ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಶ್ರೇಯೋಭಿವೃದ್ಧಿ ಅಧಿನಿಯಮ 2007

ತಂದೆ ತಾಯಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ನಮ್ಮ ದೇಶದ ಸಂವಿಧಾನದ ಮೇರೆಗೆ ಖಾತರಿ ನೀಡಿರುವ ಮತ್ತು ಅಂಗೀಕರಿಸಿರುವ ಪಾಲನೆ-ಪೋಷಣೆ ಮತ್ತು ಕಲ್ಯಾಣಕ್ಕಾಗಿ ಭಾರತ ಸರಕಾರವು “ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಶ್ರೇಯೋಭಿವೃದ್ಧಿ ಅಧಿನಿಯಮ 2007 ” ಎಂಬ ಕಾನೂನನ್ನು 2007ನೇ ಇಸವಿಯ ಡಿಸೆಂಬರ್ 29 ರಂದು ದೇಶದಾದ್ಯಂತ ಜಾರಿಗೊಳಿಸಿದ್ದು ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ತನ್ನ ಸ್ವಂತ ಸಂಪಾದನೆಯಿಂದ ಅಥವಾ ಆಸ್ತಿಯಿಂದ ತನ್ನನ್ನು ತಾನು ಪಾಲನೆ- ಪೋಷಣೆ ಮಾಡಿಕೊಳ್ಳಲು ಅಸಮರ್ಥನಾಗಿರುವ ತಂದೆ ಅಥವಾ ತಾಯಿ ಸೇರಿದಂತೆ ಯಾರೇ ಹಿರಿಯ ನಾಗರಿಕರಿಗೆ ಕಾನೂನಿನ ರಕ್ಷಣೆ ನೀಡುವ ಉದ್ದೇಶದಿಂದ ಸರಕಾರವು ಈ ಮೇಲ್ಕಾಣಿಸಿದ ಕಾನೂನನ್ನು ಜಾರಿಗೆ ತಂದಿರುತ್ತದೆ. ತನ್ನ ಸ್ವಂತ ಗಳಿಕೆಯಿಂದ ಅಥವಾ ತನ್ನ ಒಡೆತನದ ಆಸ್ತಿಯಿಂದ ತನ್ನ ಪಾಲನೆ-ಪೋಷಣೆ ಮಾಡಿಕೊಳ್ಳಲು ಅ¸ಮರ್ಥರಾಗಿರುವ ತಂದೆ ತಾಯಿಯರೂ ಸೇರಿದಂತೆ ಯಾರೇ ಹಿರಿಯ ನಾಗರಿಕರು ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಪಡಕೊಳ್ಳಬಹುದಾದ ತಮ್ಮ ಜೀವನ ನಿರ್ವಹಣೆಗಾಗಿ ಅಗತ್ಯವುಳ್ಳ ಜೀವನಾಂಶ, ಅಗತ್ಯವಿರುವ ಆರ್ಥಿಕ ಪರಿಹಾರ ಮತ್ತಿತರ ಪರಿಹಾರಗಳನ್ನು ಪಡೆದುಕೊಳ್ಳಬಹುದಾಗಿದೆ.

