ಕಾರ್ಕಳ : ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಬ್ರಹ್ಮಾವರಕ್ಕೆ ಕರೆದೊಯುತ್ತಿದ್ದ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವಾಹನಕ್ಕೆ ಹೊಸ್ಮಾರಿನಲ್ಲಿ ತಿಮರೋಡಿ ಬೆಂಬಲಿಗರ ಕಾರು ಗುದ್ದಿದ ಘಟನೆ ಕುರಿತಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ರಾಜೀವ್ ಕುಲಾಲ್ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಬ್ರಹ್ಮಾವರ ಪೊಲೀಸರು ಉಜಿರೆಯಲ್ಲಿರುವ ತಿಮರೋಡಿ ಮನೆಯಲ್ಲೇ ಅವರನ್ನು ವಶಕ್ಕೆ ಪಡೆದು ಬ್ರಹ್ಮಾವರಕ್ಕೆ ಕರೆದೊಯ್ಯುತ್ತಿದ್ದ ವೇಳೆ ಅವರ ಹಿಂದೆ ಕಾರಿನಲ್ಲಿ ಬರುತ್ತಿದ್ದ ತಿಮರೋಡಿ ಬೆಂಬಲಿಗರಿಗೆ ಬರಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದರೂ ಹಿಂಬಾಲಿಸಿಕೊಂಡು ಬಂದು ಹೊಸ್ಮಾರಿನಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವಾಹನಕ್ಕೆ ಗುದ್ದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಸದ್ಯಕ್ಕೆ ಕಾರು ಸಹಿತ ವಾಹನದಲ್ಲಿದ್ದ ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವರಾದ ಸೃಜನ್, ಸಹನ್, ಹಿತೇಶ್ ಶೆಟ್ಟಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಸೆಕ್ಷನ್ 132 (ಸರಕಾರಿ ನೌಕಕರ ಕರ್ತವ್ಯಕ್ಕೆ ಅಡ್ಡಿ), 121 (ಗಾಯಗೊಳಿಸುವುದು), 281 (ಅಪಘಾತ), 3(5), PDLP Act ನಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಸ್ಥಳ ಮಹಜರು ಕಾರ್ಯ ನಡೆಯುತ್ತಿದೆ.























