಷ್ಟು ವೈರಲ್ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು ತಮ್ಮ ನೆಚ್ಚಿನ ನಿರೂಪಕಿಯ ಮದುವೆಗೆ ತೆರಳಿದ್ದಾರೆ. ಆದರೆ ಅನುಶ್ರೀ ಮದುವೆಗೆ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಮದುವೆಗೆ ಆಹ್ವಾನವಿಲ್ಲದೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಸ್ಟುಡಿಯೋ ಒಳಗೆ ಬಿಟ್ಟಿಲ್ಲ ಎಂದು ಅನುಶ್ರೀ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನುಶ್ರೀ ಹೆಸರು ಮಾಡೋಕೆ ಫ್ಯಾನ್ಸ್ ಕಾರಣ. ಇವತ್ತು ನಮನ್ನೆ ಮದುವೆ ಮನೆಗೆ ಬಿಟ್ಟಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.





