ಹಿರಿಯ ನಾಗರಿಕ/ತಂದೆ-ತಾಯಿ ಅವರ ಸಾಮಾನ್ಯ ಜೀವನ ನಿರ್ವಹಣೆಗೆ ಏನೆಲ್ಲಾ ಅಗತ್ಯವಿದೆಯೋ ಅವುಗಳನ್ನು ಪೂರೈಸುವ ಮತ್ತು ಅವರ ಪಾಲನೆ-ಪೋಷಣೆ ಮಾಡುವ ಜವಾಬ್ದಾರಿಯು ಅವರ ಮಕ್ಕಳದ್ದಾಗಿರುತ್ತದೆ. ನಿರ್ಲಕ್ಷ್ಯಕ್ಕೊಳಪಟ್ಟ ಹಿರಿಯ ನಾಗರಿಕ, ತಂದೆ ಅಥವಾ ತಾಯಿ ತನ್ನ ಪಾಲನೆ- ಪೋಷಣೆ ಬಗ್ಗೆ ಸರಿಯಾದ ವ್ಯವಸ್ಥೆ ಹೊಂದಿರದಿದ್ದಲ್ಲಿ ಅವರು ನೇರವಾಗಿ ಅಥವಾ ಯಾವುದೇ ನೊಂದಾಯಿತ ಸ್ವಯಂ ಸೇವಾ ಸಂಸ್ಥೆ ಮುಖಾಂತರ ಸೂಕ್ತ ರಕ್ಷಣೆ ಮತ್ತು ಪರಿಹಾರಕ್ಕಾಗಿ ಸರಕಾರದಿಂದ ನಿಯಮಿಸಿರುವ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಅಂತಹ ನ್ಯಾಯಾಧಿಕರಣವು ಸ್ವಯಂ ಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಿರ್ಲಕ್ಷ್ಯಕ್ಕೊಳಗಾದ ಹಿರಿಯ ನಾಗರಿಕರಿಗೆ ಅಥವಾ ತಂದೆ ತಾಯಿಯವರಿಗೆ ಸೂಕ್ತ ಪರಿಹಾರ ನೀಡುವಂತೆ ಅವರ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಆದೇಶಿಸಬಹುದಾಗಿದೆ. ಈ ರೀತಿಯಾಗಿ ಅರ್ಜಿ ಸ್ವೀಕರಿಸಿದ ಅಥವಾ ಪ್ರಕರಣ ನೊಂದಾಯಿಸಿದ ನಂತರ ನಿರ್ಲಕ್ಷ್ಯಕ್ಕೊಳಪಟ್ಟವರ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನ್ಯಾಯಾಧಿಕರಣವು ಸೂಕ್ತ ನೋಟೀಸು ನೀಡಿ ಅವರು ತಮ್ಮ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶ ನೀಡಿದ ನಂತರ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿ ಪ್ರಕರಣದ ನೋಟಿಸನ್ನು ಜಾರಿ ಮಾಡಿದ 90 ದಿವಸಗೊಳಗಾಗಿ ಪ್ರಕರಣವನ್ನು ವಿಲೇವಾರಿ ಮಾಡಬೇಕಾಗುತ್ತದೆ. ಈ ರೀತಿಯ ಅರ್ಜಿಯನ್ನು ನಿರ್ಲಕ್ಷ್ಯಕ್ಕೊಳಗಾದ ಹಿರಿಯ ನಾಗರಿಕ ಅಥವಾ ತಂದೆ-ತಾಯಿ ತಮ್ಮ ಮಕ್ಕಳ ಅಥವಾ ಸಂಬಂಧಿಕರ ಪೈಕಿ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳ ವಿರುದ್ಧ ದಾಖಲಿಸಬಹುದು. ಇಂತಹ ಪ್ರಕರಣದಲ್ಲಿ ನಿರ್ಲಕ್ಷಿತ ಹಿರಿಯ ನಾಗರಿಕರ ಅಥವಾ ತಂದೆ-ತಾಯಿಯ ಪಾಲನೆ ಪೋಷಣೆಗಾಗಿ ಮತ್ತು ಇತರ ವೆಚ್ಚಗಳಿಗಾಗಿ ಹಣ ಪಾವತಿ ಮಾಡಬೇಕೆನ್ನುವ ಆದೇಶ ಪಡೆದ ಮಕ್ಕಳು ಅಥವಾ ಸಂಬಂಧಿಕರು ಸಕಾರಣವಿಲ್ಲದೆ ಆದೇಶವನ್ನು ಪರಿಪಾಲಿಸದಿದ್ದಲ್ಲಿ ಅವರ ವಿರುದ್ಧ ವಾರಂಟನ್ನು ಹೊರಡಿಸುವ ಮತ್ತು ಹಣ ವಸೂಲಾತಿಗಾಗಿ ಆದೇಶ ಪಡೆದ ಮಕ್ಕಳನ್ನು ಅಥವಾ ಸಂಬಂಧಿಕರನ್ನು ಶಿಕ್ಷೆಗೆ ಗುರಿಪಡಿಸುವ ಅಧಿಕಾರವನ್ನು ಆದೇಶ ಮಾಡಿರುವ ನ್ಯಾಯಾಧಿಕರಣ ಹೊಂದಿರುತ್ತದೆ. ರಾಜ್ಯ ಸರಕಾರದ ಆಯಾಯ ಉಪ ವಿಭಾಗದ ಉಪವಿಭಾಗಾಧಿಕಾರಿ ಅಥವಾ ಅವರ ದರ್ಜೆಗಿಂತ ಮೇಲ್ಪಟ್ಟ ದರ್ಜೆಯ ಸರಕಾರಿ ಅಧಿಕಾರಿಯು ನ್ಯಾಯಾಧಿಕರಣದ ಅಧ್ಯಕ್ಷರಾಗಿರುವರು. ನ್ಯಾಯಾಧಿಕರಣದ ಆದೇಶದಿಂದ ಬಾಧಿತರಾಗುವ ಯಾವುದೇ ವ್ಯಕ್ತಿ ಆದೇಶದ ದಿನಾಂಕದಿಂದ 60 ದಿವಸದೊಳಗಾಗಿ ಅಪೀಲು ಸಲ್ಲಿಸುವ ಅವಕಾಶವನ್ನು ಹೊಂದಿರುತ್ತಾರೆ. ಇಂತಹ ಅಪೀಲು ನ್ಯಾಯಾಧಿಕರಣವನ್ನು ರಾಜ್ಯದ ಪ್ರತಿಯೊಂದು ಜಿಲ್ಲೆಯು ಹೊಂದಿರುತ್ತದೆ.

ಕೆಲವು ಸಂದರ್ಭದಲ್ಲಿ ವಯಸ್ಸಾದ ಹಿರಿಯ ನಾಗರಿಕ ವ್ಯಕ್ತಿಗಳು ಮೋಸಕ್ಕೆ ಬಲಿಯಾಗಿ ತಮ್ಮ ಆಸ್ತಿಯನ್ನು ಕಳಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ರಕ್ಷಣೆ ನೀಡುವುದು ಸರಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಮಾತ್ರವಲ್ಲದೆ ಮೋಸದಿಂದ ಪರಾಭಾರೆಯಾಗಿರುವ ವ್ಯವಹಾರವನ್ನು ರದ್ದುಪಡಿಸುವ ಅಧಿಕಾರವನ್ನು ಸಹಾ ನ್ಯಾಯಾಧಿಕರಣ ಹೊಂದಿರುತ್ತದೆ. ವಯಸ್ಸಾದ ದಂಪತಿಗಳು ಮತ್ತು ಒಂಟಿಯಾಗಿ ಜೀವಿಸುತ್ತಿರುವ ವೃದ್ಧರ ಮೇಲೆ ಪೋಲೀಸರು ಸ್ನೇಹಮಯ ನಿಗಾ ಇಡುವಂತೆ ಸರಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿರುತ್ತದೆ.









































error: Content is protected !!
Scroll to Top